
ವಿಜಯ್ ನಟನೆಯ ‘ಜನ ನಾಯಗನ್’ (Jana Nayagan) ಸಿನಿಮಾ ಜನವರಿ 09ರಂದು ಬಿಡುಗಡೆ ಆಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿ ಕಾರಣಗಳಿಂದಾಗಿ ಸಿನಿಮಾ ಬಿಡುಗಡೆ ಆಗಲಿಲ್ಲ. ಅದರ ಮರುದಿನ ಅಂದರೆ ಜನವರಿ 10 ರಂದು ‘ಪರಾಶಕ್ತಿ’ ಸಿನಿಮಾ ಬಿಡುಗಡೆ ಆಯ್ತು. ಶಿವಕಾರ್ತಿಕೇಯನ್, ಜಯಂ ರವಿ ಮತ್ತು ಕನ್ನಡತಿ ಶ್ರೀಲೀಲಾ ನಟಿಸಿರುವ ಈ ಸಿನಿಮಾವನ್ನು ನಿರ್ದೇಶನ ಮಾಡಿರುವುದು ಸುಧಾ ಕೊಂಗರ. ಹಿಂದಿ ಹೇರಿಕೆ ವಿರುದ್ಧ ತಮಿಳುನಾಡಿನಲ್ಲಿ ನಡೆದ ಹೋರಾಟದ ಕತೆಯನ್ನು ಈ ಸಿನಿಮಾ ಒಳಗೊಂಡಿತ್ತು. ನಿನ್ನೆ ಸಿನಿಮಾ ಬಿಡುಗಡೆ ಆಗಿದ್ದು, ಮೊದಲ ದಿನದ ಕಲೆಕ್ಷನ್ ಉತ್ತಮವಾಗಿಯೇ ಇದೆ.
‘ಜನ ನಾಯಗನ್’ ಸಿನಿಮಾದ ಸ್ಪರ್ಧೆಯನ್ನು ಅದೃಷ್ಟವಶಾತ್ ತಪ್ಪಿಸಿಕೊಂಡಿರುವ ‘ಪರಾಶಕ್ತಿ’ ಸಿನಿಮಾಕ್ಕೆ ತಮಿಳುನಾಡು ಮಾತ್ರವೇ ಅಲ್ಲದೆ, ಕರ್ನಾಟಕ, ಕೇರಳದಲ್ಲಿಯೂ ಚಿತ್ರಮಂದಿರಗಳು ಸಿಕ್ಕಿದ್ದು, ಪ್ರೇಕ್ಷಕರು ಸಹ ಆಸಕ್ತಿವಹಿಸಿ ನೋಡಿದ್ದಾರೆ. ಇದೇ ಕಾರಣಕ್ಕೆ ‘ಪರಾಶಕ್ತಿ’ ಸಿನಿಮಾದ ಮೊದಲ ದಿನದ ಕಲೆಕ್ಷನ್ 14 ಕೋಟಿಗೂ ಹೆಚ್ಚಾಗಿದೆ. ಇನ್ನು ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ ಮೊದಲ ದಿನ 24 ಕೋಟಿಗೂ ಹೆಚ್ಚಾಗಿದೆ. ಶಿವಕಾರ್ತಿಕೇಯನ್ ಸಿನಿಮಾ ಒಂದು ಮೊದಲ ದಿನ ಇಷ್ಟು ದೊಡ್ಡ ಗಳಿಕೆ ಮಾಡಿರುವುದು ಇದೇ ಮೊದಲು.
ಇದನ್ನೂ ಓದಿ:ಸುಖಾಂತ್ಯವಾಯ್ತು ‘ಜನ ನಾಯಗನ್’ ವಿವಾದ, ‘ಪರಾಶಕ್ತಿ’ ಕತೆ ಏನಾಯ್ತು?
‘ಜನ ನಾಯಗನ್’ ಸಿನಿಮಾ ಬಿಡುಗಡೆ ಆಗಿದ್ದಿದ್ದರೆ ‘ಪರಾಶಕ್ತಿ’ ಸಿನಿಮಾದ ಕಲೆಕ್ಷನ್ ಇಷ್ಟು ದೊಡ್ಡದಾಗಿರುತ್ತಿರುತ್ತಿರಲಿಲ್ಲ ಎಂಬುದು ಖಾತ್ರಿ. ಆದರೆ ಚಿತ್ರತಂಡದ ಅದೃಷ್ಟವೋ, ಉದ್ದೇಶಪೂರ್ವಕ ಯೋಜನೆಯೋ ಒಟ್ಟಾರೆ ‘ಜನ ನಾಯಗನ್’ ಸಿನಿಮಾ ಬಿಡುಗಡೆ ಆಗಿಲ್ಲ. ಅದರ ಲಾಭ ‘ಪರಾಶಕ್ತಿ’ ಸಿನಿಮಾಕ್ಕೆ ಆಗಿದೆ. ಮೊದಲ ದಿನ ಭಾರತ ಸೇರಿದಂತೆ ವಿಶ್ವ ಬಾಕ್ಸ್ ಆಫೀಸ್ನಲ್ಲಿ 24 ಕೋಟಿಗೂ ಹೆಚ್ಚಿನ ಮೊತ್ತವನ್ನು ಗಳಿಕೆ ಮಾಡಿದೆ.
‘ಪರಾಶಕ್ತಿ’ ಸಿನಿಮಾ ರಾಜಕೀಯ ವಿಷಯ ವಸ್ತುವುಳ್ಳ ಸಿನಿಮಾ ಆಗಿದೆ. ತಮಿಳುನಾಡಿನಲ್ಲಿ ದಶಕಗಳ ಹಿಂದೆ ನಡೆದ ಹಿಂದಿ ವಿರುದ್ಧ ಹೋರಾಟದ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಶಿವಕಾರ್ತಿಕೇಯನ್ ನಾಯಕ, ಶ್ರೀಲೀಲಾ ನಾಯಕಿ. ಜಯಂ ರವಿ ಇದೇ ಮೊದಲ ಬಾರಿಗೆ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಮೊದಲ ದಿನ ಸಿನಿಮಾ ನೋಡಿದ ಮಂದಿ ಮಿಶ್ರ ಪ್ರತಿಕ್ರಿಯೆಗಳನ್ನು ಸಿನಿಮಾ ಬಗ್ಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಚಿತ್ರಕತೆ ಇನ್ನಷ್ಟು ಗಟ್ಟಿಯಾಗಿ ಇರಬೇಕಿತ್ತು ಎಂದಿದ್ದಾರೆ. ಕೆಲವು ಉತ್ತರ ಭಾರತೀಯರು ಸಹ ಸಿನಿಮಾ ನೋಡಿ ಅಭಿಪ್ರಾಯ ಹಂಚಿಕೊಂಡಿದ್ದು, ‘ಪರಾಶಕ್ತಿ’ ಸಿನಿಮಾ, ಉತ್ತರ ಭಾರತದವರ ಬಗ್ಗೆ ದ್ವೇಷವನ್ನು ಪಸರಿಸುತ್ತಿದೆ ಎಂದಿದ್ದಾರೆ. ಏನೇ ಆಗಲಿ ಸಿನಿಮಾ ಮೊದಲ ದಿನ ಒಳ್ಳೆಯ ಗಳಿಕೆಯನ್ನು ಮಾಡಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ