ತೆಲುಗು ಚಿತ್ರರಂಗದ ನಿರ್ದೇಶಕರು ಈಗ ಗ್ಲೋಬಲ್ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಅದರಲ್ಲಿ ಮೊದಲಿಗರೆಂದರೆ ಅದು ರಾಜಮೌಳಿ. ಆದರೆ ರಾಜಮೌಳಿಯ ಹೊರತಾಗಿ ಅವರಷ್ಟೆ ಪ್ರತಿಭೆ, ಸಾಮರ್ಥ್ಯ ಇರುವ ಇನ್ನೂ ಕೆಲ ನಿರ್ದೇಶಕರು ತೆಲುಗು ಚಿತ್ರರಂಗದಲ್ಲಿದ್ದಾರೆ. ಅವರಲ್ಲಿ ಒಬ್ಬರು ಸುಕುಮಾರ್. ಇತ್ತೀಚೆಗಷ್ಟೆ ‘ಪುಷ್ಪ 2’ ಸಿನಿಮಾದ ಮೂಲಕ ದಾಖಲೆಗಳನ್ನು ಸೃಷ್ಟಿಸಿರುವ ಸುಕುಮಾರ್, ಸಿನಿಮಾ ವಿಷಯಕ್ಕೆ ಬಂದರೆ ಬಹಳ ನಿಷ್ಠುರ ಮನಸ್ಥಿತಿಯವರಂತೆ. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ.
ಸುಕುಮಾರ್ ಕುಟುಂಬದವರು ಸಹ ಮಹಾ ಸಿನಿಮಾ ಪ್ರೇಮಿಗಳು. ಸಿನಿಮಾ ರಂಗದಲ್ಲಿಯೇ ಭವಿಷ್ಯ ಕಟ್ಟಿಕೊಳ್ಳುತ್ತಿದ್ದಾರೆ. ಸುಕುಮಾರ್ ಪತ್ನಿ ನಿರ್ಮಾಪಕಿ, ಸುಕುಮಾರ್ ಪುತ್ರಿ ನಿರ್ದೇಶಕಿ ಮತ್ತು ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಆದರೆ ಸುಕುಮಾರ್ ಅದೆಷ್ಟು ನಿಷ್ಠುರ ವ್ಯಕ್ತಿತ್ವದವರೆಂದರೆ ತಮ್ಮ ಸ್ವಂತ ಮಗಳು, ಕೇಳಿಕೊಂಡರೂ ಸಹ ‘ಪುಷ್ಪ’ ಸಿನಿಮಾದಲ್ಲಿ ಪಾತ್ರ ಕೊಡಲಿಲ್ಲವಂತೆ.
ಸುಕುಮಾರ್ ಪುತ್ರಿ ನಟಿಸಿರುವ ‘ಗಾಂಧಿ ತಾತ ಚಟ್ಟು’ ಸಿನಿಮಾ ಜನವರಿ 24ಕ್ಕೆ ಬಿಡುಗಡೆ ಆಗುತ್ತಿದ್ದು, ಸಿನಿಮಾದ ಪ್ರಚಾರ ಕಾರ್ಯ ಬಲು ಜೋರಾಗಿ ನಡೆಯುತ್ತಿದೆ. ನಿನ್ನೆಯಷ್ಟೆ ಸಿನಿಮಾ ತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಈ ಪತ್ರಿಕಾಗೋಷ್ಠಿಗೆ ಪತ್ರಕರ್ತರಾಗಿ ಸ್ವತಃ ಸುಕುಮಾರ್ ಆಗಮಿಸಿದ್ದರು. ಈ ವೇಳೆ ಸುಕುಮಾರ್ ಪುತ್ರಿ ಸುಕೃತಿ ವೇಣಿ ನೀಡಿದ ಉತ್ತರಗಳು ನೆರೆದಿದ್ದವರಿಗೆ ನಗು ತರಿಸಿದವು.
ಇದನ್ನೂ ಓದಿ:2000 ಕೋಟಿ ರೂ. ಕಲೆಕ್ಷನ್ ಮಾಡಲು ‘ಪುಷ್ಪ 2’ ಚಿತ್ರತಂಡದ ಹೊಸ ತಂತ್ರ
ನೀವು ನಿಮ್ಮ ತಂದೆಯ ಸಿನಿಮಾಗಳಲ್ಲಿ ಏಕೆ ನಟಿಸಿಲ್ಲ? ಎಂದು ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರಿಸಿದ ಸುಕೃತಿ ವೇಣಿ, ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳಲ್ಲಿ ಪಾತ್ರ ನೀಡುವಂತೆ ನಾನು ಕೇಳಿಕೊಂಡೆ, ಆದರೆ ನನ್ನ ತಂದೆ ಪಾತ್ರ ನೀಡಲಿಲ್ಲ ಬದಲಿಗೆ ಆಡಿಷನ್ ನೀಡುವಂತೆ ಹೇಳಿದರು’ ಎಂದಿದ್ದಾರೆ.
ಆ ನಂತರ ಸ್ವತಃ ಸುಕುಮಾರ್, ಪುತ್ರಿಕೆ ಪತ್ರಕರ್ತರ ರೀತಿ ಕೆಲವು ಪ್ರಶ್ನೆಗಳನ್ನು ಕೇಳಿದರು. ಈ ವೇಳೆ ತಂದೆಯ ಪ್ರಶ್ನೆಗಳಿಗೆ ಉತ್ತರಿಸಿದ ಸುಕೃತಿ, ಕೊನೆಯಲ್ಲಿ ‘ನಿಮ್ಮ ಹೆಸರು ಗೊತ್ತಾಗಲಿಲ್ಲ’ ಎಂದು ತಮಾಷೆ ಮಾಡಿದ್ದು ಪತ್ರಿಕಾಗೋಷ್ಠಿಯ ಹೈಲೆಟ್ ಆಗಿತ್ತು. ‘ಗಾಂಧಿ ತಾತ ಚಟ್ಟು’ ಸಿನಿಮಾ ಶಾಲಾ ಬಾಲಕಿಯೊಬ್ಬಳ ಕತೆಯಾಗಿದೆ. ಸಿನಿಮಾದಲ್ಲಿ ಬಾಲಕಿಯೊಬ್ಬಾಕೆ ಗಿಡವೊಂದನ್ನು ಉಳಿಸುವ ಕತೆ ಒಳಗೊಂಡಿದೆ. ಸಿನಿಮಾ ಅನ್ನು ಪದ್ಮಾವತಿ ಮಲ್ಲಾಡಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಜನವರಿ 24ಕ್ಕೆ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:08 pm, Fri, 17 January 25