ದಕ್ಷಿಣ ಭಾರತದ ಸ್ಟಾರ್ ಕಲಾವಿದರಾದ ತಮನ್ನಾ ಭಾಟಿಯಾ ಮತ್ತು ವಿಜಯ್ ಸೇತುಪತಿ ಬಹುಭಾಷೆಯಲ್ಲಿ ಫೇಮಸ್. ಅವರ ಕೈಯಲ್ಲಿ ಸಿಕ್ಕಾಪಟ್ಟೆ ಆಫರ್ಗಳಿವೆ. ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇಷ್ಟೆಲ್ಲ ಬ್ಯುಸಿ ಇರುವಾಗಲೇ ಅವರು ಸಿನಿಮಾ ಹೊರತಾದ ಒಂದು ಕೆಲಸಕ್ಕೆ ಕೈ ಹಾಕಿದ್ದಾರೆ. ಆ ಕೆಲಸದ ಕಾರಣದಿಂದಲೇ ಬೆಂಗಳೂರಿನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಏನು ಈ ಜೋಡಿಯ ಪ್ಲ್ಯಾನ್? ಅಡುಗೆ ಮಾಡೋದು!
ಹೌದು, ದಕ್ಷಿಣ ಭಾರತದ ಎಲ್ಲ ಭಾಷೆಯ ಕಿರುತೆರೆಯಲ್ಲಿ ಆರಂಭ ಆಗಲಿರುವ ‘ಮಾಸ್ಟರ್ ಶೆಫ್’ ಅಡುಗೆ ಕಾರ್ಯಕ್ರಮವನ್ನು ನಡೆಸಿಕೊಡಲು ತಮನ್ನಾ ಭಾಟಿಯಾ ಮತ್ತು ವಿಜಯ್ ಸೇತುಪತಿ ಒಪ್ಪಿಕೊಂಡಿದ್ದಾರೆ. ತೆಲುಗಿನಲ್ಲಿ ತಮನ್ನಾ ಹಾಗೂ ತಮಿಳಿನಲ್ಲಿ ವಿಜಯ್ ಸೇತುಪತಿ ಈ ಶೋ ನಿರೂಪಿಸಲಿದ್ದಾರೆ. ಶೀಘ್ರದಲ್ಲೇ ‘ಮಾಸ್ಟರ್ ಶೆಫ್’ ಕಾರ್ಯಕ್ರಮ ಪ್ರಸಾರ ಆಗಲಿದ್ದು, ಅದರ ಶೂಟಿಂಗ್ ಈಗಾಗಲೇ ಶುರುವಾಗಿದೆ.
ಬೆಂಗಳೂರಿನ ಸ್ಟುಡಿಯೋವೊಂದರಲ್ಲಿ ಈ ಕಾರ್ಯಕ್ರಮದ ಪ್ರೋಮೋ ಶೂಟಿಂಗ್ ನಡೆಯುತ್ತಿದೆ. ಅದಕ್ಕಾಗಿ ತಮನ್ನಾ ಭಾಟಿಯಾ ಮತ್ತು ವಿಜಯ್ ಸೇತುಪತಿ ಒಟ್ಟಿಗೆ ಆಗಮಿಸಿದ್ದಾರೆ. ಒಂದೇ ಸ್ಥಳದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಇಬ್ಬರೂ ಜೊತೆಯಾಗಿ ಫೋಟೋಗೆ ಪೋಸ್ ನೀಡಿದ್ದಾರೆ. ಆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ತಮನ್ನಾ ಅವರು ಸಂಭ್ರಮಿಸಿದ್ದಾರೆ.
ಅಂದಹಾಗೆ, ತಮನ್ನಾ ಹಂಚಿಕೊಂಡಿರುವ ಫೋಟೋದಲ್ಲಿ ವಿಜಯ್ ಸೇತುಪತಿ ಅವರ ಲುಕ್ ಗಮನ ಸೆಳೆಯುತ್ತಿದೆ. ಸಾಲ್ಟ್ ಆ್ಯಂಡ್ ಪೆಪ್ಪರ್ ಹೇರ್ ಸ್ಪೈಲ್ನಲ್ಲಿ ಅವರು ಮಿಂಚುತ್ತಿದ್ದಾರೆ. ಈ ಫೋಟೋ ನೋಡಿದ ಬಳಿಕ ಅವರ ಅಭಿಮಾನಿಗಳಲ್ಲಿ ಮಾಸ್ಟರ್ ಶೆಫ್ ಕಾರ್ಯಕ್ರಮದ ಬಗ್ಗೆ ಭಾರಿ ನಿರೀಕ್ಷೆ ಸೃಷ್ಟಿ ಆಗಿದೆ. 6.8 ಲಕ್ಷಕ್ಕೂ ಅಧಿಕ ಮಂದಿ ಈ ಫೋಟೋವನ್ನು ಲೈಕ್ ಮಾಡಿದ್ದಾರೆ. ತಮನ್ನಾ ಇದೇ ಮೊದಲ ಬಾರಿಗೆ ಈ ಶೋ ಮೂಲಕ ಕಿರುತೆರೆಗೆ ಕಾಲಿಡುತ್ತಿದ್ದಾರೆ.
ತಮಿಳು, ತೆಲುಗು ಮಾತ್ರವಲ್ಲದೆ ಕನ್ನಡ ಮತ್ತು ಮಲಯಾಳಂನಲ್ಲಿಯೂ ‘ಮಾಸ್ಟರ್ ಶೆಫ್’ ಶೋ ಆರಂಭ ಆಗಲಿದೆ. ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಹಾಗೂ ಕನ್ನಡದಲ್ಲಿ ಕಿಚ್ಚ ಸುದೀಪ್ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂಬ ಗುಸುಗುಸು ಹರಿದಾಡುತ್ತಿದೆ. ಇನ್ನಷ್ಟೇ ಅಧಿಕೃತ ಸುದ್ದಿ ಹೊರಬೀಳಬೇಕಿದೆ.
ಈ ಹಿಂದೆ ತಮನ್ನಾ ಮತ್ತು ವಿಜಯ್ ಸೇತುಪತಿ ‘ಧರ್ಮ ದುರೈ’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. 2016ರಲ್ಲಿ ಬಿಡುಗಡೆ ಆದ ಆ ಚಿತ್ರ ಸೂಪರ್ ಹಿಟ್ ಆಗಿತ್ತು. ಆ ಬಳಿಕ ಈಗ ಒಂದೇ ಶೋನಲ್ಲಿ ಜೊತೆಯಾಗಿ ಕೆಲಸ ಮಾಡಲು ಅವರಿಗೆ ಅವಕಾಶ ಸಿಕ್ಕಿದೆ.
ಇದನ್ನೂ ಓದಿ:
ವಿಜಯ್ ಸೇತುಪತಿ ಮೇಲೆ ಕಣ್ಣಿಟ್ಟ ‘ದಿ ಫ್ಯಾಮಿಲಿ ಮ್ಯಾನ್’ ತಂಡ; 3ನೇ ಸೀಸನ್ನಲ್ಲಿ ಬಿಗ್ ಸರ್ಪ್ರೈಸ್?
ಮುಖಕ್ಕೆ ತನ್ನದೇ ಎಂಜಲು ಹಚ್ಚಿಕೊಳ್ಳುವ ತಮನ್ನಾ ಭಾಟಿಯಾ! ವಿಚಿತ್ರ ವರ್ತನೆಗೆ ಕಾರಣ ಏನು?