ಹೊಸ ಪ್ರತಿಭೆಗಳ ಜತೆ ಅನುಭವಿಗಳ ಪೈಪೋಟಿ; ಈ ವಾರ ರಿಲೀಸ್ ಆಗುತ್ತಿರುವ ಸಿನಿಮಾಗಳಿವು
‘ಲವ್ ಬರ್ಡ್ಸ್’ ಹಾಗೂ ಹಿಂದಿಯ ‘ಶಹಜಾದ’ ಸಿನಿಮಾಗಳು ಕುತೂಹಲ ಮೂಡಿಸಿವೆ. ಈ ವಾರ ತೆರೆಕಾಣುತ್ತಿರುವ ಸಿನಿಮಾಗಳ ವಿವರ ಇಲ್ಲಿದೆ.
ಶುಕ್ರವಾರ ಬಂತು ಎಂದರೆ ಸಿನಿಪ್ರಿಯರು ಅಲರ್ಟ್ ಆಗುತ್ತಾರೆ. ಯಾವ ಸಿನಿಮಾಗಳು ತೆರೆಗೆ ಬರುತ್ತಿವೆ, ಆ ಪೈಕಿ ಯಾವ ಸಿನಿಮಾ ನೋಡಬಹುದು ಎಂದು ಕುತೂಹಲದಿಂದ ಕಾಯುತ್ತಿರುತ್ತಾರೆ. ಈ ವಾರ ಕನ್ನಡ, ಹಿಂದಿಯಲ್ಲಿ ಹಲವು ಸಿನಿಮಾಗಳು ತೆರೆಗೆ ಬರುತ್ತಿವೆ. ಈ ಪೈಕಿ ‘ಲವ್ ಬರ್ಡ್ಸ್’ (Love Birds Movie) ಹಾಗೂ ಹಿಂದಿಯ ‘ಶಹಜಾದ’ ಸಿನಿಮಾಗಳು ಕುತೂಹಲ ಮೂಡಿಸಿವೆ. ಈ ವಾರ ತೆರೆಕಾಣುತ್ತಿರುವ ಸಿನಿಮಾಗಳ ವಿವರ ಇಲ್ಲಿದೆ.
‘ಲವ್ ಬರ್ಡ್ಸ್’
ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರದ್ದು ಹಿಟ್ ಕಾಂಬಿನೇಷನ್. ‘ಲವ್ ಮಾಕ್ಟೇಲ್’ ‘ಲವ್ ಮಾಕ್ಟೇಲ್ 2’ ಸಿನಿಮಾಗಳು ಸೂಪರ್ ಹಿಟ್ ಆದವು. ಈಗ ಇವರು ‘ಲವ್ ಬರ್ಡ್ಸ್’ ಚಿತ್ರದಲ್ಲಿ ಗಂಡ-ಹೆಂಡತಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಫೆ.17ಕ್ಕೆ ರಿಲೀಸ್ ಆಗುತ್ತಿದೆ. ಈ ಚಿತ್ರದ ಟ್ರೇಲರ್ ಈಗಾಗಲೇ ಸದ್ದು ಮಾಡಿದೆ.
ಎಸ್ಎಲ್ವಿ-ಸಿರಿ ಲಂಬೋದರ ವಿವಾಹ
ಇದು ಹೊಸಬರ ಸಿನಿಮಾ. ಸೌರಭ್ ಕುಲ್ಕರ್ಣಿ ನಿರ್ದೇಶನದ ಈ ಸಿನಿಮಾದಲ್ಲಿ ಅಂಜನ್ ಭಾರದ್ವಾಜ್, ರಾಜೇಶ್ ನಟರಂಗ ಮೊದಲಾದವರು ನಟಿಸಿದ್ದಾರೆ. ಈ ಚಿತ್ರ ಕೂಡ ಸ್ಪರ್ಧೆಗೆ ಇಳಿದಿದೆ.
ಖೆಯೊಸ್
ನಟ ‘ಸುಪ್ರೀಂ ಹೀರೋ’ ಶಶಿಕುಮಾರ್ ಅವರು ಇತ್ತೀಚೆಗೆ ಬಣ್ಣ ಹಚ್ಚೋದು ಅಪರೂಪ ಆಗಿದೆ. ಅವರು ‘ಖೆಯೊಸ್’ ಚಿತ್ರದಲ್ಲಿ ನಟಿಸಿದ್ದಾರೆ. ಇದು ಅವರ ಮಗ ಅಕ್ಷಿತ್ ಶಶಿಕುಮಾರ್ ಅವರ ಎರಡನೇ ಸಿನಿಮಾ. ಮನುಷ್ಯನ ಮನಸ್ಸಿನಲ್ಲಿ ಆಗುವ ಗೊಂದಲದ ಬಗ್ಗೆ ಹೇಳುವ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ ‘ಖೆಯೊಸ್’. ಅಕ್ಷಿತ್ ಶಶಿಕುಮಾರ್ ಅವರು ಹೀರೋ ಆಗಿ ನಟಿಸಿದ್ದು ಅವರಿಗೆ ಜೋಡಿಯಾಗಿ ಖ್ಯಾತ ನಟಿ ಅದಿತಿ ಪ್ರಭುದೇವ ಬಣ್ಣ ಹಚ್ಚಿದ್ದಾರೆ. ಈ ಕಾರಣದಿಂದ ಸಿನಿಮಾ ನಿರೀಕ್ಷೆ ಹುಟ್ಟಿಸಿದೆ.
ಶಹಜಾದ
ಅಲ್ಲು ಅರ್ಜುನ್ ನಟನೆಯ ‘ಅಲ ವೈಕುಂಠಪುರಮುಲೋ’ ಸಿನಿಮಾ ಹಿಂದಿಗೆ ‘ಶಹಜಾದ’ ಆಗಿ ರಿಮೇಕ್ ಆಗಿದೆ. ಕಾರ್ತಿಕ್ ಆರ್ಯನ್ ಹಾಗೂ ಕೃತಿ ಸನೋನ್ ಈ ಚಿತ್ರದಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ತ್ರಿವಿಕ್ರಂ ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳಿದ್ದ ಈ ಚಿತ್ರಕ್ಕೆ ಹಿಂದಿಯಲ್ಲಿ ರೋಹಿತ್ ಧವನ್ ನಿರ್ದೇಶನ ಮಾಡಿದ್ದಾರೆ. ಫೆ.17ರಂದು ಸಿನಿಮಾ ಸ್ಪರ್ಧೆಗೆ ಇಳಿಯುತ್ತಿದೆ. ‘ಪಠಾಣ್’ ಚಿತ್ರದ ಅಬ್ಬರ ಕಡಿಮೆ ಆಗಿರುವುದರಿಂದ ‘ಶಹಜಾದ’ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.
ಇದಲ್ಲದೆ ಕನ್ನಡದಲ್ಲಿ, ‘ಒಂದೊಳ್ಳೆ ಲವ್ ಸ್ಟೋರಿ’, ‘ದೊಡ್ಡಹಟ್ಟಿ ಬೋರೇಗೌಡ’, ‘ಬರೀ 10% ಬಡ್ಡಿ’, ‘ಸಕೂಚಿ’ ಹಿಂದಿಯಲ್ಲಿ ‘ಮೈ ರಾಜ್ ಕಪೂರ್ ಹೋ ಗಯಾ’, ಮಲಯಾಳಂನಲ್ಲಿ ‘ಡಿಯರ್ ವಾಪ್ಪಿ’ ಮೊದಲಾದ ಸಿನಿಮಾಗಳು ರಿಲೀಸ್ ಆಗುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ