ನೀಲಿ ಸಿನಿಮಾಗಳನ್ನು ಮಾಡಿ ಅದನ್ನು ಬೇರೆಬೇರೆ ಆ್ಯಪ್ಗಳಲ್ಲಿ ಅಪ್ಲೋಡ್ ಮಾಡುತ್ತಿದ್ದ ಆರೋಪದ ಮೇಲೆ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಸೋಮವಾರ (ಜುಲೈ 19) ಬಂಧಿಸಿದ್ದರು. ಈಗ ಅವರನ್ನು ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಎದುರು ಹಾಜರು ಪಡಿಸಲಾಗಿದ್ದು, ಜುಲೈ 23ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಲಯ ಆದೇಶ ಹೊರಡಿಸಿದೆ.
‘ಫೆಬ್ರವರಿ 2021ರಂದು ಕ್ರೈಮ್ ಬ್ರ್ಯಾಂಚ್ನಲ್ಲಿ ಪ್ರಕರಣ ದಾಖಲಾಗಿತ್ತು. ನೀಲಿ ಸಿನಿಮಾಗಳನ್ನು ಚಿತ್ರೀಕರಣ ಮಾಡಿ, ಕೆಲ ಆ್ಯಪ್ಗಳ ಮೂಲಕ ಇದನ್ನು ಅಪ್ಲೋಡ್ ಮಾಡಲಾಗುತ್ತಿದೆ ಎನ್ನುವ ಮಾಹಿತಿ ನಮಗೆ ಲಭ್ಯವಾಗಿತ್ತು. ಇಂದು (ಜುಲೈ 19) ನಾವು ರಾಜ್ ಕುಂದ್ರಾ ಅವರನ್ನು ಬಂಧಿಸಿದ್ದೇವೆ. ಇಡೀ ಪ್ರಕರಣದ ರುವಾರಿ ಅವರೇ ಆಗಿದ್ದಾರೆ. ತನಿಖೆ ಪ್ರಗತಿಯಲ್ಲಿದೆ. ತನಿಖೆ ಪೂರ್ಣಗೊಳ್ಳುವವರೆಗೂ ಏನನ್ನೂ ಹೇಳುವುದಿಲ್ಲ’ ಎಂದು ಮುಂಬೈ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದರು.
ಕೆಂಡ್ರಿಂಗ್ ಹೆಸರಿನ ಇಂಗ್ಲೆಂಡ್ ಮೂಲದ ಕಂಪನಿ ಮೇಲೆ ರಾಜ್ 10 ಕೋಟಿ ಹೂಡಿಕೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಉಮೇಶ್ ಎಂಬಾತನನ್ನು ಬಂಧಿಸಲಾಗಿದೆ. ಕುಂದ್ರಾ ಹಾಗೂ ಉಮೇಶ್ ನಡುವೆ ಒಪ್ಪಂದ ಇತ್ತು ಎನ್ನಲಾಗಿದೆ. ಈಗ ಪೊಲೀಸರು ಸೂಕ್ತ ದಾಖಲೆಗಳನ್ನು ನ್ಯಾಯಾಲಯದ ಎದುರು ಒದಗಿಸಿದ್ದಾರೆ. ಹೀಗಾಗಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್ಕುಂದ್ರಾ 2009ರಲ್ಲಿ ಮದುವೆ ಆದರು. ಇಬ್ಬರೂ ಸುಖ ಸಂಸಾರ ನಡೆಸುತ್ತಿದ್ದಾರೆ. ಹೀಗಿರುವಾಗಲೇ ಈ ಸುದ್ದಿ ಬರ ಸಿಡಿಲಿನಂತೆ ಬಂದಪ್ಪಳಿಸಿದ್ದು, ಅಭಿಮಾನಿಗಳು ಹಾಗೂ ಶಿಲ್ಪಾ ಶೆಟ್ಟಿ ಕುಟುಂಬಕ್ಕೆ ಇದು ಶಾಕ್ ನೀಡಿದೆ.
ಇದನ್ನೂ ಓದಿ: ಖ್ಯಾತ ನಟಿ ಶಿಲ್ಪಾ ಶೆಟ್ಟಿಗೆ ರಾಜ್ ಕುಂದ್ರಾ ಸಿಕ್ಕಿದ್ದು ಹೇಗೆ? ಆ ಬಗ್ಗೆ ರಾಜ್ನ ಮೊದಲ ಪತ್ನಿ ಕವಿತಾ ಏನೆಂದಿದ್ದರು?
Raj Kundra: ರಾಜ್ ಕುಂದ್ರಾ ಬಂಧನ; ಶಿಲ್ಪಾ ಶೆಟ್ಟಿ ಪತಿ ನಡೆಸುತ್ತಿದ್ದರು ಪಾರ್ನ್ ಸಿನಿಮಾ ಜಾಲ