ಚಿತ್ರಮಂದಿರಗಳ ಗಟ್ಟಿ ನಿರ್ಧಾರ, ‘ಪೆದ್ದಿ’, ‘ಟಾಕ್ಸಿಕ್’ಗೆ ಸಮಸ್ಯೆ?
Profit Sharing model: ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಮಾಲೀಕರು ಕಳೆದ ಕೆಲ ವರ್ಷಗಳಿಂದ ಬೇಡಿಕೆ ಈಡೇರಿಕೆಗೆ ಒತ್ತಾಯ ಮಾಡುತ್ತಲೇ ಇದ್ದರು. ಅವರ ಬೇಡಿಕೆಯಲ್ಲಿ ಪ್ರಮುಖವಾದ ಬೇಡಿಕೆ ಲಾಭ ಹಂಚಿಕೆಯದ್ದಾಗಿತ್ತು. ಇದೀಗ ತೆಲಂಗಾಣದ ಪ್ರದರ್ಶಕರು ಇನ್ನು ಮುಂದೆ ತಾವು ಬಾಡಿಗೆ ಮಾದರಿಯಲ್ಲ ಬದಲಿಗೆ ಲಾಭ ಹಂಚಿಕೆ ಮಾದರಿಯಲ್ಲಿಯೇ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ. ಇದು ದೊಡ್ಡ ಸಿನಿಮಾಗಳಿಗೆ ದೊಡ್ಡ ಪೆಟ್ಟನ್ನೇ ನೀಡಲಿದೆ.

ಸಿಂಗಲ್ ಸ್ಕ್ರೀನ್ (Single screen) ಚಿತ್ರಮಂದಿರಗಳು (Theater) ಕಳೆದ ಕೆಲ ವರ್ಷಗಳಿಂದಲೂ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡುತ್ತಲೇ ಇವೆ. ಕೇರಳದಲ್ಲಿ ಈ ಬಗ್ಗೆ ಸ್ವತಃ ರಾಜ್ಯದ ಸಚಿವರು ಮಧ್ಯಸ್ಥಿಕೆ ವಹಿಸಿ ಮಾತುಕತೆ ನಡೆಸಿದ್ದು ಸುದ್ದಿ ಆಗಿತ್ತು. ತೆಲುಗು ರಾಜ್ಯಗಳಲ್ಲಿಯೂ ಸಹ ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಮಾಲೀಕರು ನಿರ್ಮಾಪಕರ ಸಂಘ ಇನ್ನಿತರೆಗಳ ಕದ ತಟ್ಟುತ್ತಲೇ ಇದ್ದರು. ಅವರ ಬೇಡಿಕೆಯಲ್ಲಿ ಪ್ರಮುಖವಾದ ಬೇಡಿಕೆ ಲಾಭ ಹಂಚಿಕೆಯದ್ದಾಗಿತ್ತು. ಇದೀಗ ತೆಲಂಗಾಣದ ಪ್ರದರ್ಶಕರು ಇನ್ನು ಮುಂದೆ ತಾವು ಬಾಡಿಗೆ ಮಾದರಿಯಲ್ಲ ಬದಲಿಗೆ ಲಾಭ ಹಂಚಿಕೆ ಮಾದರಿಯಲ್ಲಿಯೇ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ. ಇದು ದೊಡ್ಡ ಸಿನಿಮಾಗಳಿಗೆ ದೊಡ್ಡ ಪೆಟ್ಟನ್ನೇ ನೀಡಲಿದೆ.
ಕರ್ನಾಟಕ ಸೇರಿ ದಕ್ಷಿಣದ ರಾಜ್ಯಗಳಲ್ಲಿ ಚಿತ್ರಮಂದಿರಗಳು ಬಾಡಿಗೆ ಮಾಡೆಲ್ನಲ್ಲಿಯೇ ಕೆಲಸ ಮಾಡುವುದು ಹೆಚ್ಚು. ಚಿತ್ರಮಂದಿರಗಳವರಿಗೆ ನಿರ್ಮಾಪಕರು ಅಥವಾ ವಿತರಕರು ನಿಗದಿತ ಬಾಡಿಗೆ ಮೊತ್ತ ನೀಡಿ ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಾರೆ. ಸಿನಿಮಾ ಓಡಲಿ, ಓಡದೇ ಇರಲಿ ಅವರಿಗೆ ಬಾಡಿಗೆ ಬರುತ್ತದೆ. ಆದರೆ ಮಲ್ಟಿಪ್ಲೆಕ್ಸ್ಗಳಲ್ಲಿ ಹಾಗಾಗುವುದಿಲ್ಲ ಅಲ್ಲಿ ಲಾಭಾಂಶದ ಹಂಚಿಕೆ ಮಾದರಿ ಇರುತ್ತದೆ. ಮೊದಲ ವಾರ ನಿರ್ಮಾಪಕರಿಗೆ 50% ಹೋದರೆ, ಮುಂದಿನ ವಾರ ಪಿವಿಆರ್ ಅವರಿಗೆ 60, ನಿರ್ಮಾಪಕರಿಗೆ 40 ಹೋಗುತ್ತದೆ. ಹೀಗೆ ವಾರಗಳು ಕಳೆದಷ್ಟೂ ನಿರ್ಮಾಪಕರಿಗೆ ಲಾಭಾಂಶ ಕಡಿಮೆ ಆಗಿ ಮಲ್ಟಿಪ್ಲೆಕ್ಸ್ಗಳಿಗೆ ಹೆಚ್ಚಾಗುತ್ತದೆ.
ಇದನ್ನೂ ಓದಿ:‘ಆಕಾಶ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ರಮ್ಯಾ, ರಾಘಣ್ಣ: ವಿಡಿಯೋ
ಇದೇ ರೀತಿಯ ಮಾಡೆಲ್ ತಮಗೂ ಬೇಕೆಂದು ಸಿಂಗಲ್ ಸ್ಕ್ರೀನ್ ಥಿಯೇಟರ್ ಮಾಲೀಕರು ಒತ್ತಾಯಿಸಿದ್ದು, ಇದೀಗ ತೆಲಂಗಾಣದಲ್ಲಿ ಈ ಮಾಡೆಲ್ ಅನ್ನು ಜಾರಿಗೆ ತಂದಿದ್ದು, ನಾಳಿನಿಂದ ಅಂದರೆ ಏಪ್ರಿಲ್ 3 ರಿಂದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು 60-50-40 ಮಾದರಿಯಲ್ಲಿ ಲಾಭ ಹಂಚಿಕೆ ಮಾಡಲಿವೆ. ಅಂದರೆ ಮೊದಲ ವಾರ ವಿತರಕರಿಗೆ 60% ಲಾಭ ಹೋಗಲಿದೆ. ಎರಡನೇ ವಾರ 50% ಮೂರನೇ ವಾರ 40% ಮಾತ್ರವೇ ವಿತರಕರ ಅಥವಾ ನಿರ್ಮಾಪಕರ ಪಾಲಾಗಲಿದೆ. ದೊಡ್ಡ ಸಿನಿಮಾಗಳಿಗೆ 2.50% ಹೆಚ್ಚಿನ ಪಾಲು ನೀಡಲಾಗುತ್ತದೆ, ಅದೂ ಟಿಕೆಟ್ ದರ ಹೆಚ್ಚಳ ಮಾಡಿದರೆ ಮಾತ್ರ ಎಂದು ಪ್ರದರ್ಶಕರು ಹೇಳಿದ್ದಾರೆ.
ಆದರೆ ಈ ಪರ್ಸೆಂಟೇಜ್ ವ್ಯವಸ್ಥೆಯಿಂದ ಸಿನಿಮಾಗಳಿಗೆ ಬರುವ ಲಾಭ ಕಡಿಮೆ ಆಗಲಿದೆ. ಅದರಲ್ಲೂ ದೊಡ್ಡ ಸಿನಿಮಾಗಳಿಗೆ, ಸ್ಟಾರ್ ನಟರ ಸಿನಿಮಾಗಳಿಗೆ ಹೊಡೆತ ಬೀಳಲಿದೆ. ಸ್ಟಾರ್ ನಟರ ಸಿನಿಮಾಗಳಿಗೆ ಹೆಚ್ಚು ಆದಾಯ ಬರುತ್ತಿದ್ದಿದ್ದೇ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಂದ ಆದರೆ ಅಲ್ಲಿಯೂ ಲಾಭಾಂಶ ಹಂಚಿಕೆ ಮಾಡೆಲ್ ಅನುಸರಿಸಿದರೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಂದ ಬರುತ್ತಿದ್ದ ಲಾಭದಲ್ಲಿ 40 ರಿಂದ 50% ಕಡಿತ ಆಗಲಿದೆ ಎಂಬ ಆತಂಕ ಚಿತ್ರರಂಗವನ್ನು ಕಾಡುತ್ತಿದೆ. ಇದೀಗ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಅದರ ಬಳಿಕ ಯಶ್ ಅವರ ‘ಟಾಕ್ಸಿಕ್’ ಸಹ ಇದೆ. ಈ ಎರಡೂ ಸಿನಿಮಾಗಳಿಗೆ ಪೆಟ್ಟು ಬೀಳುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:13 pm, Thu, 2 April 26
