‘ಶಾಕುಂತಲಂ’ ಸಿನಿಮಾದ ಮೊದಲ ದಿನದ ಗಳಿಕೆ ಬಗ್ಗೆ ಸಿಕ್ತು ಲೆಕ್ಕ; ಸಮಂತಾಗೆ ಗೆಲುವೋ, ಸೋಲೋ?

Shakuntalam Movie Collection: ‘ಶಾಕುಂತಲಂ’ ಸಿನಿಮಾಗೆ ಮೊದಲ ದಿನ ಹೇಳಿಕೊಳ್ಳುವಷ್ಟು ಜನರು ಬಂದಿಲ್ಲ. ಪೌರಾಣಿಕ ಕಥೆ ಆಗಿರುವುದರಿಂದ ಒಂದು ವರ್ಗದ ಜನರಿಗೆ ಈ ಸಿನಿಮಾ ಇಷ್ಟವಾಗಿಲ್ಲ.

 ‘ಶಾಕುಂತಲಂ’ ಸಿನಿಮಾದ ಮೊದಲ ದಿನದ ಗಳಿಕೆ ಬಗ್ಗೆ ಸಿಕ್ತು ಲೆಕ್ಕ; ಸಮಂತಾಗೆ ಗೆಲುವೋ, ಸೋಲೋ?
ಸಮಂತಾ ರುತ್ ಪ್ರಭು

Updated on: Apr 15, 2023 | 10:29 AM

ನಟಿ ಸಮಂತಾ ಅವರ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ತೊಂದರೆಗಳು ಎದುರಾದವು. ನಾಗ ಚೈತನ್ಯ ಅವರು ಸಮಂತಾನಿಂದ ದೂರ ಆದರು. ಸಮಂತಾಗೆ Myositis ಹೆಸರಿನ ಕಾಯಿಲೆ ಕಾಣಿಸಿಕೊಂಡಿತು. ಇದರಿಂದ ಅವರು ಸಾಕಷ್ಟು ನೋವು ಅನುಭವಿಸಿದರು. ಇದು ಸಮಂತಾ ವೃತ್ತಿಜೀವನದ ಮೇಲೂ ಪರಿಣಾಮ ಬೀರಿತು. ಅದೇನೇ ಇದ್ದರೂ ಸಮಂತಾ (Samantha) ಸಿನಿಮಾಗಳ ಮೂಲಕ ಗೆಲ್ಲುತ್ತಿದ್ದಾರೆ. ‘ಯಶೋದ’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಗೆದ್ದು ಬೀಗಿತ್ತು. ಈಗ ‘ಶಾಕುಂತಲಂ’ ಸಿನಿಮಾ (Shakuntalam Movie) ಕೂಡ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.

ಸಂಸ್ಕೃತದ ನಾಟಕ ‘ಅಭಿಜ್ಞಾನ ಶಾಕುಂತಲಂ’ ಆಧರಿಸಿ ‘ಶಾಕುಂತಲಂ’ ಸಿನಿಮಾ ಸಿದ್ಧಗೊಂಡಿದೆ. ಈ ಸಿನಿಮಾದಲ್ಲಿ ಶಾಕುಂತಲೆಯಾಗಿ ಸಮಂತಾ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಅವರ ಪಾತ್ರ ಅಭಿಮಾನಿಗಳಿಗೆ ಇಷ್ಟ ಆಗಿದೆ. ಶಾಕುಂತಲೆ ಹಾಗೂ ರಾಜ ದುಶ್ಯಂತನ ಮಧ್ಯೆ ಪ್ರೀತಿ ಹುಟ್ಟುತ್ತದೆ. ಇದರ ಸುತ್ತ ಸಿನಿಮಾದ ಕಥೆ ಸಾಗುತ್ತದೆ. ಈ ಚಿತ್ರವನ್ನು ಗುಣಶೇಖರ್ ಅವರು ನಿರ್ದೇಶನ ಮಾಡಿದ್ದಾರೆ. ನೀಲಿಮಾ ಗುಣ ಮತ್ತು ದಿಲ್ ರಾಜು ಅವರು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ರಿಲೀಸ್ ದಿನಾಂಕ ಮುಂದೂಡಲ್ಪಡುತ್ತಲೇ ಇತ್ತು. ಈಗ ಚಿತ್ರ ತೆರೆಗೆ ಬಂದಿದೆ. ಸಿನಿಮಾ ಮೊದಲ ದಿನ 5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

‘ಶಾಕುಂತಲಂ’ ಸಿನಿಮಾಗೆ ಮೊದಲ ದಿನ ಹೇಳಿಕೊಳ್ಳುವಷ್ಟು ಜನರು ಬಂದಿಲ್ಲ. ಪೌರಾಣಿಕ ಕಥೆ ಆಗಿರುವುದರಿಂದ ಒಂದು ವರ್ಗದ ಜನರಿಗೆ ಈ ಸಿನಿಮಾ ಇಷ್ಟವಾಗಿಲ್ಲ. ಕೆಲವರಿಂದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಎಲ್ಲಾ ಕಾರಣದಿಂದ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಸಿನಿಮಾ ಒಳ್ಳೆಯ ಗಳಿಕೆ ಮಾಡುವ ನಿರೀಕ್ಷೆ ಇದೆ. ಇಂದು (ಏಪ್ರಿಲ್​ 15) ಹಾಗೂ ನಾಳೆ (ಏಪ್ರಿಲ್ 16) ಸಿನಿಮಾ ಭರ್ಜರಿ ಗಳಿಕೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಸಮಂತಾ ನಟನೆಯ‘ಯಶೋದಾ’ ಚಿತ್ರಕ್ಕೆ ಕೋರ್ಟ್​​ನಿಂದ ತಡೆ; ಒಟಿಟಿ ರಿಲೀಸ್​​ಗೆ ಸಂಕಷ್ಟ

‘ಯಶೋದ’ ಸಿನಿಮಾ ಕೂಡ ಮೊದಲ ದಿನ ಸಾಧಾರಣ ಗಳಿಕೆ ಮಾಡಿತ್ತು. ಆದರೆ, ಮುಂದಿನ ದಿನಗಳಲ್ಲಿ ಚಿತ್ರ ಒಳ್ಳೆಯ ಗಳಿಕೆ ಮಾಡಿತ್ತು. ‘ಶಾಕುಂತಲಂ’ ಸಿನಿಮಾ ಕೂಡ ಇದೇ ರೀತಿ ಗಳಿಕೆ ಮಾಡಲಿದೆ ಎನ್ನುವ ನಂಬಿಕೆ ಚಿತ್ರತಂಡದ್ದು. ಸಿನಿಮಾ ನೋಡಿದ ಅನೇಕರು ಸಮಂತಾ ನಟನೆಯನ್ನು ಹೊಗಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:28 am, Sat, 15 April 23