ಕಮಲ್ ಹಾಸನ್ ಪುತ್ರಿ, ನಟಿ ಶ್ರುತಿ ಹಾಸನ್ (Shruti Haasan) ಅವರಿಗೆ ಸಖತ್ ಬೇಡಿಕೆ ಇದೆ. ಹಲವು ಭಾಷೆಯ ಚಿತ್ರಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆ ನಟಿಸುವ ಅವಕಾಶ ಅವರಿಗೆ ಸಿಗುತ್ತಿದೆ. ಚಿತ್ರರಂಗಕ್ಕೆ ಕಾಲಿಟ್ಟು ಹಲವು ವರ್ಷ ಕಳೆದರೂ ಅವರ ಚಾರ್ಮ್ ಕಮ್ಮಿ ಆಗಿಲ್ಲ. ಪ್ರಭಾಸ್ ನಟನೆಯ ‘ಸಲಾರ್’ ಚಿತ್ರಕ್ಕೆ ಅವರು ನಾಯಕಿ. ಆ ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿವೆ. ಅತ್ತ, ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ (Nandamuri Balakrishna) ನಟನೆಯ 107ನೇ ಸಿನಿಮಾದಲ್ಲೂ ಅವರು ಅಭಿನಯಿಸುತ್ತಿದ್ದಾರೆ. ಆ ಚಿತ್ರದಲ್ಲಿ ದುನಿಯಾ ವಿಜಯ್ (Duniya Vijay) ಅವರು ವಿಲನ್ ಪಾತ್ರ ಮಾಡುತ್ತಿರುವುದು ವಿಶೇಷ. ಈ ಸಿನಿಮಾದ ಶೂಟಿಂಗ್ನಲ್ಲಿ ಶ್ರುತಿ ಹಾಸನ್ ಅವರು ಈಗ ಪಾಲ್ಗೊಂಡಿದ್ದಾರೆ.
ಈ ಸಿನಿಮಾಗೆ ತಾತ್ಕಾಲಿಕವಾಗಿ ‘ಎನ್ಬಿಕೆ 107’ ಎಂದು ಶೀರ್ಷಿಕೆ ಇಡಲಾಗಿದೆ. ಈಗಾಗಲೇ ಬಂದಿರುವ ಟೀಸರ್ ನೋಡಿ ನಂದಮೂರಿ ಬಾಲಕೃಷ್ಣ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅವರ ಎದುರು ದುನಿಯಾ ವಿಜಯ್ ಖಳನಾಯಕನಾಗಿ ಅಬ್ಬರಿಸಲಿರುವುದರಿಂದ ಸಿನಿಮಾ ಮೇಲಿನ ಕ್ರೇಜ್ ಹೆಚ್ಚಿದೆ. ಬಹಳ ದಿನಗಳ ಹಿಂದೆಯೇ ಈ ಚಿತ್ರದ ಶೂಟಿಂಗ್ ಆರಂಭ ಆಗಿತ್ತು. ಈಗ ಶ್ರುತಿ ಹಾಸನ್ ಅವರು ಶೂಟಿಂಗ್ ಸೆಟ್ ಸೇರಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ನಿರ್ದೇಶಕ ಗೋಪಿಚಂದ್ ಮಲಿನೇನಿ ಜೊತೆ ಕುಳಿತು ಅವರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಶೂಟಿಂಗ್ ಸೆಟ್ಗೆ ಹಾಜರಾದ ಅವರಿಗೆ ಭರ್ಜರಿ ಸ್ವಾಗತ ಕೋರಲಾಗಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಮ್ಯಾಗಜಿನ್ ಕವರ್ಗಾಗಿ ಶ್ರುತಿ ಹಾಸನ್ ಫೋಟೋಶೂಟ್
ಪ್ರತಿಷ್ಠಿತ ‘ಮೈತ್ರಿ ಮೂವೀ ಮೇಕರ್ಸ್’ ಮೂಲಕ ನಿರ್ಮಾಣ ಆಗುತ್ತಿರುವ ಈ ಸಿನಿಮಾ ಸಖತ್ ಮಾಸ್ ಆಗಿ ಮೂಡಿಬರುತ್ತಿದೆ. ನಂದಮೂರಿ ಬಾಲಕೃಷ್ಣ ಅವರಿಗೆ ಈಗ 62 ವರ್ಷ ವಯಸ್ಸು. ಈ ವಯಸ್ಸಿನಲ್ಲೂ ಅವರು ಭರ್ಜರಿ ಆ್ಯಕ್ಷನ್ ದೃಶ್ಯಗಳಲ್ಲಿ ನಟಿಸುತ್ತಿದ್ದಾರೆ. ‘ಎನ್ಬಿಕೆ 107’ ಚಿತ್ರದಲ್ಲೂ ಸಖತ್ ಸಾಹಸ ದೃಶ್ಯಗಳಿವೆ ಎಂಬುದಕ್ಕೆ ಟೀಸರ್ನಲ್ಲಿ ಸುಳಿವು ಸಿಕ್ಕಿದೆ. ಪಂಚಿಂಗ್ ಡೈಲಾಗ್ಗಳು ಕೂಡ ಅವರ ಅಭಿಮಾನಿಗಳಿಗೆ ಇಷ್ಟ ಆಗಿದೆ. ಅಂತಿಮವಾಗಿ ಈ ಸಿನಿಮಾಗೆ ಏನು ಟೈಟಲ್ ಇಡಬಹುದು ಎಂಬ ಕೌತುಕ ಮೂಡಿದೆ. ದುನಿಯಾ ವಿಜಯ್ ಅವರಿಗೆ ಇದು ಮೊದಲ ತೆಲುಗು ಸಿನಿಮಾ ಆದ್ದರಿಂದ ಅವರ ಅಭಿಮಾನಿಗಳ ವಲಯದಲ್ಲೂ ನಿರೀಕ್ಷೆ ಹೆಚ್ಚಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:28 pm, Sun, 19 June 22