ಕ್ಯಾಪ್ಟನ್ ಆದ ಗೋಲ್ಡ್ ಸುರೇಶ್; ಮೈ ತುಂಬಾ ಬಂಗಾರ ಧರಿಸಿ ಅಧಿಕಾರ ಸ್ವೀಕಾರ
ಗೋಲ್ಡ್ ಸುರೇಶ್ ಅವರಿಗೆ ಬಿಗ್ ಬಾಸ್ ಆಟದಲ್ಲಿ ಈ ವಾರ ಸಖತ್ ಸ್ಪೆಷಲ್ ಆಗಿದೆ. ಯಾಕೆಂದರೆ ಅವರು ಕ್ಯಾಪ್ಟನ್ ಆಗಿದ್ದಾರೆ. ಯಾರ ಸಹಾಯವೂ ಇಲ್ಲದೇ ಸ್ವಂತ ಬಲದಲ್ಲಿ ಅವರು ಕ್ಯಾಪ್ಟನ್ ಪಟ್ಟ ಅಲಂಕರಿಸಿದ್ದಾರೆ. ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ. ಕ್ಯಾಪ್ಟನ್ ಆಗಿ ಅಧಿಕಾರ ಸ್ವೀಕಾರ ಮಾಡುವಾಗ ಸುರೇಶ್ ಅವರು ಮೈ ತುಂಬ ಬಂಗಾರ ಧರಿಸಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಸ್ಪರ್ಧಿ ಗೋಲ್ಡ್ ಸುರೇಶ್ ಅವರ ಬಳಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಬಂಗಾರದ ಆಭರಣಗಳು ಇವೆ. ಬಿಗ್ ಬಾಸ್ ಮನೆಗೆ ಬರುವಾಗ ತಮ್ಮ ಜೊತೆ ಒಂದು ಕೋಟಿ ರೂಪಾಯಿಗೂ ಅಧಿಕ ಬೆಲೆಯ ಬಂಗಾರವನ್ನು ಸುರೇಶ್ ತಂದಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಅವರು ಈ ಆಭರಣಗಳನ್ನು ಧರಿಸುತ್ತಾರೆ. ಶುಕ್ರವಾರದ (ಡಿಸೆಂಬರ್ 13) ಸಂಚಿಕೆಯಲ್ಲಿ ಸುರೇಶ್ ಅವರು ಕ್ಯಾಪ್ಟನ್ ಆಗಿದ್ದಾರೆ. ಅಧಿಕಾರವನ್ನು ಸ್ವೀಕರಿಸಿ ಕ್ಯಾಪ್ಟನ್ ರೂಮ್ ಪ್ರವೇಶಿಸುವಾಗ ಸುರೇಶ್ ಅವರು ಮೈ ತುಂಬ ಬಂಗಾರದ ಆಭರಣಗಳನ್ನು ಧರಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಬೇಕು ಎಂಬುದು ಗೋಲ್ಡ್ ಸುರೇಶ್ ಅವರು ಬಹುಕಾಲದ ಆಸೆ ಆಗಿತ್ತು. ಆದರೆ ಇಷ್ಟು ವಾರಗಳ ಕಾಲ ಅವರಿಗೆ ಸಾಧ್ಯವಾಗಿರಲಿಲ್ಲ. ಈ ಹಿಂದಿನ ವಾರಗಳಲ್ಲಿ ಟಾಸ್ಕ್ ಆಡುವಾಗ ಅವರಿಗೆ ಗಾಯ ಆಗಿತ್ತು. ಕಾಲಿಗೆ ಪಟ್ಟಾಗಿದ್ದರಿಂದ ಅನೇಕ ಟಾಸ್ಕ್ನಿಂದ ಅವರು ಹೊರಗೆ ಉಳಿಯಬೇಕಾಗಿತ್ತು. ಆದರೆ ಈ ಎಲ್ಲ ಅಡೆತಡೆಗಳನ್ನು ದಾಟಿಕೊಂಡು ಬಂದು ಅವರು ಈ ವಾರ ಕ್ಯಾಪ್ಟನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಗೋಲ್ಡ್ ಸುರೇಶ್ ಅವರು ಕ್ಯಾಪ್ಟನ್ ಆಗಿದ್ದರೆ ಧನರಾಜ್ ಮತ್ತು ಹನುಮಂತ ಅವರು ಹೆಚ್ಚು ಸಂಭ್ರಮಿಸಿದ್ದಾರೆ. ಅದೇ ಖುಷಿಯಲ್ಲಿ ಸುರೇಶ್ ಅವರನ್ನು ಸ್ವಿಮಿಂಗ್ ಪೂಲ್ಗೆ ತಳ್ಳಲಾಗಿದೆ. ಹಲವು ಬಾರಿ ಗೋಲ್ಡ್ ಸುರೇಶ್ಗೆ ಹನುಮಂತ ಕಳಪೆ ನೀಡಿದ್ದರು. ಪದೇ ಪದೇ ನಾಮಿನೇಟ್ ಮಾಡಿದ್ದರು. ಗೋಲ್ಡ್ ಸುರೇಶ್ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎಂದು ಅನೇಕರು ಹೇಳಿದ್ದರು. ಆದರೆ ಈಗ ಕ್ಯಾಪ್ಟನ್ ಆಗಿರುವುದರಿಂದ ಎಲ್ಲ ಟೀಕೆಗಳಿಗೂ ಅವರು ಉತ್ತರ ನೀಡಿದಂತೆ ಆಗಿದೆ.
ಇದನ್ನೂ ಓದಿ: ಗೋಡೆ ಬಳಿ ಹೋಗಿ ಅಳುತ್ತಿರುವ ಹನುಮಂತ; ಬಿಗ್ ಬಾಸ್ ಮನೆಯಲ್ಲಿ ಏನಾಯ್ತು?
ಹಿಂದಿನ ವಾರ ಗೌತಮಿ ಜಾದವ್ ಅವರು ಕ್ಯಾಪ್ಟನ್ ಆಗಿದ್ದರು. ಈಗ ಅವರು ಅಧಿಕಾರವನ್ನು ಗೋಲ್ಡ್ ಸುರೇಶ್ಗೆ ಬಿಟ್ಟುಕೊಟ್ಟಿದ್ದಾರೆ. ಸುರೇಶ್ ಕ್ಯಾಪ್ಟೆನ್ಸಿಯಲ್ಲಿ ಯಾವೆಲ್ಲ ಬದಲಾವಣೆಗಳು ಇರಲಿವೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಕ್ಯಾಪ್ಟೆನ್ಸಿ ರೇಸ್ನಲ್ಲಿ ರಜತ್, ಶಿಶಿರ್, ಭವ್ಯಾ, ಐಶ್ವರ್ಯಾ, ಹನುಮಂತ ಮುಂತಾದವರು ಇದ್ದರು. ಎಲ್ಲರನ್ನೂ ಮೀರಿಸಿ ಗೋಲ್ಡ್ ಸುರೇಶ್ ಅವರು ಕ್ಯಾಪ್ಟೆನ್ಸಿ ಟಾಸ್ಕ್ ವಿನ್ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.