ಆರೋಪಗಳ ಬಳಿಕ ವಿಡಿಯೋ ಹಂಚಿಕೊಂಡ ಎಸ್​ಎಸ್ ರಾಜಮೌಳಿ, ಹೇಳಿದ್ದೇನು?

|

Updated on: Mar 01, 2025 | 4:27 PM

SS Rajamouli: ಎಸ್​ಎಸ್ ರಾಜಮೌಳಿಯ ಹಳೆಯ ಗೆಳೆಯರೊಬ್ಬರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಯುವ ಮುನ್ನ ಮಾಡಿರುವ ವಿಡಿಯೋನಲ್ಲಿ ನನ್ನ ಸಾವಿಗೆ ಎಸ್​ಎಸ್ ರಾಜಮೌಳಿ ಕಾರಣ ಎಂದು ಹೇಳಿದ್ದಾರೆ. ಆ ಘಟನೆಯ ಬಳಿಕ ಇದೀಗ ರಾಜಮೌಳಿ ಹೊಸ ವಿಡಿಯೋ ಒಂದನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋನಲ್ಲಿ ಮಾತನಾಡಿರುವುದು ಯಾವುದರ ಬಗ್ಗೆ?

ಆರೋಪಗಳ ಬಳಿಕ ವಿಡಿಯೋ ಹಂಚಿಕೊಂಡ ಎಸ್​ಎಸ್ ರಾಜಮೌಳಿ, ಹೇಳಿದ್ದೇನು?
Ss Rajamouli
Follow us on

ಕೆಲ ದಿನಗಳ ಹಿಂದೆಯಷ್ಟೆ ಎಸ್​ಎಸ್ ರಾಜಮೌಳಿಯ ಹಳೆಯ ಮಿತ್ರ ಶ್ರೀನಿವಾಸ ರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ತನ್ನ ಸಾವಿಗೆ ಎಸ್​ಎಸ್ ರಾಜಮೌಳಿ (SS Rajamouli) ಮತ್ತು ಅವರ ಪತ್ನಿ ರಮಾ ರಾಜಮೌಳಿ ಕಾರಣ ಎಂದು ಹೇಳಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಸುಮೋಟೊ ಕೇಸು ದಾಖಲಿಸಿಕೊಂಡು, ರಾಜಮೌಳಿಯನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಸಹ ಶ್ರೀನಿವಾಸ್ ರಾವ್ ವಿಡಿಯೋನಲ್ಲಿ ಒತ್ತಾಯಿಸಿದ್ದರು. ಆದರೆ ಪೊಲೀಸರು ರಾಜಮೌಳಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದು ವರದಿಯಾಗಿಲ್ಲ. ಇದರ ನಡುವೆ ಇಂದು (ಮಾರ್ಚ್ 01) ರಾಜಮೌಳಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಎಸ್​ಎಸ್ ರಾಜಮೌಳಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ ಈ ವಿಡಿಯೋ ಸ್ನೇಹಿತನ ಆತ್ಮಹತ್ಯೆ ಕುರಿತಾಗಿ ಮಾಹಿತಿ ನೀಡಲು ಅಲ್ಲ ಬದಲಿಗೆ ತಮ್ಮ ಅಣ್ಣ ಎಂಎಂ ಕೀರವಾಣಿಯ ಹೊಸ ಪ್ರಯತ್ನದ ಕುರಿತಾಗಿ ಮಾಹಿತಿ ಹಂಚಿಕೊಳ್ಳಲು. ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಮೊದಲ ಬಾರಿಗೆ ಲೈವ್ ಕಾನ್ಸರ್ಟ್ ಮಾಡುತ್ತಿದ್ದಾರೆ. ಈ ಲೈವ್ ಕಾನ್ಸರ್ಟ್ ಬಗ್ಗೆ ಮಾಹಿತಿ ಹಂಚಿಕೊಳ್ಳಲೆಂದು ವಿಡಿಯೋ ಶೇರ್ ಮಾಡಿದ್ದಾರೆ ರಾಜಮೌಳಿ.

ವಿಡಿಯೋನಲ್ಲಿ ಮಾತನಾಡಿರುವ ರಾಜಮೌಳಿ, ‘ಮಾರ್ಚ್ 22ಕ್ಕಾಗಿ ನಾನು ಬಹಳ ಕಾತರದಿಂದ ಕಾಯುತ್ತಿದ್ದೇನೆ. ಏಕೆಂದರೆ ಅಂದು ಎಂಎಂ ಕೀರವಾಣಿಯವರ ‘ನಾ ಟೂರ್ ಕಾನ್ಸರ್ಟ್’ ನಡೆಯಲಿದೆ. ಅಂದಿನ ಕಾನ್ಸರ್ಟ್​ನಲ್ಲಿ ನನ್ನ ಸಿನಿಮಾದ ಹಾಡುಗಳು, ಕೀರವಾಣಿ ಸಂಗೀತ ನೀಡಿರುವ ಇತರೆ ಸಿನಿಮಾಗಳ ಹಾಡುಗಳು ಇರುತ್ತವೆ. ಜೊತೆಗೆ ಕಾನ್ಸರ್ಟ್​ ಗಾಗಿ ಎಂದೇ ಕೀರವಾಣಿ ಇನ್ನೂ ಕೆಲವು ಹಾಡುಗಳನ್ನು ಮಾಡಿದ್ದಾರೆ ಎಂಬ ಮಾಹಿತಿ ಇದೆ’ ಎಂದಿದ್ದಾರೆ ರಾಜಮೌಳಿ.

ಮಾತು ಮುಂದುವರೆಸಿ, ‘ಎಂಎಂ ಕೀರವಾಣಿಗೆ ನನ್ನ ಬೇಡಿಕೆ ಏನೆಂದರೆ ಕೀರವಾಣಿ ಒಎಸ್​ಟಿ (ಒರಿಜಿನಲ್ ಸೌಂಡ್ ಟ್ರ್ಯಾಕ್) ಗಳನ್ನು ಸಹ ಪ್ಲೇ ಮಾಡಬೇಕು, ನನ್ನ ಸಿನಿಮಾಕ್ಕಾಗಲಿ, ಬೇರೆ ಸಿನಿಮಾಗಳಿಗಾಗಲಿ ಅದ್ಭುತವಾದ ಹಿನ್ನೆಲೆ ಸಂಗೀತವನ್ನು ಅವರು ನೀಡಿದ್ದಾರೆ. ಅವರ ಹಾಡುಗಳಿಗಿಂತಲೂ ಅವರ ಹಿನ್ನೆಲೆ ಸಂಗೀತ ಬಹಳ ಜನಪ್ರಿಯ. ನಾನಂತೂ ಅವರ ಹಿನ್ನೆಲೆ ಸಂಗೀತದ ದೊಡ್ಡ ಅಭಿಮಾನಿ, ಹಾಗಾಗಿ ಅವರು ತಮ್ಮ ಲೈವ್ ಕಾನ್ಸರ್ಟ್​ನಲ್ಲಿ ಹಾಡುಗಳ ಜೊತೆಗೆ ಅವರು ಸಿನಿಮಾಗಳಿಗೆ ನೀಡಿರುವ ಹಿನ್ನೆಲೆ ಸಂಗೀತವನ್ನು ಸಹ ಪ್ರದರ್ಶಿಸಬೇಕು’ ಎಂದಿದ್ದಾರೆ ರಾಜಮೌಳಿ.

ಇತ್ತೀಚೆಗೆ ಈ ಲೈವ್ ಕಾನ್ಸರ್ಟ್​ಗಳ ಟ್ರೆಂಡ್ ಬಲು ಜೋರಾಗಿ ನಡೆಯುತ್ತಿದೆ. ದಿಲ್ಜಿತ್ ದೊಸ್ಸಾಂಜ್ ಸೇರಿದಂತೆ ಹಲವಾರು ಗಾಯಕರು, ಸಂಗೀತ ನಿರ್ದೇಶಕರುಗಳು ಲೈವ್ ಕಾನ್ಸರ್ಟ್​ಗಳನ್ನು ಮಾಡುತ್ತಿದ್ದಾರೆ. ಈ ಲೈವ್ ಕಾನ್ಸರ್ಟ್​ನ ಟಿಕೆಟ್​ಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ. ಇತ್ತೀಚೆಗೆ ಸ್ವತಃ ಪ್ರಧಾನಿ ಮೋದಿ ಸಹ ರಾಜ್ಯಗಳು ಲೈವ್ ಕಾನ್ಸರ್ಟ್​ಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಸೂಚನೆ ನೀಡಿದ್ದಾರೆ. ಇದೀಗ ಕೀರವಾಣಿ ಸಹ ಲೈವ್ ಕಾನ್ಸರ್ಟ್​ಗೆ ಇಳಿದಿದ್ದು, ಮೊದಲ ಬಾರಿಗೆ ಲೈವ್ ಪ್ರದರ್ಶನ ನೀಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ