ಸರ್ಜರಿ ಮಾಡಿಸಿಕೊಳ್ಳುವಾಗ ಹಾಡು ಹಾಡಿದ ಗಾಯಕ ಸೋನು ನಿಗಮ್

ಪ್ರಸಿದ್ಧ ಗಾಯಕ ಸೋನು ನಿಗಮ್ ತಮ್ಮ ಎಡಗೈ ಬೆರಳಿನ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮೊಹಮ್ಮದ್ ರಫಿ ಅವರ ಜನಪ್ರಿಯ ಹಾಡನ್ನು ಹಾಡಿ ವೈದ್ಯರನ್ನು ರಂಜಿಸಿದ್ದಾರೆ. ಆರೋಗ್ಯ ಸಮಸ್ಯೆಗೆ ಒಳಗಾಗಿರುವ ಅವರು, ಆಪರೇಷನ್ ಥಿಯೇಟರ್‌ನಲ್ಲಿ ಸಾಂಗ್ ಹಾಡಿದ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸರ್ಜರಿ ಮಾಡಿಸಿಕೊಳ್ಳುವಾಗ ಹಾಡು ಹಾಡಿದ ಗಾಯಕ ಸೋನು ನಿಗಮ್
ಸೋನು ನಿಗಮ್

Updated on: Aug 11, 2026 | 3:01 PM

ಪ್ರಸಿದ್ಧ ಗಾಯಕ ಸೋನು ನಿಗಮ್ ತಮ್ಮ ಮಧುರ ಕಂಠದಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದವರು. ಆದರೆ ಇತ್ತೀಚೆಗೆ ಅವರು ಹಂಚಿಕೊಂಡ ವೀಡಿಯೊವೊಂದು ಅಭಿಮಾನಿಗಳಲ್ಲಿ ಅಚ್ಚರಿ ಮತ್ತು ಆತಂಕವನ್ನು ಒಟ್ಟಿಗೆ ಮೂಡಿಸಿದೆ. ಸ್ವತಃ ಸೋನು ನಿಗಮ್ ಅವರೇ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವಾಗ ಆಪರೇಷನ್ ಟೇಬಲ್ ಮೇಲೆ ಮಲಗಿಕೊಂಡೇ ಹಾಡು ಹಾಡುತ್ತಿರುವ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಆಪರೇಷನ್ ಥಿಯೇಟರ್‌ನಲ್ಲಿ ನಡೆದಿದ್ದೇನು?

ಸೋನು ನಿಗಮ್ ಅವರು ದಿವಂಗತ ಹಿರಿಯ ಗಾಯಕ ಮೊಹಮ್ಮದ್ ರಫಿ ಅವರ ‘ದುಲಾರಿ’ (1949) ಸಿನಿಮಾದ ‘ಸುಹಾನಿ ರಾತ್ ಧಲ್ ಚುಕಿ’ ಹಾಡನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿದ್ದಾರೆ. ಈ ವೀಡಿಯೊ ವೈರಲ್ ಆಗುತ್ತಿದ್ದಂತೆ, ಅವರಿಗೆ ಏನಾಯಿತು ಎಂದು ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸೋನು ನಿಗಮ್, ತಮ್ಮ ಎಡಗೈ ಉಂಗುರದ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.

ಹಾಡು ಹಾಡಲು ಕಾರಣವೇನು?

ಶಸ್ತ್ರಚಿಕಿತ್ಸೆ ಮಾಡುವಾಗ ಹಾಡು ಹಾಡಿದ್ದೇಕೆ ಎಂಬುದನ್ನು ವಿವರಿಸಿದ ಅವರು, ‘ಇದು ತಾನಾಗಿಯೇ ನಡೆಯಿತು. ನನಗೆ ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ಡಾ. ನೀಲೇಶ್ ಸತ್ಭಾಯಿ ಅವರು ನನ್ನ ಅಭಿಮಾನಿಯಾಗಿದ್ದು, ಆಪರೇಷನ್ ವೇಳೆ ನನ್ನ ಹಾಡುಗಳನ್ನೇ ಪ್ಲೇ ಮಾಡುತ್ತಿದ್ದರು. ಈ ವೇಳೆ ಮೊಹಮ್ಮದ್ ರಫಿ ಅವರ ಹಾಡುಗಳ ಮ್ಯೂಸಿಕ್ ಮಾತ್ರ ಬಂದು, ಗಾಯನವಿಲ್ಲದ ಟ್ರ್ಯಾಕ್ ಪ್ಲೇ ಆಯಿತು. ಅದನ್ನು ಕೇಳಿ ನಾನೇ ಸ್ವತಃ ಹಾಡಲು ಪ್ರಾರಂಭಿಸಿದೆ’ ಎಂದಿದ್ದಾರೆ.

ರೋಗಿಯೊಬ್ಬರು ಸರ್ಜರಿ ವೇಳೆಯಲ್ಲೇ ಹೀಗೆ ಹಾಡುತ್ತಿರುವುದನ್ನು ಕಂಡು ವೈದ್ಯರ ತಂಡ ಕೂಡ ಸಂತಸ ವ್ಯಕ್ತಪಡಿಸಿತಂತೆ. ವೈದ್ಯರಿಗಾಗಿ ಸುಮಾರು 2-3 ಹಾಡುಗಳನ್ನು ಹಾಡಿದ ಸೋನು ನಿಗಮ್, ಈ ಅಪರೂಪದ ಕ್ಷಣವನ್ನು ನೆನಪಿಗಾಗಿ ರೆಕಾರ್ಡ್ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ವೈದ್ಯರು ರೆಕಾರ್ಡ್ ಮಾಡಿ ಕಳುಹಿಸಿದ ನಂತರವೇ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಎರಡು ಪ್ರಮುಖ ಮ್ಯೂಸಿಕ್ ಕಂಪನಿಗಳು ನನ್ನ ಬ್ಯಾನ್ ಮಾಡಿದ್ದವು; ಗಾಯಕ ಸೋನು ನಿಗಮ್

ಆರೋಗ್ಯದ ಸ್ಥಿತಿ ಹೇಗಿದೆ?

ಇದೇ ಸಮಸ್ಯೆಗೆ ನಾಲ್ಕು ತಿಂಗಳ ಹಿಂದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರೂ, ಮತ್ತೆ ಇದು ಮರುಕಳಿಸಿದೆ ಎಂದು ಸೋನು ನಿಗಮ್ ಹೇಳಿದ್ದಾರೆ. ‘ಇದು ಬಹುಶಃ ನನ್ನ ಮೂಳೆಗಳಲ್ಲಿರುವ ಸಂಧಿವಾತ ಸಮಸ್ಯೆಗೆ ಸಂಬಂಧಿಸಿದ್ದಿರಬಹುದು. ಪ್ರಸ್ತುತ ಚಿಕಿತ್ಸೆ ಮುಗಿದಿದ್ದು, ಮುಂದಿನ ಹಂತದ ಬಗ್ಗೆ ಕಾದು ನೋಡಬೇಕಿದೆ’ ಎಂದು ತಮ್ಮ ಆರೋಗ್ಯದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us