ಕನ್ನಡದ ‘ರಾಬರ್ಟ್‘ ಸಿನಿಮಾ ತೆಲುಗು ಆವೃತ್ತಿಗಾಗಿ ‘ಕಣ್ಣೇ ಅದಿರಿಂದಿ’ ಹಾಡು ಹಾಡಿದ್ದ ಮಂಗ್ಲಿ ಅದೊಂದೇ ಹಾಡಿನಿಂದ ಕರ್ನಾಟಕದಲ್ಲಿ ಭಾರಿ ಜನಪ್ರಿಯತೆ ಗಳಿಸಿಕೊಂಡಿದ್ದರು. ಆ ಹಾಡಿನ ಬಳಿಕ ಕೆಲವು ಲೈವ್ ಶೋಗಳನ್ನು ಸಹ ಕರ್ನಾಟಕದಲ್ಲಿ ಮಾಡಿದ್ದ ಮಂಗ್ಲಿ, ಒಂದು ಕನ್ನಡ ಸಿನಿಮಾಕ್ಕೆ ನಾಯಕಿಯಾಗಿಯೂ ಆಯ್ಕೆ ಆಗಿದ್ದಾರೆ. ಇದೆಲ್ಲದರ ನಡುವೆ ಮಂಗ್ಲಿ ಮದುವೆ ಆಗುತ್ತಿದ್ದಾರೆ.
ಹೌದು, ತೆಲುಗಿನ ಜನಪ್ರಿಯ ಗಾಯಕಿ, ನಿರೂಪಕಿ, ನಟಿ ಮಂಗ್ಲಿ ಮದುವೆ ಆಗುತ್ತಿದ್ದಾರೆ. ಯಾವುದೇ ನಟ, ಗಾಯಕನನ್ನು ಅಲ್ಲದೆ ತಮ್ಮದೇ ಸಂಬಂಧಿಯೊಬ್ಬರೊಟ್ಟಿಗೆ ಮಂಗ್ಲಿಯ ವಿವಾಹ ನಿಶ್ಚಯವಾಗಿದೆ ಎಂಬ ಸುದ್ದಿ ತೆಲುಗು ಚಿತ್ರರಂಗದಲ್ಲಿ ಜೋರಾಗಿ ಹರಿದಾಡುತ್ತಿದೆ.
ಮಂಗ್ಲಿ, ತಮ್ಮ ಮಾವನ ಮಗನೊಟ್ಟಿಗೆ ಇದೇ ನವೆಂಬರ್ನಲ್ಲಿ ಹಸೆ ಮಣೆ ಏರಲಿದ್ದಾರಂತೆ. ಬಂಜಾರ ಸಮಯದಾಯಕ್ಕೆ ಸೇರಿದ ಮಂಗ್ಲಿಯ ವಿವಾಹ ಅವರ ನಂಬಿಕೆಯಂತೆ ಶಾಸ್ತ್ರೋಕ್ತವಾಗಿ ನೆರವೇರಲಿದೆ. ಮದುವೆ ಬಗ್ಗೆ ಹಿಂದೆ ಉಡಾಫೆಯ ಉತ್ತರ ನೀಡಿದ್ದ ಮಂಗ್ಲಿ, ಇದೀಗ ಮದುವೆ ಆಗಲು ನಿಶ್ಚಯಿಸಿರುವುದನ್ನು ಅವರ ಅಭಿಮಾನಿಗಳು ಸ್ವಾಗತಿಸುವುದು ಖಾತ್ರಿ.
ಇದನ್ನೂ ಓದಿ:ಗಾಯಕಿ ಮಂಗ್ಲಿ ಮಾಡೆಲ್ ಆಗಿದ್ದು ಯಾವಾಗ? ಇಲ್ಲಿವೆ ಮಂಗ್ಲಿಯ ಹೊಸ ಚಿತ್ರಗಳು
ತೆಲುಗಿನ ಹಲವು ಸಿನಿಮಾ ನಟ-ನಟಿಯರೊಡನೆ ಅತ್ಯಾಪ್ತ ಬಂಧ ಹೊಂದಿರುವ ಮಂಗ್ಲಿ ಮದುವೆಗೆ ಟಾಲಿವುಡ್ನ ದಿಗ್ಗಜರು ಆಗಮಿಸುವುದು ಖಾತ್ರಿ. ಮಂಗ್ಲಿ ತಮ್ಮ ತೆಲುಗು ಜನಪದ ಹಾಡುಗಳಿಂದ ಜನಪ್ರಿಯತೆ ಗಳಿಸಿದರು. ಬಳಿಕ ತೆಲುಗಿನ ಹಲವು ಜನಪ್ರಿಯ ಸಿನಿಮಾ ಹಾಡುಗಳಿಗೂ ಧ್ವನಿಯಾಗಿದ್ದಾರೆ. ನಟನೆಯನ್ನೂ ಆರಂಭಿಸಿರುವ ಮಂಗ್ಲಿ ತೆಲುಗಿನ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಕನ್ನಡದಲ್ಲಿ ಚಕ್ರವರ್ತಿ ಚಂದ್ರಚೂಡ್ ನಿರ್ದೇಶಿಸಲು ಮುಂದಾಗಿದ್ದ ಸಿನಿಮಾ ಒಂದಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದರು. ಆ ಸಿನಿಮಾ ಸೆಟ್ಟೇರಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ