ಡ್ಯಾನ್ಸರ್ ಎಂದ ನಿರೂಪಕಿಗೆ ಜಾಡಿಸಿದ ನಟಿ ಶ್ರೀಲೀಲಾ

|

Updated on: Mar 14, 2025 | 4:55 PM

Sreeleela: ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ ತೆಲುಗು ಚಿತ್ರರಂಗದಲ್ಲಿ ಶ್ರೀಲೀಲಾ ಅವರನ್ನು ನಟಿಯಾಗಿ ಬಳಸಿಕೊಂಡಿದ್ದಕ್ಕಿಂತಲೂ ಗ್ಲಾಮರ್ ಬೊಂಬೆಯಾಗಿ ಬಳಸಿಕೊಂಡಿದ್ದೇ ಹೆಚ್ಚು. ಇತ್ತೀಚೆಗೆ ನಿರೂಪಕಿ ಒಬ್ಬರು ಶ್ರೀಲೀಲಾ ಅನ್ನು ಡ್ಯಾನ್ಸರ್ ಎಂದು ಪರಿಚಯಿಸಿದ್ದು ನಟಿಗೆ ಸಿಟ್ಟು ತರಿಸಿದೆ.

ಡ್ಯಾನ್ಸರ್ ಎಂದ ನಿರೂಪಕಿಗೆ ಜಾಡಿಸಿದ ನಟಿ ಶ್ರೀಲೀಲಾ
Sreeleela
Follow us on

ಕನ್ನಡದ ನಟಿ ಶ್ರೀಲೀಲಾ ತೆಲುಗು ಚಿತ್ರರಂಗದ ಟಾಪ್ ನಟಿಯಾಗಿದ್ದಾರೆ. ಈಗ ಬಾಲಿವುಡ್​ಗೂ ಕಾಲಿರಿಸಿದ್ದಾರೆ. ಶ್ರೀಲೀಲಾ ಬಹಳ ಒಳ್ಳೆಯ ನಟಿಯಾಗಿರುವ ಜೊತೆಗೆ ಬಹಳ ಒಳ್ಳೆಯ ನೃತ್ಯಗಾರ್ತಿಯೂ ಹೌದು. ಅವರ ನೃತ್ಯ ಪ್ರತಿಭೆಯಿಂದಾಗಿಯೇ, ಶ್ರೀಲೀಲಾ ನಟಿಸುವ ಪ್ರತಿ ಸಿನಿಮಾದಲ್ಲಿಯೂ ಕೆಲವಾದರೂ ಒಳ್ಳೆಯ ಡ್ಯಾನ್ಸ್ ಹಾಡುಗಳನ್ನು ಇರಿಸಿರುತ್ತಾರೆ. ಶ್ರೀಲೀಲಾರ ನೃತ್ಯ ಪ್ರತಿಭೆಯಿಂದಾಗಿಯೇ ಕೆಲ ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡಿದ್ದೂ ಸಹ ಇದೆ. ಹಾಗೆಂದು ಶ್ರೀಲೀಲಾಗೆ ತನ್ನನ್ನು ಡ್ಯಾನ್ಸರ್ ಎಂದು ಗುರುತಿಸುವುದು ಇಷ್ಟವಿಲ್ಲ.

ಶ್ರೀಲೀಲಾ ನಟಿಸಿರುವ ‘ರಾಬಿನ್ ಹುಡ್’ ಹೆಸರಿನ ತೆಲುಗು ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಆಯೋಜನೆಗೊಂಡಿತ್ತು. ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ ಯುವತಿ, ಶ್ರೀಲೀಲಾ ಅವರನ್ನು ಪರಿಚಯಿಸುವಾಗ ‘ಶ್ರೀಲೀಲಾ ಎಂದರೆ ಹಾಡುಗಳು, ಹಾಡುಗಳು ಎಂದರೆ ಡ್ಯಾನ್ಸ್, ಡ್ಯಾನ್ಸ್ ಎಂದರೆ ಶ್ರೀಲೀಲಾ’ ಎಂದು ಕೊಂಡಾಡಿದರು. ಆದರೆ ನಿರೂಪಕಿ ತನ್ನನ್ನು ಕೇವಲ ಡ್ಯಾನ್ಸರ್ ಆಗಿ ಮಾತ್ರವೇ ಗುರುತಿಸಿದ್ದು ಶ್ರೀಲೀಲಾಗೆ ಯಾಕೋ ಹಿಡಿಸಲಿಲ್ಲ.

ತಮ್ಮ ಮಾತನಾಡುವ ಸರದಿ ಬಂದಾಗ ತನ್ನನ್ನು ಡ್ಯಾನ್ಸರ್ ಎಂದ ನಿರೂಪಕಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ನಟಿ ಶ್ರೀಲೀಲಾ, ‘ಈ ಸಿನಿಮಾದಲ್ಲಿ ನನ್ನ ಬಗ್ಗೆ ಅಭಿಪ್ರಾಯವೇ ಬದಲಾಗುವಂತೆ ನಟಿಸಿದ್ದೇನೆ, ಈ ಸಿನಿಮಾ ಬಿಡುಗಡೆ ಆದ ಮೇಲೆ, ‘ಶ್ರೀಲೀಲಾ ಎಂದರೆ ಡೈಲಾಗ್, ಡೈಲಾಗ್ ಎಂದರೆ ನಟನೆ, ನಟನೆ ಎಂದರೆ ಶ್ರೀಲೀಲಾ’ ಎನ್ನುವಂತೆ ಮಾಡುತ್ತೇನೆ’ ಎಂದಿದ್ದಾರೆ ಶ್ರೀಲೀಲಾ.

ಇದನ್ನೂ ಓದಿ:ಬಾಲಿವುಡ್ ನಾಯಕನ ಜೊತೆ ಶ್ರೀಲೀಲಾ ಲವ್ವಿ-ಡವ್ವಿ, ಮದುವೆ ಫಿಕ್ಸ್?

ಅಸಲಿಗೆ ಶ್ರೀಲೀಲಾ ಒಳ್ಳೆಯ ನಟಿ, ಆದರೆ ತೆಲುಗು ಚಿತ್ರರಂಗದಲ್ಲಿ ಈವರೆಗೆ ಶ್ರೀಲೀಲಾರ ನಟನೆಗೆ ಸವಾಲಾಗುವಂತ ಪಾತ್ರವನ್ನೇ ಅವರಿಗೆ ನೀಡಿಲ್ಲ. ಕೇವಲ ಗ್ಲಾಮರ್ ಗೊಂಬೆಯಾಗಿ, ಡ್ಯಾನ್ಸರ್ ಆಗಿ ಮಾತ್ರವೇ ಶ್ರೀಲೀಲಾ ಅವರನ್ನು ಬಳಸಿಕೊಳ್ಳಲಾಗಿದೆ. ಆದರೆ ಇದೀಗ ಶ್ರೀಲೀಲಾ ತಮಿಳಿನ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ. ರೆಟ್ರೊ ಕತೆ ಹೊಂದಿರುವ ಈ ಸಿನಿಮಾದಲ್ಲಿ ಶಿವಕಾರ್ತಿಕೇಯ ನಾಯಕ. ಸಿನಿಮಾ ನಿರ್ದೇಶನ ಮಾಡುತ್ತಿರುವುದು ಸುಧಾ ಕೊಂಗರ. ಈ ಸಿನಿಮಾದಲ್ಲಿ ಶ್ರೀಲೀಲಾಗೆ ನಟನೆಗೆ ಸಾಕಷ್ಟು ಅವಕಾಶ ಇದೆ ಎನ್ನಲಾಗುತ್ತಿದೆ.

ಶ್ರೀಲೀಲಾ ಇದೀಗ ಬಾಲಿವುಡ್​ಗೂ ಕಾಲಿಟ್ಟಿದ್ದೂ ಅಲ್ಲಿಯೂ ಸಹ ನಟನೆಗೆ ಸಾಕಷ್ಟು ಅವಕಾಶ ಇರುವ ಪಾತ್ರಗಳು ನಟಿಗೆ ಸಿಗಲಿವೆ. ಈಗಾಗಲೇ ‘ಆಶಿಖಿ 3’ ಸಿನಿಮಾದ ನಾಯಕಿಯಾಗಿ ಶ್ರೀಲೀಲಾ ಆಯ್ಕೆ ಆಗಿದ್ದು, ಸಿನಿಮಾದ ಶೂಟಿಂಗ್ ಚಾಲ್ತಿಯಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:54 pm, Fri, 14 March 25