
ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಭಾರತದಲ್ಲಿ ಸಿಕ್ಕಾಪಟ್ಟೆ ಅಭಿಮಾನಿಗಳಿರುವುದು ವಿಶೇಷವಲ್ಲ ಬಿಡಿ. ಆದರೆ ತಮಿಳಿನ ಈ ಸೂಪರ್ಸ್ಟಾರ್ಗೆ ಜಪಾನ್ನಲ್ಲಿ ಭರ್ಜರಿ ಫ್ಯಾನ್ಸ್ಗಳಿರುವುದು ನಿಮಗೆ ಗೊತ್ತೇ? ಹೌದು. ರಜನಿಗೆ ಜಪಾನ್ನಲ್ಲೂ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಎಷ್ಟೋ ಜನ ಅಭಿಮಾನಿಗಳು ರಜನಿ ಅವರ ಚಿತ್ರ ತಮಿಳುನಾಡಿನಲ್ಲಿ ಬಿಡುಗಡೆಯಾಗುವುದನ್ನು ನೋಡುವುದಕ್ಕಾಗಿಯೇ ಬಂದಿದ್ದು ಈ ಹಿಂದೆ ಬಹಳ ಸುದ್ದಿಯಾಗಿತ್ತು. ಇಂತಿಪ್ಪ ರಜನಿ ಪ್ರಭೆ, ಜಪಾನ್ನಲ್ಲಿ ಪ್ರತೀ ಬಾರಿಯೂ ಅದ್ಭುತ ಕೆಲಸ ಮಾಡುತ್ತದೆ. ಉದಾಹರಣೆಗೆ ಈ ಹಿಂದಿನ ಮುತ್ತು, ಪಡಿಯಪ್ಪ, ಶಿವಾಜಿ ಸೇರಿದಂತೆ ಅನೇಕ ಚಿತ್ರಗಳು ಜಪಾನ್ನಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದವು. ಈಗ ದರ್ಬಾರ್ ಚಿತ್ರದ ಸರದಿ.
ಕರೊನಾ ಕಾರಣದಿಂದಾಗಿ ದರ್ಬಾರ್ ಚಿತ್ರ ಜಪಾನಿ ಭಾಷೆಗೆ ಡಬ್ ಆಗಿ ಇತ್ತೀಚೆಗಷ್ಟೇ ಅಲ್ಲಿ ಬಿಡುಗಡೆಯಾಗಿದೆ. ಭಾರತದಲ್ಲಿ ನೆಲಕಚ್ಚಿದ್ದ ದರ್ಬಾರ್ ಚಿತ್ರ, ಜಪಾನ್ನಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಜಪಾನ್ನಲ್ಲಿರುವ ರಜನಿ ಅಭಿಮಾನಿಗಳು ಈ ಮಾಹಿತಿಯನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಭಾರತದಲ್ಲಿ 2020ರ ಜನವರಿಯಲ್ಲಿ ಬಿಡುಗಡೆಯಾಗಿತ್ತು. ಅಭಿಮಾನಿಗಳಿಂದ, ವಿಮರ್ಶಕರಿಂದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಜಪಾನ್ನಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಾಳೆ ಅಂದರೆ ಜುಲೈ 21ರ ತನಕ ಜಪಾನ್ನ ಎಮ್ಕೆಸಿ ಚಿತ್ರಮಂದಿರದಲ್ಲಿ ದರ್ಬಾರ್ ಚಿತ್ರ ಹೌಸ್ಫುಲ್ ಶೋಗಳಾಗಿ ಬುಕ್ ಆಗಿವೆ. ಭಾರತದಲ್ಲಿ ಇದರ ಗಳಿಕೆ ಉತ್ತಮವಾಗಿರದಿದ್ದರೂ ಜಪಾನ್ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ದರ್ಬಾರ್ ಚಿತ್ರವನ್ನು ಎ.ಆರ್.ಮುರುಗದಾಸ್ ನಿರ್ದೇಶಿಸಿದ್ದು, ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ.
ಹೌಸ್ಫುಲ್ ಆದ ಕುರಿತು ಟ್ವಿಟರ್ನಲ್ಲಿ ವೈರಲ್ ಆಗಿರುವ ವಿಡಿಯೊ:
ರಜನಿಕಾಂತ್ ‘ಅಣ್ಣಾತ್ತೆ’ ಚಿತ್ರದ ಚಿತ್ರೀಕರಣಕ್ಕಾಗಿ ಕೊಲ್ಕತ್ತಾಗೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಸನ್ ಪಿಚ್ಚರ್ಸ್’ ನಿರ್ಮಿಸುತ್ತಿದ್ದು ಶಿವ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ನಯನತಾರಾ, ಕೀರ್ತಿ ಸುರೇಶ್, ಮೀನಾ, ಖುಷ್ಬು, ಪ್ರಕಾಶ್ ರಾಜ್, ಸೂರಿ, ಸತೀಶ್ ಸೇರಿದಂತೆ ಬಹುದೊಡ್ಡ ತಾರಾ ಬಳಗವಿದೆ.
ಇದನ್ನೂ ಓದಿ:
ನವರಸನಾಯಕ ಜಗ್ಗೇಶ್ ಅವರ ಬಾಳ ಪಯಣವನ್ನು ಚಿತ್ರಗಳಲ್ಲಿ ನೋಡುವ ಕುತೂಹಲವಿದೆಯೇ?; ಇಲ್ಲಿದೆ ನೋಡಿ
(Superstar Rajinikanth’s movie Darbar is running housefully in Japan)
Published On - 3:47 pm, Tue, 20 July 21