
ನಟಿ ಸಮಂತಾ ಋತ್ ಪ್ರಭು (Samantha Ruth Prabhu) ಇತ್ತೀಚೆಗಷ್ಟೆ ನಿರ್ದೇಶಕ, ನಿರ್ಮಾಪಕ ರಾಜ್ ನಿಧಿಮೋರು ಅವರನ್ನು ವಿವಾಹವಾಗಿದ್ದಾರೆ. ಇಬ್ಬರಿಗೂ ಇದು ಎರಡನೇ ಮದುವೆ ಆಗಿದ್ದು ಕೊಯಮತ್ತೂರಿನ ಇಶಾ ಯೋಗ ಸೆಂಟರ್ನಲ್ಲಿ ಸರಳವಾಗಿ ವಿವಾಹ ಸಮಾರಂಭ ನಡೆದಿದೆ. ಈ ವಿವಾಹ ಕಾರ್ಯಕ್ರಮದಲ್ಲಿ ಕೇವಲ 25 ಮಂದಿಯಷ್ಟೆ ಪಾಲ್ಗೊಂಡಿದ್ದರಂತೆ. ಸಮಂತಾ ಮತ್ತು ರಾಜ್ ಕುಟುಂಬದವರು ಮತ್ತು ಇಬ್ಬರಿಗೂ ಅತ್ಯಾಪ್ತವಾದ ಕೆಲವು ಗೆಳೆಯರಷ್ಟೆ ಸಮಾರಂಭದಲ್ಲಿ ಭಾಗಿ ಆಗಿದ್ದರು. ಅದರಲ್ಲಿ ಸಮಂತಾರ ಆಪ್ತ ಗೆಳತಿ ಫ್ಯಾಷನ್ ಡಿಸೈನರ್ ಶಿಲ್ಪಾ ರೆಡ್ಡಿ ಸಹ ಒಬ್ಬರು. ಇದೀಗ ಶಿಲ್ಪಾ ರೆಡ್ಡಿ, ಮದುವೆ ನಡೆದಿದ್ದು ಹೇಗೆಂದು ವಿವರಿಸಿದ್ದಾರೆ.
ಸಮಂತಾ ಹಲವು ವರ್ಷಗಳಿಂದಲೂ ಲಿಂಗ ಭೈರವಿ ದೇವಿ ಆರಾಧಕಿ. ಅಲ್ಲದೆ ಇಬ್ಬರಿಗೂ ಸಹ ಸರಳವಾಗಿ ಮದುವೆ ಆಗುವ ಇಷ್ಟವಿತ್ತು. ಅದ್ಧೂರಿ ಮದುವೆಗಳಲ್ಲಿ ಶಬ್ದ, ಅಬ್ಬರ ಇರುತ್ತದೆ ಅಲ್ಲಿ, ಅಂಥಹಾ ಮದುವೆಗಳಲ್ಲಿ ‘ಮದುವೆ ಶಾಸ್ತ್ರ’ಕ್ಕೆ ಪ್ರಾಮುಖ್ಯತೆ ಕಡಿಮೆ. ಆದರೆ ಸಮಂತಾ ಹಾಗೂ ರಾಜ್ ಅವರ ಮದುವೆ ನಿಜ ಅರ್ಥದಲ್ಲಿ ವಿವಾಹದಂತೆ ಇತ್ತು. ಬಹಳ ಶಾಂತ ರೀತಿಯಲ್ಲಿ, ಆಪ್ತ ರೀತಿಯಲ್ಲಿ, ಶಾಸ್ತ್ರೋಕ್ತವಾಗಿ ಮದುವೆ ನಡೆಯಿತು ಎಂದಿದ್ದಾರೆ ಶಿಲ್ಪಾ ರೆಡ್ಡಿ.
ಬಹಳ ಕಡಿಮೆ ಜನರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಲಿಂಗ ಭೈರವಿ ದೇವಿಯ ಮೂರ್ತಿಯ ಮುಂದೆ ವಧು-ವರರ ಕೂತು ವಿವಾಹ ಮಾಡಿಕೊಂಡರು. ಮೊದಲಿಗೆ ಭೂತ ಶುದ್ಧಿ ಕಾರ್ಯ ನಡೆಯಿತು. ಅಸಲಿಗೆ ಇದೊಂದು ಅದ್ಭುತವಾದ ಪದ್ಧತಿ, ನಾನು ಪ್ರತಿದಿನವೂ ಅದನ್ನು ಮಾಡುತ್ತೇನೆ, ಸಮಂತಾ ಸಹ ಮಾಡುತ್ತಾರೆ. ಅದನ್ನು ಸದ್ಗುರು ನಮಗೆ ಹೇಳಿಕೊಟ್ಟಿದ್ದಾರೆ. ಮಾನವನ ದೇಹ ಆಗಿರುವುದೇ ಪಂಚಭೂತಗಳಿಂದ ಅವುಗಳನ್ನು ಶುದ್ಧೀಕರಿಸುವ ಒಂದು ವಿಧಾನ ಈ ಭೂತ ಶುದ್ಧಿ ಪದ್ಧತಿ’ ಎಂದು ಶಿಲ್ಪಾ ರೆಡ್ಡಿ ವಿವರಿಸಿದರು.
ಇದನ್ನೂ ಓದಿ:ಕಣ್ಮನ ಸೆಳೆಯುತ್ತಿದೆ ಸಮಂತಾ ರುತ್ ಪ್ರಭು ಮದುವೆ ಸೀರೆ
ಸಮಂತಾ ಮದುವೆಯಲ್ಲಿ ಮಾಂಗಲ್ಯ ಧಾರಣೆ ಇರಲಿಲ್ಲ, ಬದಲಿಗೆ ದೇವಿ ಪೆಂಡೆಂಟ್ ಒಂದನ್ನು ಕೊರಳಿಗೆ ಕಟ್ಟಲಾಯ್ತು. ಆದರೆ ಕನ್ಯಾದಾನ, ಸಪ್ತಪದಿ ಇದೆಲ್ಲ ಇರಲಿಲ್ಲ. ಆದರೆ ಅರಿಶಿಣ, ಕುಂಕುಮ ಇಡುವುದು ಎಲ್ಲವೂ ಇತ್ತು. ವಧು-ವರರ ತೋರ್ಬೆಳುಗಳಿಗೆ ಒಂದು ದಾರವನ್ನು ಕಟ್ಟಿ ಒಂದು ಶಾಸ್ತ್ರ ಮಾಡಲಾಯ್ತು. ಅದೆಲ್ಲ ನೋಡುವಾಗ ಅಲ್ಲೇನೊ ಒಂದು ಶಕ್ತಿಯ ಸಂಚಯ ಆಗುತ್ತಿರುವಂತೆ ನನಗೆ ಭಾಸವಾಯ್ತು. ಆ ಇಬ್ಬರೂ ಶಿವ ಮತ್ತು ಶಕ್ತಿಯಂತೆ ನನಗೆ ಕಂಡರು. ಇಡೀ ಕಾರ್ಯದಲ್ಲಿ ಮೈಕುಗಳನ್ನು ಬಳಸಲಿಲ್ಲ, ಯಾರೂ ಮಾತನಾಡಲಿಲ್ಲ, ಬಹಳ ಸರಳವಾಗಿ ಮಂತ್ರ ಘೋಷಗಳ ಜೊತೆಗೆ ಆ ಮದುವೆ ನಡೆಯಿತು. ಅಲ್ಲಿ ಒಂದು ರೀತಿಯ ಶಕ್ತಿ ಸಂಚಯವಾಯ್ತು, ನಾನೂ ಸೇರಿದಂತೆ ಏಳು ಮಹಿಳೆಯರು ಭಾವಪರವಶರಾಗಿ ಕಣ್ಣೀರು ಹಾಕಿಬಿಟ್ಟೆವು’ ಎಂದಿದ್ದಾರೆ ಶಿಲ್ಪಾ.
ಮದುವೆ ಮುಹೂರ್ತದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಿಲ್ಪಾ ರೆಡ್ಡಿ, ಸಾಧನೆ ಹಾದಿಯಲ್ಲಿರುವವರಿಗೆ ಜಾತಕ, ಮುಹೂರ್ತಗಳೊಟ್ಟಿಗೆ ಸಂಬಂಧವಿಲ್ಲ. ದೇವರ ಆರಾಧನೆಗೆ, ಒಳ್ಳೆಯ ಕೆಲಸಕ್ಕೆ ಯಾವ ಸಮಯ ಆದರೇನು ಎಂಬುದು ಸದ್ಗುರು ನಂಬಿಕೆ’ ಎಂದಿದ್ದಾರೆ. ಅಲ್ಲದೆ ಇಬ್ಬರ ಜೋಡಿಯ ಬಗ್ಗೆ ಮಾತನಾಡಿ, ‘ಸಮಂತಾ ಬಹಳ ಎನರ್ಜೆಟಿಕ್ ಆದ ಮಹಿಳೆ. ಹೋರಾಟಗಾರ್ತಿ, ಆರೋಗ್ಯ, ಖಾಸಗಿ ಜೀವನ, ಸಾಮಾಜಿಕವಾಗಿ ಎಲ್ಲೆಡೆ ಸೋತಿದ್ದಾಗ, ಮಾಡದ ತಪ್ಪಿಗೆ ನಿಂದನೆ ಅನುಭವಿಸುತ್ತಿದ್ದಾಗಲೂ ಸಹ ಸಮಂತಾ ಅದೆಲ್ಲದರ ವಿರುದ್ಧ ಹೋರಾಡಿ ಮತ್ತೆ ಮೊದಲಿನಂತಾಗಿದ್ದಾರೆ. ಅವರಿಗೆ ಆಧ್ಯಾತ್ಮದ ಬಗ್ಗೆ ಅಪಾರ ನಂಬಿಕೆ ಇದೆ. ಇನ್ನು ರಾಜ್ ಅವರದ್ದು ಅದ್ಭುತವಾದ ಕುಟುಂಬ, ಅವರು ಹೆಚ್ಚು ಮಾತನಾಡುವವರಲ್ಲ. ಇಬ್ಬರ ನಡುವೆ ಕೆಮಿಸ್ಟ್ರಿ ಬಹಳ ಚೆನ್ನಾಗಿದೆ’ ಎಂದಿದ್ದಾರೆ ಶಿಲ್ಪಾ ರೆಡ್ಡಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ