
ಸ್ಟಾರ್ ನಟರ ಪತ್ನಿಯರು ಪತಿ ಮತ್ತು ಮಕ್ಕಳ ಕೇರ್ಟೇಕರ್ಗಳಾಗಿ ಮಾತ್ರವೇ ಉಳಿದು ಬಿಡುವುದನ್ನು ನೋಡಿದ್ದೇವೆ. ಒಳ್ಳೆಯ ನಟಿಯರಾಗಿದ್ದರೂ ಸಹ ಪತಿ ಸ್ಟಾರ್ ನಟನಾದ ಕಾರಣಕ್ಕೆ ಚಿತ್ರರಂಗದಿಂದ ದೂರ ಉಳಿಯುವುದು, ವೃತ್ತಿ ಜೀವನ ತ್ಯಾಗ ಮಾಡಿರುವ ಹಲವು ನಟಿಯರು ನೋಡಲು ಸಿಗುತ್ತಾರೆ. ಆದರೆ ತಮಿಳಿನ ಸ್ಟಾರ್ ನಟ ಸೂರ್ಯ ತನ್ನ ಪತ್ನಿಗಾಗಿ ಒಂದು ಮಹತ್ವದ ನಿರ್ಣಯ ತೆಗೆದುಕೊಂಡಿದ್ದಾರೆ. ಪತ್ನಿ ತನ್ನ ಪತಿಗಾಗಿ ತ್ಯಾಗ ಮಾಡುತ್ತಾಳೆ, ಆದರೆ ಸೂರ್ಯ ಈಗ ಪತ್ನಿಗಾಗಿ ತ್ಯಾಗವೊಂದನ್ನು ಮಾಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ, ಅವರು ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಚೆನ್ನೈನಲ್ಲಿಯೇ. ಚೆನ್ನೈನಲ್ಲಿ ಸೂರ್ಯ ಅವರ ನೆರೆಯ ಮನೆಯಲ್ಲಿಯೇ ಡಾ ರಾಜ್ಕುಮಾರ್ ಅವರ ಮನೆಯೂ ಇತ್ತು. ಸೂರ್ಯ ನಟರಾದ ಬಳಿಕ ಮುಂಬೈ ಮೂಲದ ನಟಿ ಜ್ಯೋತಿಕ ಅವರನ್ನು ವಿವಾಹವಾದರು. ಜ್ಯೋತಿಕ ಆ ಸಮಯದಲ್ಲಿ ದೊಡ್ಡ ನಟಿ. ಹಿಂದಿ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸ್ಟಾರ್ ನಟರೊಟ್ಟಿಗೆ ನಟಿಸಿದ್ದರು. ಸೂರ್ಯ ಅವರನ್ನು ವಿವಾಹವಾದ ಬಳಿಕ ಮುಂಬೈ ತೊರೆದು ಚೆನ್ನೈನಲ್ಲಿ ಜ್ಯೋತಿಕಾ ನೆಲೆಸಿದರು.
ಸೂರ್ಯ ಅವರನ್ನು ಮದುವೆಯಾಗುವ ಮುಂಚೆ ಸುಮಾರು ಎರಡು ದಶಕಕ್ಕೂ ಹೆಚ್ಚು ಸಮಯ ಜ್ಯೋತಿಕಾ ಮುಂಬೈನಲ್ಲಿ ನೆಲೆಸಿದ್ದರು. ಆದರೆ ಸೂರ್ಯಾಗಾಗಿ ಮುಂಬೈ ಅನ್ನು ಬಿಟ್ಟು ಬಂದರು. ಆದರೆ ಈಗ ಸೂರ್ಯ, ಜ್ಯೋತಿಕಾಗಾಗಿ ಚೆನ್ನೈ ಬಿಟ್ಟು ಮುಂಬೈಗೆ ಹೋಗಿದ್ದಾರೆ. ಸೂರ್ಯ ಈಗ ಮುಂಬೈನಲ್ಲಿ ನೆಲೆಸಿದ್ದಾರೆ. ಈ ಬಗ್ಗೆ ಅನುಪಮಾ ಚೋಪ್ರಾ ಅವರೊಟ್ಟಿಗಿನ ಸಂದರ್ಶನದಲ್ಲಿ ಮಾತನಾಡಿರುವ ಸೂರ್ಯ, ‘ಜ್ಯೋತಿಕ ಎರಡು ದಶಕಗಳ ಕಾಲ ಮುಂಬೈನಲ್ಲಿ ನೆಲೆಸಿದ್ದರು. ನನಗಾಗಿ ಅವರು ಮುಂಬೈ ಬಿಟ್ಟು ಬಂದರು. ಆದರೆ ಈಗ ನಾನು ಜ್ಯೋತಿಕಾಗಾಗಿ ಮುಂಬೈಗೆ ಶಿಫ್ಟ್ ಆಗಿದ್ದೇನೆ. ಪ್ರತಿ ಬಾರಿಯೂ ಪತ್ನಿಯೇ ಏಕೆ ತ್ಯಾಗ ಮಾಡಬೇಕು, ಈ ಒಂದು ಸಣ್ಣ ತ್ಯಾಗವನ್ನು ನಾನೂ ಮಾಡೋಣ ಎಂಬ ಕಾರಣಕ್ಕೆ ನಾನು ಮುಂಬೈಗೆ ಶಿಫ್ಟ್ ಆಗಿದ್ದೇನೆ’ ಎಂದಿದ್ದಾರೆ ಸೂರ್ಯ.
ಇದನ್ನೂ ಓದಿ:ಸೂರ್ಯ ಜೊತೆ ನಟಿಸೋ ಚಾನ್ಸ್ ಮಿಸ್ ಮಾಡಿಕೊಂಡ ಮೃಣಾಲ್ಗೆ ಮತ್ತೊಂದು ಅವಕಾಶ
ಸೂರ್ಯ ಪತ್ನಿ ಜ್ಯೋತಿಕಾ ಸಹ ಬ್ಯುಸಿ ನಟಿಯಾಗಿದ್ದು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಹಿಂದಿಯ ‘ಶ್ರೀಕಾಂತ್’ ಮತ್ತು ‘ಶೈತಾನ್’ ಸಿನಿಮಾಗಳಲ್ಲಿ ಜ್ಯೋತಿಕಾ ನಟಿಸಿದ್ದರು. ಈಗ ‘ಡಬ್ಬಾಕಾರ್ಟೆಲ್’ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಕಾದಲ್; ದಿ ಕೋರ್’ ಮಲಯಾಳಂ ಸಿನಿಮಾದ ಜ್ಯೋತಿಕಾರ ನಟನೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಆ ಸಿನಿಮಾದಲ್ಲಿ ಅವರು ಮಮ್ಮುಟಿ ಎದುರು ನಟಿಸಿದ್ದರು. ಸೂರ್ಯ ನಟನೆಯ ‘ಕಂಗುವ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ