ತೆಲಂಗಾಣ ಸರ್ಕಾರದಿಂದ ‘ಕೆಜಿಎಫ್​ 2’ಗೆ ಬಂಪರ್ ಆಫರ್; ಚಿತ್ರತಂಡ ಫುಲ್ ಖುಷ್

| Updated By: ರಾಜೇಶ್ ದುಗ್ಗುಮನೆ

Updated on: Apr 12, 2022 | 3:30 PM

ತೆಲಂಗಾಣದಲ್ಲಿ ಟಿಕೆಟ್​ ದರವನ್ನು ಮನಸೋ ಇಚ್ಛೆ ಏರಿಸಲು ಅವಕಾಶವಿಲ್ಲ. ಅಲ್ಲಿ ದರ ನಿಗದಿ ಮಾಡಲಾಗಿದೆ. ಆದರೆ, ‘ಕೆಜಿಎಫ್ 2’ ಸಿನಿಮಾಗೆ ಟಿಕೆಟ್ ದರ ಹೆಚ್ಚಿಸಲು ಅವಕಾಶ ನೀಡಲಾಗಿದೆ.

ತೆಲಂಗಾಣ ಸರ್ಕಾರದಿಂದ ‘ಕೆಜಿಎಫ್​ 2’ಗೆ ಬಂಪರ್ ಆಫರ್; ಚಿತ್ರತಂಡ ಫುಲ್ ಖುಷ್
ಯಶ್
Follow us on

‘ಕೆಜಿಎಫ್​ 2’ ಸಿನಿಮಾ (KGF Chapter 2) ತೆಲುಗು ನಾಡಿನಲ್ಲೂ ದೊಡ್ಡ ಮಟ್ಟದಲ್ಲೇ ರಿಲೀಸ್ ಆಗುತ್ತಿದೆ. ಆಂಧ್ರದಲ್ಲಿ ಟಿಕೆಟ್​ ದರದ ಗೊಂದಲಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈ ಮಧ್ಯೆ ತೆಲಂಗಾಣ ಸರ್ಕಾರದಿಂದ (Telangana Government) ‘ಕೆಜಿಎಫ್ 2’ಗೆ ಬಂಪರ್ ಆಫರ್ ಸಿಕ್ಕಿದೆ. ಸಿನಿಮಾ ಟಿಕೆಟ್ ದರ (Ticket Price) ಹೆಚ್ಚಿಸಲು ಅನುಮತಿ ನೀಡಿ ಸರ್ಕಾರದಿಂದ ಸುತ್ತೋಲೆ ಬಂದಿದೆ. ಇದರಿಂದ ಈ ಸಿನಿಮಾದ ಕಲೆಕ್ಷನ್​ ಹೆಚ್ಚುವುದರಲ್ಲಿ ಯಾವುದೇ ಅನುಮಾನ ಇಲ್ಲ. ಸರ್ಕಾರ ಟಿಕೆಟ್ ದರ ಹೆಚ್ಚಿಸಲು ಅವಕಾಶ ನೀಡುವುದರ ಜತೆಗೆ ಕೆಲವು ಷರತ್ತುಗಳನ್ನು ಕೂಡ ವಿಧಿಸಿದೆ.

ತೆಲಂಗಾಣದಲ್ಲಿ ಟಿಕೆಟ್​ ದರವನ್ನು ಮನಸೋ ಇಚ್ಛೆ ಏರಿಸಲು ಅವಕಾಶವಿಲ್ಲ. ಅಲ್ಲಿ ದರ ನಿಗದಿ ಮಾಡಲಾಗಿದೆ. ಈ ಮೊದಲು ತೆರೆಗೆ ಬಂದಿದ್ದ ಸಿನಿಮಾಗಳಿಗೆ ಟಿಕೆಟ್ ದರ ನಿಗದಿ ಮಾಡಲಾಗಿತ್ತು. ಮಲ್ಟಿಪ್ಲೆಕ್ಸ್​ಗಳಲ್ಲಿ 200+ಜಿಎಸ್​ಟಿ ಹಾಗೂ ಸಿಂಗಲ್​ ಸ್ಕ್ರೀನ್​ಗಳಲ್ಲಿ 150 ರೂಪಾಯಿ (ಜಿಎಸ್​ಟಿ ಸಹಿತ) ನಿಗದಿ ಮಾಡಲು ಅವಕಾಶ ನೀಡಲಾಗಿತ್ತು. ಈಗ ತೆಲಂಗಾಣ ಸರ್ಕಾರ ‘ಕೆಜಿಎಫ್​ 2’ಗೆ ವಿನಾಯಿತಿ ನೀಡಿ ಹೊಸ ಆದೇಶ ಹೊರಡಿಸಿದೆ.

ಈ ಆದೇಶದ ಅನ್ವಯ ‘ಕೆಜಿಎಫ್​ 2’ ರಿಲೀಸ್ ಆದ ನಂತರ ನಾಲ್ಕು ದಿನಗಳ ಕಾಲ ಮಲ್ಟಿಪ್ಲೆಕ್ಸ್​ಗಳಲ್ಲಿ 50 ರೂಪಾಯಿ ಹಾಗೂ ಸಿಂಗಲ್​ ಸ್ಕ್ರೀನ್​ಗಳಲ್ಲಿ 30 ರೂಪಾಯಿ ಟಿಕೆಟ್​ ದರ ಹೆಚ್ಚಿಸಲು ಅವಕಾಶ ಇದೆ. ತೆಲಂಗಾಣದಲ್ಲಿ ಪ್ರತಿ ದಿನ ನಾಲ್ಕು ಶೋಗಳನ್ನು ಮಾತ್ರ ಮಾಡಲು ಅವಕಾಶ ಇತ್ತು. ಇದನ್ನು ಐದಕ್ಕೆ ಹೆಚ್ಚಿಸಲಾಗಿದೆ. ಇದರಿಂದ ‘ಕೆಜಿಎಫ್​ 2’ ತಂಡದವರು ಖುಷಿಪಟ್ಟಿದ್ದಾರೆ.

ಆಂಧ್ರದಲ್ಲಿ ಗೊಂದಲ:

ಸಿನಿಮಾ ಟಿಕೆಟ್​ ದರದ ವಿಚಾರದಲ್ಲಿ ಆಂಧ್ರ ಪ್ರದೇಶ ಸರ್ಕಾರ ಹೊಸ ನಿಯಮ ಜಾರಿಗೆ ತಂದಿತ್ತು. ನಗರ ವ್ಯಾಪ್ತಿಯಲ್ಲಿ ಇರುವ ಮಲ್ಟಿಪ್ಲೆಕ್ಸ್​ಗಳಿಗೆ ಟಿಕೆಟ್​ ಮೊತ್ತ 75 ರೂಪಾಯಿ ಕನಿಷ್ಠ ಹಾಗೂ 250 ರೂಪಾಯಿ ಗರಿಷ್ಟ ಮೊತ್ತ ನಿಗದಿ ಮಾಡಲಾಗಿತ್ತು. ಎಸಿ ಹಾಗೂ ಎಸಿ ರಹಿತ ಚಿತ್ರಮಂದಿರಗಳ ಟಿಕೆಟ್​ ದರ 20-100 ರೂ ಅಂತರದಲ್ಲಿ ಇರಬೇಕು ಎಂದು ಹೇಳಿತ್ತು. ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದೊಡ್ಡ ಬಜೆಟ್​ನ ಚಿತ್ರಗಳಿಗೆ ವಿನಾಯಿತಿ ನೀಡುವ ಬಗ್ಗೆ ಸರ್ಕಾರ ಘೋಷಿಸಿತ್ತು. ಜತೆಗೆ ಕೆಲ ಷರತ್ತುಗಳನ್ನು ಕೂಡ ವಿಧಿಸಿತ್ತು.

ಸಿನಿಮಾದ ಬಜೆಟ್ 100 ಕೋಟಿ ರೂಪಾಯಿ ದಾಟಿರಬೇಕು ಮತ್ತು ಸಿನಿಮಾದ ಶೇ.20 ಶೂಟಿಂಗ್ ಆಂಧ್ರ ಪ್ರದೇಶದಲ್ಲೇ ಆಗಿರಬೇಕು. ಹೀಗಿದ್ದರೆ ಮಾತ್ರ ಟಿಕೆಟ್ ದರ ಹೆಚ್ಚಿಸಿಕೊಳ್ಳಬಹುದು. ‘ಕೆಜಿಎಫ್​ 2’ ಬಜೆಟ್ 100 ಕೋಟಿ ಮೇಲಿದೆ. ಆದರೆ, ಚಿತ್ರದ ಶೇ.20 ಶೂಟಿಂಗ್ ಆಂಧ್ರದಲ್ಲಿ ನಡೆದಿದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಸೂಕ್ತ ಸ್ಪಷ್ಟನೆ ಸಿಕ್ಕಿಲ್ಲ. ಈ ಕಾರಣಕ್ಕೆ ಸಿನಿಮಾದ ಟಿಕೆಟ್​ ದರವನ್ನು ಹೆಚ್ಚಿಸುವಂತಿಲ್ಲ. ಇದಕ್ಕೆ ಸರ್ಕಾರ ವಿನಾಯಿತಿ ಕೊಡಲಿದೆಯೇ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ‘ಗಂಧದ ಗುಡಿ ಬಗ್ಗೆ ನೀವು ಟ್ವೀಟ್ ಮಾಡಬೇಕು’; ಪುನೀತ್ ಹೇಳಿದ ಮಾತು ನೆನಪಿಸಿಕೊಂಡ ಯಶ್

ಆನ್​ಲೈನ್ ಟಿಕೆಟ್​ ಬುಕಿಂಗ್​ನಲ್ಲಿ ಧೂಳೆಬ್ಬಿಸಿದ ‘ಕೆಜಿಎಫ್​: ಚಾಪ್ಟರ್​ 2’; ಹಲವು ಶೋಗಳು ಸೋಲ್ಡ್​ಔಟ್​

Published On - 3:25 pm, Tue, 12 April 22