
ಇತ್ತೀಚೆಗೆ ಬಾಲಿವುಡ್ ಚಿತ್ರರಂಗ ಮಂಕಾಗಿದೆ. 2023ರಲ್ಲಿ ‘ಪಠಾಣ್’, ‘ಜವಾನ್’ (Jawan Movie), ‘ಗದರ್ 2’ ರೀತಿಯ ಸಿನಿಮಾಗಳು ಗೆದ್ದಿದ್ದು ಬಿಟ್ಟರೆ ಮತ್ತಾವುದೇ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿಲ್ಲ. ಈ ವರ್ಷವಂತೂ ಸಿನಿಮಾಗಳು ಯಾವುದೇ ಬಿಸ್ನೆಸ್ ಮಾಡುತ್ತಿಲ್ಲ. ಅಕ್ಷಯ್ ಕುಮಾರ್, ಸಲ್ಮಾನ್ ಖಾನ್ ನಟನೆಯ ಸಿನಿಮಾಗಳು ಮಂಕಾಗಿವೆ. ಹೀಗೇಕೆ ಎನ್ನುವ ಪ್ರಶ್ನೆ ಮೂಡೋದು ಸಹಜ. ಇದಕ್ಕೆ ಬಾಲಿವುಡ್ ನಟ ಶ್ರೇಯಸ್ ತಲ್ಪಡೆ ಅವರು ಉತ್ತರ ಕಂಡು ಹಿಡಿದುಕೊಂಡಿದ್ದಾರೆ.
ಶ್ರೇಯಸ್ ತಲ್ಪಡೆ ಅವರು ಇತ್ತೀಚೆಗೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದರು. ಸಾವಿನ ದವಡೆಯಿಂದ ಅವರು ಹೊರಬಂದರು. ಅವರಿಗೆ ಹೃದಯಘಾತ ಆಗಿತ್ತು. ಈಗ ಅವರ ನಟನೆಯ ‘ಕರ್ತಂ ಭೂಗ್ತಂ’ ಚಿತ್ರ ಮೇ 17ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಅವರು ತಮ್ಮ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಹಲವು ಮಾಧ್ಯಮಗಳಿಗೆ ಅವರು ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಇಂಡಸ್ಟ್ರಿಯ ಇಬ್ಬರು ದೊಡ್ಡ ಸೂಪರ್‌ಸ್ಟಾರ್‌ಗಳ ಬಗ್ಗೆ ಮಾತನಾಡಿದ್ದಾರೆ. ಬಹಳ ದಿನಗಳಿಂದ ಸಿನಿಮಾ ಮಾಡುತ್ತಿರುವ ಸಲ್ಮಾನ್ ಖಾನ್ ಮತ್ತು ಅಕ್ಷಯ್ ಕುಮಾರ್ ಅವರ ಸಿನಿಮಾಗಳು ಈಗ ಏಕೆ ಸರಿಯಾಗಿ ಬಿಸ್ನೆಸ್ ಮಾಡುತ್ತಿಲ್ಲ ಎನ್ನುವ ಬಗ್ಗೆ ಮಾತನಾಡಿದ್ದಾರೆ.
‘ಜನರು ಸುಸ್ತಾಗಿದ್ದಾರೆ. ಸಿನಿಮಾ ಏನೆಂದು ಜನ ಈಗ ಟ್ರೈಲರ್ನಿಂದ ಗುರುತಿಸುತ್ತಾರೆ. ಸಿನಿಮಾಗೆ ಹೋಗಬೇಕೋ ಅಥವಾ ಬೇಡವೋ ಎಂಬುದನ್ನು ಟ್ರೇಲರ್ ನೋಡಿಯೇ ನಿರ್ಧರಿಸುತ್ತಾರೆ. ನೀವು ನಿಮ್ಮ ಸಿನಿಮಾಗಳನ್ನು ಎಷ್ಟೇ ಪ್ರಚಾರ ಮಾಡಿದರೂ ಸಿನಿಮಾದ ಟ್ರೇಲರ್ ಚೆನ್ನಾಗಿಲ್ಲದಿದ್ದರೆ ವರ್ಕೌಟ್ ಆಗುವುದಿಲ್ಲ. ಕೆಲವೊಮ್ಮೆ ಇದನ್ನು ಬಾಯಿ ಮಾತಿನ ಪ್ರಚಾರವೂ ಸಿನಿಮಾ ಯಶಸ್ಸನ್ನು ನಿರ್ಧರಿಸುತ್ತದೆ. ಸ್ಟಾರ್ ನಟಿಸಿದ ಮಾತ್ರಕ್ಕೆ ಎಲ್ಲಾ ಚಿತ್ರಗಳು ಗೆಲ್ಲಲು ಸಾಧ್ಯವಿಲ್ಲ. ಈ ಹಿಂದೆ ರಾಜೇಶ್ ಖನ್ನಾ ಅವರ ಎಲ್ಲಾ ಚಿತ್ರಗಳು ಹಿಟ್ ಆಗಿಲ್ಲ’ ಎಂದಿದ್ದಾರೆ ಶ್ರೇಯಸ್.
ಅಕ್ಷಯ್ ಕುಮಾರ್ ಅವರ ನಟನೆಯ ಹಲವು ಸಿನಿಮಾಗಳು ಸತತವಾಗಿ ಫ್ಲಾಪ್ ಎನಿಸಿಕೊಂಡಿವೆ. ಅವರು ಇತ್ತೀಚೆಗೆ ಗಂಭೀರ ವಿಚಾರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಕೂಡ ಸಿನಿಮಾ ಸೋಲಿಗೆ ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ. ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಸಿನಿಮಾ ಕೂಡ ಸಾಧಾರಣ ಹಿಟ್ ಎನಿಸಿಕೊಂಡಿದೆ. ಅಂದುಕೊಂಡ ಮಟ್ಟದಲ್ಲಿ ಈ ಚಿತ್ರ ಬಿಸ್ನೆಸ್ ಮಾಡಿಲ್ಲ.
ಇದನ್ನೂ ಓದಿ: ಶ್ರೇಯಸ್ ತಲ್ಪಡೆಗೆ ಹೃದಯಾಘಾತ ಆದ ಬಳಿಕ ಅಕ್ಷಯ್ ಕುಮಾರ್ ನಡೆದುಕೊಂಡ ರೀತಿ ಹೇಗಿತ್ತು?
ಶ್ರೇಯಸ್ ಅವರಿಗೆ ಇತ್ತೀಚೆಗೆ ಹೃದಯಾಘಾತ ಆಗಿತ್ತು. ಆ ಬಳಿಕ ಅವರು ಆಸ್ಪತ್ರೆ ಸೇರಿದ್ದರು. ಹೃದಯಾಘಾತ ಆಗಲು ಕೊವಿಡ್ ಲಸಿಕೆ ಕಾರಣ ಇರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.