RRR Teaser: 45 ಸೆಕೆಂಡ್​ನಲ್ಲಿ ಅದ್ಭುತ ತೋರಿಸಿದ ರಾಜಮೌಳಿ; ಆರ್​ಆರ್​ಆರ್​ ಟೀಸರ್​ನಲ್ಲಿ ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ಅಬ್ಬರ

SS Rajamouli: ‘ಆರ್​ಆರ್​ಆರ್​’ ತಂಡ ಬಿಡುಗಡೆ ಮಾಡಿರುವ ಟೀಸರ್​ ಅವಧಿ ಕೇವಲ 45 ಸೆಕೆಂಡ್​​ಗಳು. ಆದರೂ ಕೂಡ ಅದರಲ್ಲಿ ಅದ್ಭುತವನ್ನೇ ತೋರಿಸಿದ್ದಾರೆ ನಿರ್ದೇಶಕ ರಾಜಮೌಳಿ. ಹಲವು ಅಂಶಗಳು ಗಮನ ಸೆಳೆಯುತ್ತಿವೆ.

RRR Teaser: 45 ಸೆಕೆಂಡ್​ನಲ್ಲಿ ಅದ್ಭುತ ತೋರಿಸಿದ ರಾಜಮೌಳಿ; ಆರ್​ಆರ್​ಆರ್​ ಟೀಸರ್​ನಲ್ಲಿ ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ಅಬ್ಬರ
ಆರ್​ಆರ್​ಆರ್​ ಟೀಸರ್​ನಲ್ಲಿ ರಾಮ್​ ಚರಣ್​
Updated By: ಮದನ್​ ಕುಮಾರ್​

Updated on: Nov 01, 2021 | 3:54 PM

ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘ಆರ್​ಆರ್​ಆರ್​’ ಚಿತ್ರಕ್ಕೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಜ್ಯೂ. ಎನ್​ಟಿಆರ್​, ರಾಮ್​ ಚರಣ್​, ಆಲಿಯಾ ಭಟ್​, ಅಜಯ್​ ದೇವಗನ್​ ಮುಖ್ಯಭೂಮಿಕೆ ನಿಭಾಯಿಸಿರುವ ಈ ಸಿನಿಮಾದ ಟೀಸರ್​ ಈಗ ಬಿಡುಗಡೆ ಆಗಿದೆ. ಭಾರತೀಯ ಸಿನಿಮಾ ಜಗತ್ತಿನಲ್ಲಿ ಮಾಂತ್ರಿಕ ಎಂದೇ ಕರೆಸಿಕೊಳ್ಳುವ ನಿರ್ದೇಶಕ ರಾಜಮೌಳಿ ಅವರು ‘ಆರ್​ಆರ್​ಆರ್​’ ಸಿನಿಮಾ ಮೂಲಕ ಮತ್ತೆ ಮೋಡಿ ಮಾಡುವುದು ಖಚಿತ ಎಂಬುದಕ್ಕೆ ಈ ಟೀಸರ್​ ಸಾಕ್ಷಿ ಒದಗಿಸುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಟೀಸರ್​ 37 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

ಈ ಟೀಸರ್​ ಅವಧಿ ಕೇವಲ 45 ಸೆಕೆಂಡ್​​ಗಳು. ಆದರೂ ಕೂಡ ಅದರಲ್ಲಿ ಅದ್ಭುತವನ್ನೇ ತೋರಿಸಿದ್ದಾರೆ ನಿರ್ದೇಶಕ ರಾಜಮೌಳಿ. ಅದ್ದೂರಿ ಸೆಟ್​ಗಳು, ಭರ್ಜರಿ ಆ್ಯಕ್ಷನ್​ ದೃಶ್ಯಗಳು, ಅತ್ಯಾಧುನಿಕ ವಿಎಫ್​ಎಕ್ಸ್​ ಸೇರಿದಂತೆ ಹಲವು ಅಂಶಗಳು ಗಮನ ಸೆಳೆಯುತ್ತಿವೆ. 2022ರ ಜ.7ರಂದು ‘ಆರ್​ಆರ್​ಆರ್​’ ಚಿತ್ರ ವಿಶ್ವಾದ್ಯಂತ ತೆರೆಕಾಣಲಿದೆ. ಟೀಸರ್​ ಹೀಗಿದೆ ಎಂದಮೇಲೆ, ಟ್ರೇಲರ್​ ಹೇಗಿರಬಹುದು ಎಂಬ ಕೌತುಕ ಮೂಡಿದೆ. ಈ ಟೀಸರ್​ನಲ್ಲಿ ಆಲಿಯಾ ಪಾತ್ರ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಟ್ರೇಲರ್​ನಲ್ಲಿ ಅವರ ಪಾತ್ರದ ಬಗ್ಗೆ ಮತ್ತಷ್ಟು ಅಪ್​ಡೇಟ್​ ಸಿಗಲಿ ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ.

ದೇಶಭಕ್ತಿಯ ಕಥಾಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ಜೂ.ಎನ್​ಟಿಆರ್ ಕೋಮರಂ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡರೆ, ರಾಮ್​ ಚರಣ್ ತೇಜ ಅಲ್ಲುರಿ ಸೀತಾರಾಮ ರಾಜು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಗೆಯೇ ಈ ಬಿಗ್ ಬಜೆಟ್ ಚಿತ್ರಕ್ಕೆ ಡಿ.ವಿ ದಾನಯ್ಯ ಸುಮಾರು 400 ಕೋಟಿ ಬಂಡವಾಳ ಹೂಡಿದ್ದಾರೆ. ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದು, ಈಗಾಗಲೇ ‘ದೋಸ್ತಿ’ ಹಾಡು ಬಿಡುಗಡೆಯಾಗಿ ಧೂಳೆಬ್ಬಿಸಿದೆ.

‘ನಮ್ಮ ಸಿನಿಮಾ ಬಗ್ಗೆ ನಾವೇ ಹೆಚ್ಚು ಹೇಳಿಕೊಳ್ಳುವುದು ಸರಿಯಲ್ಲ. ಆದರೆ ಇದು ಎಲ್ಲರ ನಿರೀಕ್ಷೆಗೆ ತಕ್ಕಂತೆ ಮೂಡಿಬರುತ್ತಿದೆ ಎಂದು ನಾನು ಭರವಸೆ ಕೊಡುತ್ತೇನೆ. ಇದೇ ಮೊದಲ ಬಾರಿಗೆ ಆರ್​ಆರ್​ಆರ್​ ಸಿನಿಮಾದ ಸಾಹಸ ದೃಶ್ಯಗಳನ್ನು ನೋಡುವಾಗ ನನಗೆ ಕಣ್ಣೀರು ಬಂತು. ಅಷ್ಟೊಂದು ನೋವಿನ ಕಥೆ ಇದರಲ್ಲಿ ಇದೆ. ಪ್ರೇಕ್ಷಕರಿಗೂ ಅದು ಕನೆಕ್ಟ್​ ಆಗಲಿದೆ’ ಎಂದು ಈ ಹಿಂದಿನ ಸಂದರ್ಶನವೊಂದರಲ್ಲಿ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್​ ಹೇಳಿದ್ದರು. ಆ ಮಾತು ಕೇಳಿದಾಗಿನಿಂದ ಅಭಿಮಾನಿಗಳ ಮನದಲ್ಲಿ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ.

ಇದನ್ನೂ ಓದಿ:

ಪುನೀತ್ ಪಾರ್ಥೀವ ಶರೀರದ ಪಕ್ಕ ನಿಂತು ಜ್ಯೂ. ಎನ್ ಟಿ ಆರ್ ಶಿವಣ್ಣರನ್ನು ಸಂತೈಸಿದ್ದು ಮನಕಲಕುವಂತಿತ್ತು

ರಾಜಮೌಳಿ ಜನ್ಮದಿನ: ಅಪರೂಪದ ಫೋಟೋಗಳ ಮೂಲಕ ಸಿನಿಮಾ ಮಾಂತ್ರಿಕನಿಗೆ ‘ಆರ್​ಆರ್​ಆರ್​’ ತಂಡದ ವಿಶ್​