ರಾಜಮೌಳಿ-ಮಹೇಶ್ ಬಾಬು ಸಿನಿಮಾಕ್ಕೆ ಸರಳವಾದ ಹೆಸರು: ಆ ಎರಡರಲ್ಲಿ ಯಾವುದು ಅಂತಿಮ?

|

Updated on: Feb 16, 2024 | 3:58 PM

SS Rajamouli: ನಿರ್ದೇಶಕ ರಾಜಮೌಳಿ ತಮ್ಮ ಮುಂದಿನ ಸಿನಿಮಾವನ್ನು ಮಹೇಶ್ ಬಾಬು ಜೊತೆ ಮಾಡಲಿದ್ದು, ಈ ಸಿನಿಮಾವನ್ನು ಹಾಲಿವುಡ್ ಸಿನಿಮಾಗಳ ಮಾದರಿಯಲ್ಲಿ ಕಟ್ಟಿಕೊಡಲಿದ್ದಾರೆ. ಆದರೆ ಸಿನಿಮಾಕ್ಕೆ ಸಾಮಾನ್ಯ ಎನಿಸುವಂಥ ಹೆಸರು ಆಯ್ಕೆ ಮಾಡಿದ್ದಾರೆ.

ರಾಜಮೌಳಿ-ಮಹೇಶ್ ಬಾಬು ಸಿನಿಮಾಕ್ಕೆ ಸರಳವಾದ ಹೆಸರು: ಆ ಎರಡರಲ್ಲಿ ಯಾವುದು ಅಂತಿಮ?
Follow us on

‘RRR’ ಸಿನಿಮಾ ಬ್ಲಾಕ್ ಬಸ್ಟರ್ ಆದ ಬಳಿಕ ರಾಜಮೌಳಿಯ (Rajamouli) ಮುಂದಿನ ಸಿನಿಮಾ ಬಗ್ಗೆ ನಿರೀಕ್ಷೆಗಳು ದಶಪಟ್ಟಾಗಿವೆ. ‘RRR’ ಸಿನಿಮಾ ಭಾರತದಲ್ಲಿ ಮಾತ್ರವೇ ಅಲ್ಲದೆ ಹಾಲಿವುಡ್ ನಲ್ಲಿಯೂ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದೆ. ಸಿನಿಮಾ ಜಗತ್ತಿನ ದಿಗ್ಗಜ ನಿರ್ದೇಶಕರಾದ ಜೇಮ್ಸ್ ಕ್ಯಾಮರನ್, ಸ್ಟಿಫನ್ ಸ್ಪೀಲ್​ಬರ್ಗ್ ಇನ್ನೂ ಕೆಲವರು ‘RRR’ ಸಿನಿಮಾವನ್ನು ನೋಡಿ ಮೆಚ್ಚಿ ಕೊಂಡಾಡಿದ್ದಾರೆ. ‘RRR’ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿರುವ ಕಾರಣ ರಾಜಮೌಳಿ ತಮ್ಮ ಮುಂದಿನ ಸಿನಿಮಾವನ್ನು ಇನ್ನಷ್ಟು ಜಾಗರೂಕತೆಯಿಂದ ಹಾಗೂ ಭಾರಿ ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ.

ರಾಜಮೌಳಿ ತಮ್ಮ ಮುಂದಿನ ಸಿನಿಮಾದಲ್ಲಿ ಮಹೇಶ್ ಬಾಬು ನಾಯಕರಾಗಿ ನಟಿಸುತ್ತಿದ್ದು, ಸಿನಿಮಾ ಅಡ್ವೇಂಚರ್ ಥ್ರಿಲ್ಲರ್ ಕತೆಯನ್ನು ಹೊಂದಿರಲಿದೆ. ಸ್ಪಿಫನ್ ಸ್ಪೀಲ್​ಬರ್ಗ್​ನ ‘ಇಂಡಿಯಾನಾ ಜೋನ್ಸ್’ ಸಿನಿಮಾದಿಂದ ಸ್ಪೂರ್ತಿ ಪಡೆದ ಸಿನಿಮಾ ಇದಾಗಿದ್ದು, ಹಲವು ದೇಶಗಳಲ್ಲಿ ಕತೆ ನಡೆಯಲಿದೆ. ಸಿನಿಮಾದ ಬಹುತೇಕ ಆಕ್ಷನ್ ಹಾಗೂ ಚೇಸಿಂಗ್ ದೃಶ್ಯಗಳು ದಟ್ಟ ಅರಣ್ಯಗಳ ನಡುವೆ ನಡೆಯಲಿದೆ ಎನ್ನಲಾಗುತ್ತಿದೆ. ಸಿನಿಮಾದ ನಾಯಕಿಯಾಗಿ ಇಂಡೋನೇಷ್ಯಾದ ನಟಿಯೊಬ್ಬರು ಆಯ್ಕೆ ಆಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:SSMB 29: ರಾಜಮೌಳಿ ಜೊತೆಗಿನ ಚಿತ್ರಕ್ಕೆ ಮಹೇಶ್ ಬಾಬು ಪಡೆಯುತ್ತಿರೋ ಸಂಭಾವನೆ ಎಷ್ಟು?

ಇದರ ನಡುವೆ ಸಿನಿಮಾದ ಹೆಸರಿನ ಬಗ್ಗೆ ಹಲವು ಊಹಾಪೋಗಳು ಹರಿದಾಡುತ್ತಿವೆ. ಸಿನಿಮಾಕ್ಕೆ ಇಂಗ್ಲೀಷ್ ಹೆಸರನ್ನು ರಾಜಮೌಳಿ ಇಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು, ಅಮೆರಿಕ, ಬ್ರಿಟನ್ ಸೇರಿದಂತೆ ಹಲವು ಬೇರೆ ಬೇರೆ ದೇಶಗಳಲ್ಲಿ ಈ ಸಿನಿಮಾ ಬಿಡುಗಡೆ ಮಾಡಲಿರುವ ಕಾರಣ ಸಿನಿಮಾಕ್ಕೆ ಇಂಗ್ಲೀಷ್ ಹೆಸರನ್ನು ರಾಜಮೌಳಿ ಇಡಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಬಂದಿರುವ ಸುದ್ದಿಗಳ ಪ್ರಕಾರ ಈ ಸಿನಿಮಾಕ್ಕೆ ಸಾಮಾನ್ಯ ಹೆಸರೊಂದನ್ನು ಇಡಲು ರಾಜಮೌಳಿ ಮುಂದಾಗಿದ್ದಾರೆ.

ರಾಜಮೌಳಿ ತಮ್ಮ ಮುಂದಿನ ಸಿನಿಮಾಕ್ಕೆ ಸದ್ಯಕ್ಕಾಗಿ ಎರಡು ಹೆಸರುಗಳನ್ನು ಆಯ್ಕೆ ಮಾಡಿದ್ದಾರೆ. ಅದರಲ್ಲಿ ಒಂದು ಹೆಸರನ್ನು ಅಂತಿಮಗೊಳಿಸಲು ಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ‘ಚಕ್ರವರ್ತಿ’ ಹಾಗೂ ‘ಮಹಾರಾಜ್’ ಹೆಸರುಗಳು ರಾಜಮೌಳಿ ಟೇಬಲ್​ ಮೇಲಿದ್ದು ಈ ಎರಡರಲ್ಲಿ ಒಂದು ಹೆಸರು ಅಂತಿಮಗೊಳ್ಳಲಿದೆ ಎನ್ನಲಾಗುತ್ತಿದೆ. ಈ ಸಿನಿಮಾಕ್ಕೆ ಪೌರಾಣಿಕ ಕತೆಯ ನಂಟು ಇರುವ ಕಾರಣ ಇದೇ ‘ಚಕ್ರವರ್ತಿ’ ಅಥವಾ ‘ಮಹಾರಾಜ್’ ಹೆಸರು ಸೂಕ್ತ ಎನ್ನುವುದು ರಾಜಮೌಳಿಯ ಅಭಿಪ್ರಾಯ.

ರಾಜಮೌಳಿ ಈಗಾಗಲೇ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಿನಿಮಾಕ್ಕಾಗಿ ಕೆಲವು ಹಾಲಿವುಡ್ ಸಂಸ್ಥೆಗಳೊಟ್ಟಿಗೆ ಒಪ್ಪಂದ ಮಾಡಿಕೊಂಡಿದ್ದು ತಾಂತ್ರಿಕವಾಗಿ ರಿಚ್ ಸಿನಿಮಾ ಕಟ್ಟಿಕೊಡುವ ಪ್ರಯತ್ನದಲ್ಲಿದ್ದಾರೆ. ಎರಡು ದಶಕದಲ್ಲಿ ಇದೇ ಮೊದಲ ಬಾರಿಗೆ ತಮ್ಮ ಖಾಯಂ ತಂಡದಿಂದ ಕೆಲವರನ್ನು ರಾಜಮೌಳಿ ಕೈಬಿಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 2009ರಿಂದ ತಮ್ಮ ಎಲ್ಲ ಸಿನಿಮಾಕ್ಕೂ ಕೆಲಸ ಮಾಡಿರುವ ಸಿನಿಮಾಟೊಗ್ರಫರ್ ಸೆಂಥಿಲ್ ಕುಮಾರ್ ಅವರನ್ನು ಈ ಸಿನಿಮಾದಿಂದ ರಾಜಮೌಳಿ ಕೈಬಿಡಲಿದ್ದಾರೆ ಎನ್ನಲಾಗುತ್ತಿದೆ. ತಮ್ಮ ಸಂಬಂಧಿ, ನೆಚ್ಚಿನ ಸಂಗೀತ ನಿರ್ದೇಶಕ ಕೀರವಾಣಿಯನ್ನೂ ಕೈಬಿಡಲಿದ್ದಾರಂತೆ. ಸಿನಿಮಾದ ಎಡಿಟರ್ ಸಹ ಬದಲಾಗಲಿದ್ದಾರೆ ಎಂಬ ಮಾತುಗಳಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ