ಮರು ಬಿಡುಗಡೆ ಆಗುತ್ತಿದೆ ಮಾಸ್ ಹಿರೋಗಳ ಸರಳ, ಸುಂದರ ಸಿನಿಮಾ
Seethamma Vakitlo Sirimalle Chettu: ಇಬ್ಬರು ಸೂಪರ್ ಸ್ಟಾರ್ಗಳು, ಪಕ್ಕಾ ಮಾಸ್ ಹೀರೋಗಳನ್ನು ಹಾಕಿಕೊಂಡು, ಒಂದೇ ಒಂದು ಫೈಟ್ ಸಹ ಇಲ್ಲದೆ, ವಿಲನ್ ಸಹ ಇಲ್ಲದೆ ಮಾಡಿದ ಸಿನಿಮಾ ಹೇಗಿರಬಹುದು? ಪಕ್ಕಾ ಫ್ಲಾಪ್ ಅಂದುಕೊಂಡರೆ ನಿಮ್ಮ ಊಹೆ ಸುಳ್ಳು. ಬ್ಲಾಕ್ ಬಸ್ಟರ್ ಆದ ಈ ಸಿನಿಮಾ ಇದೀಗ ಮರು ಬಿಡುಗಡೆ ಆಗುತ್ತಿದೆ.

ಇಬ್ಬರು ಸ್ಟಾರ್ ಹೀರೋಗಳು, ಇಬ್ಬರೂ ಸಹ ಮಾಸ್ ಸಿನಿಮಾಗಳಿಂದ ಖ್ಯಾತಿ ಗಳಿಸಿದವರು. ನಟಿಸಿದ ಪ್ರತಿ ಸಿನಿಮಾದಲ್ಲಿಯೂ ಭರ್ಜರಿ ಫೈಟ್, ಲವ್, ರೊಮ್ಯಾನ್ಸ್ ಎಲ್ಲ ಮಸಾಲೆ ಅಂಶಗಳು ಇದ್ದೇ ಇದ್ದವು. ಆದರೆ ಇಂಥಹಾ ಇಬ್ಬರು ಮಾಸ್ ಹೀರೋಗಳನ್ನು ಒಟ್ಟಿಗೆ ಹಾಕಿಕೊಂಡು ಮಾಡಿದ ಸಿನಿಮಾದಲ್ಲಿ ಒಂದೇ ಒಂದು ಫೈಟ್ ಇಲ್ಲ, ಐಟಂ ಹಾಡುಗಳಿಲ್ಲ, ಅಷ್ಟೇ ಏಕೆ ವಿಲನ್ ಸಹ ಇಲ್ಲ. ಹಾಗಿದ್ದರೆ ಆ ಸಿನಿಮಾ ಪಕ್ಕಾ ಫ್ಲಾಪ್ ಆಗಿರಬೇಕು ಎಂದುಕೊಂಡಿದ್ದೀರಾದರೆ ನಿಮ್ಮ ಊಹೆ ತಪ್ಪು. ಸಿನಿಮಾ ಬ್ಲಾಕ್ ಬಸ್ಟರ್. ಆ ಸಿನಿಮಾದ ಹೆಸರು ‘ಸೀತಮ್ಮ ವಾಕಿಟ್ಲೊ ಸಿರಿಮಲ್ಲೆ ಚಟ್ಟು’.
ತೆಲುಗು ಚಿತ್ರರಂಗದ ಅತ್ಯುತ್ತಮ ಕೌಟುಂಬಿಕ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿರುವ ‘ಸೀತಮ್ಮ ವಾಕಿಟ್ಲೊ ಸಿರಿಮಲ್ಲೆ ಚಟ್ಟು’ ಸಿನಿಮಾಕ್ಕೆ ಕಲ್ಟ್ ಫಾಲೋವಿಂಗ್ ಇದೆ. ಈ ಸಿನಿಮಾ ಟಿವಿಯಲ್ಲಿ ಬಂದರೆ ಮಹಿಳೆಯರು ಮಾತ್ರವಲ್ಲ ಯುವಕರು ಸಹ ಕದಲದೆ ಕೂತು ವೀಕ್ಷಿಸುತ್ತಾರೆ. ಇಂಥಹಾ ಸಿನಿಮಾ ಇದೀಗ ಮರು ಬಿಡುಗಡೆ ಆಗುತ್ತಿದೆ. ಹಿಂಸೆ, ಅಬ್ಬರದ ಸಿನಿಮಾಗಳೇ ತುಂಬಿರುವ ಚಿತ್ರಮಂದಿರದಲ್ಲಿ ನಗು, ಆಹ್ಲಾದಕರ ಭಾವ ತುಂಬಲು ಬರುತ್ತಿದೆ.
2013 ರ ಸಂಕ್ರಾಂತಿಗೆ ಅಂದರೆ ಜನವರಿ 13 ರಂದು ಬಿಡುಗಡೆ ಆಗಿದ್ದ ಈ ಸಿನಿಮಾ ಆಗ ಬ್ಲಾಕ್ ಬಸ್ಟರ್ ಆಗಿತ್ತು. ಹಳ್ಳಿಗಳಿಂದ ಜನ ಟ್ರ್ಯಾಕ್ಟರ್ಗಳಲ್ಲಿ ಪಟ್ಟಣಗಳಿಗೆ ಬಂದು ಸಿನಿಮಾ ನೋಡಿಕೊಂಡು ಹೋಗಿದ್ದರು. ಕೌಟುಂಬಿಕ ಮೌಲ್ಯಗಳು, ಸಹೋದರರ ನಡುವಿನ ಬಾಂಧವ್ಯ, ಪಟ್ಟಣ ಮತ್ತು ಹಳ್ಳಿ ಜನರ ನಡುವಿನ ಕಂದಕ, ನಗುವಿನ ಅವಶ್ಯಕತೆ ಇನ್ನಿತರೆ ವಿಷಯಗಳನ್ನು ಬಹಳ ಸರಳವಾಗಿ ಸಿನಿಮಾದಲ್ಲಿ ಹೇಳಲಾಗಿತ್ತು. ಇದೀಗ 12 ವರ್ಷಗಳ ಬಳಿಕ ಮತ್ತೊಮ್ಮೆ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.
ಇದನ್ನೂ ಓದಿ:SS Rajamouli: ಈ ಎರಡು ಹಾಡುಗಳನ್ನು ರಾಜಮೌಳಿ ಮತ್ತೆ ಮತ್ತೆ ನೋಡ್ತಾರಂತೆ
2025ರ ಮಾರ್ಚ್ 7 ರಂದು ‘ಸೀತಮ್ಮ ವಾಕಿಟ್ಲೊ ಸಿರಿಮಲ್ಲೆ ಚಟ್ಟು’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ನಿರ್ಮಾಣ ಮಾಡಿದ್ದ ಈ ಸಿನಿಮಾ ಇದೀಗ ಮರು ಬಿಡುಗಡೆ ಆಗುತ್ತಿದ್ದು, ಮತ್ತೊಮ್ಮೆ ಮ್ಯಾಜಿಕ್ ಅನ್ನು ಅನುಭವಿಸಲು ಸಿದ್ದರಾಗುವಂತೆ ಪ್ರೇಕ್ಷಕರಲ್ಲಿ ನಿರ್ಮಾಣ ಸಂಸ್ಥೆ ಮನವಿ ಮಾಡಿದೆ.
ಸಿನಿಮಾದಲ್ಲಿ ಮಹೇಶ್ ಬಾಬು ಮತ್ತು ವೆಂಕಟೇಶ್ ಸಹೋದರರಾಗಿ ನಟಿಸಿದ್ದರೆ, ಅವರ ತಂದೆಯ ಪಾತ್ರದಲ್ಲಿ ಪ್ರಕಾಶ್ ರೈ, ನಾಯಕಿಯರಾಗಿ ಸಮಂತಾ ಮತ್ತು ಅಂಜಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಶ್ರೀಕಾಂತ್ ಅಡಾಲ, ನಿರ್ಮಾಣ ಮಾಡಿರುವುದು ದಿಲ್ ರಾಜು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ