ನೀರಿನೊಳಗೆ ಸೋಡಿಯಂ ಹಾಕಿ ಬ್ಲಾಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್, ಡ್ರೋನ್ ಪ್ರತಾಪ್ನನ್ನು 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಮಿಡಿಗೇಶಿ ಪೊಲೀಸರ ವಶಕ್ಕೆ ನೀಡಿ ತುಮಕೂರು ಜಿಲ್ಲೆಯ ಮಧುಗಿರಿ ನ್ಯಾಯಾಲಯ ಆದೇಶ ಹೊರಡಿಸಿದೆ. ನಿನ್ನೆ(ಡಿಸೆಂಬರ್ 12) ಮಿಡಿಗೇಶಿ ಪೊಲೀಸರು ಡ್ರೋನ್ ಪ್ರತಾಪ್ರನ್ನ ಬಂಧಿಸಿ ಇಂದು (ಡಿಸೆಂಬರ್ 13) ಮಧುಗಿರಿ ನ್ಯಾಯಾಲಯಕ್ಕೆ ಹಾಜರುಪಡಿಸಿ ತಮ್ಮ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದಾರೆ. ಪೊಲೀಸರ ಮನವಿ ಪುರಸ್ಕರಿಸಿದ ಕೋರ್ಟ್, ಡ್ರೋನ್ ಪ್ರತಾಪ್ನನ್ನು ಮೂರು ದಿನ ಮಿಡಿಗೇಶಿ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಸ್ಫೋಟಕ ವಸ್ತುವನ್ನು ನೀರಿಗೆಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಡಿಗೇಶಿ ಪೊಲೀಸರು ಡ್ರೋನ್ ಪ್ರತಾಪ್ನನ್ನು ನಿನ್ನೆ ಬಂಧಿಸಿದ್ದರು. ವಿಡಿಯೋ ಆಧರಿಸಿ ಎಫ್ಐಆರ್ ಮಾಡಲಾಗಿತ್ತು. ಮಿಡಿಗೇಶಿ ಪೊಲೀಸರು BNS ಸೆಕ್ಷನ್ 288 ಮತ್ತು ಸ್ಫೋಟ ವಸ್ತು ನಿಯಂತ್ರಣ ಕಾಯ್ದೆ 3ರ ಅಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ವಿಚಾರಣೆಗೊಳಪಡಿಸಿದ ವೇಳೆ ಡ್ರೋನ್ ಪ್ರತಾಪ್ ಹಲವು ಸಂಗತಿಯಗಳನ್ನು ಬಾಯಿಬಿಟ್ಟಿದ್ದರು.
ಇದಕ್ಕೂ ಮುನ್ನ ಎರಡು ಬಾರಿ ಇದೇ ರೀತಿಯ ಸ್ಫೋಟಿಸಿದ್ದೆ. ಸ್ಫೋಟದ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದೆ ಎಂದು ಡ್ರೋನ್ ಪ್ರತಾಪ್ ಪೊಲೀಸರ ಮುಂದೆ ಹೇಳಿದ್ದರು. ಹೀಗಾಗಿ ಪೊಲೀಸರು ಇನ್ನಷ್ಟು ತನಿಖೆ ಮಾಡಬೇಕಿರುವುದರಿಂದ ತಮ್ಮ ಕಸ್ಟಡಿಗೆ ನೀಡುವಂತೆ ಕೋರ್ಟ್ಗೆ ಮನವಿ ಮಾಡಿದ್ದರು. ಅದರಂತೆ ಕೋರ್ಟ್ ಡ್ರೋನ್ ಪ್ರತಾಪ್ನನ್ನು ಪೊಲೀಸ್ ವಶಕ್ಕೆ ನೀಡಿದ್ದು, ಖಾಕಿ ಇನ್ನಷ್ಟು ವಿಚಾರಣೆಗೊಳಪಡಿಸಲಿದೆ.
ಡ್ರೋನ್ ಪ್ರತಾಪ್ ಸೋಡಿಯಂ ಸ್ಫೋಟಕ ಎಸೆದಿದ್ದ ಪ್ರಕರಣದ ಬಗ್ಗೆ ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್ ಪ್ರತಿಕ್ರಿಯಿಸಿ, ಡ್ರೋನ್ ಪ್ರತಾಪ್ ವಿರುದ್ಧ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಕೇಸ್ ದಾಖಲಿಸಲಾಗಿದೆ. ಡ್ರೋನ್ ಪ್ರತಾಪ್ ಕೆಮಿಕಲ್ ಬಳಸಿ ಸ್ಫೋಟಿಸಿ ಬಳಿಕ ಯೂಟ್ಯೂಬ್ಗೆ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಸದ್ಯ ಡ್ರೋನ್ ಪ್ರತಾಪ್ನನ್ನ 3 ದಿನ ಕಸ್ಟಡಿಗೆ ಪಡೆಯಲಾಗಿದ್ದು, ಹಳೇ ವಿಡಿಯೋ ಏನಾದ್ರೂ ಇದ್ಯಾ ಎಂದು ಪರಿಶೀಲಿಸಲಾಗುತ್ತೆ ಎಂದು ತಿಳಿಸಿದರು.
ಬ್ಲಾಸ್ಟ್ಗೆ ಬಳಸಿದ್ದ ವಸ್ತುಗಳನ್ನೇಲ್ಲಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಘಟನಾ ಸ್ಥಳಕ್ಕೆ ತೆರಳಲು ಬಳಸಿದ್ದ ಕಾರು, ಅಲ್ಲಿ ಬಳಸಿದ್ದ ಲ್ಯಾಪ್ಟಾಪ್, ಮೊಬೈಲ್ ಸೇರಿ ಎಲ್ಲಾ ವಸ್ತುಗಳನ್ನ ಸೀಜ್ ಮಾಡಿದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇಂತಹ ಪ್ರಯೋಗಗಳಿಗೆ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಸ್ಥಳೀಯ ಪೊಲೀಸ್ ಠಾಣೆ ಹಾಗೂ ಸಂಬಂಧಿಸಿದ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕೃಷಿ ಇಲಾಖೆ ಸೇರಿದಂತೆ ಹಲವು ಇಲಾಖೆಯ ಅನುಮತಿ ಪಡೆಯಬೇಕು. ಆದರೆ, ಡ್ರೋನ್ ಪ್ರತಾಪ್ ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ. ಹೀಗಾಗಿ ಪೊಲೀಸರೇ ವಿಡಿಯೋ ಆಧಾರದ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಬಂಧಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:17 pm, Fri, 13 December 24