‘ಬಿಗ್ ಬಾಸ್​​ನಿಂದ ಒಂದು ರೂಪಾಯಿಯೂ ಸಿಗಲಿಲ್ಲ’; ವಂಚನೆ ಬಗ್ಗೆ ಅಬ್ದು ರೋಜಿಕ್ ಮಾತು

ಭಾರತದಲ್ಲಿ ಬಿಗ್ ಬಾಸ್ ಮೂಲಕ ಖ್ಯಾತಿ ಗಳಿಸಿದ ಅಬ್ದು ರೋಜಿಕ್, ತಮಗೆ ಕಾರ್ಯಕ್ರಮದಿಂದ ಯಾವುದೇ ಸಂಭಾವನೆ ಸಿಕ್ಕಿಲ್ಲ ಎಂದು ಆಘಾತಕಾರಿ ಹೇಳಿಕೆ ನೀಡಿದ್ದಾರೆ. ತನ್ನ ಮಾಜಿ ಮ್ಯಾನೇಜ್‌ಮೆಂಟ್ ತಂಡವೇ ತನ್ನ ಸಂಪಾದನೆಯನ್ನು ವಂಚಿಸಿದೆ ಎಂದು ಆರೋಪಿಸಿದ್ದಾರೆ. ಜನ ತಮ್ಮನ್ನು ಶ್ರೀಮಂತರೆಂದು ಭಾವಿಸಿದರೂ, ವೈಯಕ್ತಿಕವಾಗಿ ಮನೆ, ಕಾರು ಇಲ್ಲದೆ ಕಷ್ಟಪಡುತ್ತಿರುವುದಾಗಿ ನೋವು ತೋಡಿಕೊಂಡಿದ್ದಾರೆ.

‘ಬಿಗ್ ಬಾಸ್​​ನಿಂದ ಒಂದು ರೂಪಾಯಿಯೂ ಸಿಗಲಿಲ್ಲ’; ವಂಚನೆ ಬಗ್ಗೆ ಅಬ್ದು ರೋಜಿಕ್ ಮಾತು
ಸಲ್ಮಾನ್-ಅಬ್ದು ರೋಜಿಕ್
Edited By:

Updated on: Jun 13, 2026 | 2:41 PM

ಬಿಗ್ ಬಾಸ್​​ಗೆ ತೆರಳುವ ಮೂಲಕ ಅಬ್ದು ರೋಜಿಕ್ ಅವರಿಗೆ (Abdu Rozik) ಭಾರತದಲ್ಲೂ ಸಾಕಷ್ಟು ಫ್ಯಾನ್ಸ್ ಸಿಕ್ಕರು. ಸಲ್ಮಾನ್ ಖಾನ್ ಜೊತೆ ಅವರಿಗೆ ಒಳ್ಳೆಯ ಬಾಂಧವ್ಯ ಬೆಳೆಯಿತು. ಆದರೆ, ಈಗ ಅವರು ಬಿಗ್ ಬಾಸ್ ಅಲ್ಲಿ ನಡೆದ ಒಂದು ಶಾಕಿಂಗ್ ವಿಷಯ ಬಿಚ್ಚಿಟ್ಟಿದ್ದಾರೆ. ಬಿಗ್ ಬಾಸ್‌ನಲ್ಲಿ ಭಾಗವಹಿಸಿದ್ದಕ್ಕಾಗಿ ತಮಗೆ ಯಾವುದೇ ಸಂಭಾವನೆ ಸಿಕ್ಕಿಲ್ಲ ಎಂದಿರುವ ಅವರು ತಮ್ಮ ಹಳೆಯ ಮ್ಯಾನೇಜ್‌ಮೆಂಟ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಪಾಡ್‌ಕಾಸ್ಟ್‌ ಒಂದರಲ್ಲಿ ಮಾತನಾಡಿರುವ ಅಬ್ದು ರೋಜಿಕ್, ‘ಈ ಜಗತ್ತಿನಲ್ಲಿ ಜನರಿಗೆ ನಿಮ್ಮ ಬಗ್ಗೆ ನಿಜವಾದ ಕಾಳಜಿ ಇರುವುದಿಲ್ಲ. ನಾನು ನನ್ನ ತಂಡದ ಜೊತೆ ಮೂರ್ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ್ದೆ. ಅವರು ನನ್ನ ಬೆಳವಣಿಗೆಗೆ ಸಹಾಯ ಮಾಡಿದ್ದು ನಿಜ. ಆದರೆ ನಾನು ಮಾಡಿದ ಶೋಗಳಿಂದ ಬಂದ ಹಣವನ್ನೆಲ್ಲಾ ಅವರೇ ಜೇಬಿಗೆ ಇಳಿಸಿಕೊಂಡರು. ನಿಮಗೆ ಆಶ್ಚರ್ಯ ಎನಿಸಬಹುದು, ಬಿಗ್ ಬಾಸ್ ಶೋನಿಂದ ನನಗೆ ಒಂದೇ ಒಂದು ಡಾಲರ್ ಹಣವೂ ಸಿಕ್ಕಿಲ್ಲ. ಅವರು ನನಗೆ ವಂಚಿಸಿದರು. ನನ್ನ ಇಡೀ ಸಂಪಾದನೆಯನ್ನು ಲೂಟಿ ಮಾಡಿದರು’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕ್ಯಾಮೆರಾ ಮುಂದೆ ಸದಾ ನಗುತ್ತಾ ಕಾಣಿಸಿಕೊಳ್ಳುವ ಅಬ್ದು ಅವರ ಅಸಲಿ ಜೀವನ ತೀರಾ ಭಿನ್ನವಾಗಿದೆ. ‘ಜನರು ನನ್ನ ಪ್ರಸಿದ್ಧಿಯನ್ನು ನೋಡಿ ನಾನು ಕೋಟ್ಯಧಿಪತಿ ಇರಬಹುದು ಅಂದುಕೊಳ್ಳುತ್ತಾರೆ. ಆದರೆ ನನ್ನ ಹೆಗಲ ಮೇಲೆ ನಾನು ಎಂತಹ ನೋವಿನ ಹೊರೆಯನ್ನು ಹೊತ್ತಿದ್ದೇನೆ ಎಂಬುದು ಯಾರಿಗೂ ಗೊತ್ತಿಲ್ಲ. ಕ್ಯಾಮೆರಾ ಮುಂದೆ ನಾನು ನಗುತ್ತಾ, ಎಲ್ಲರ ಜೊತೆ ಫೋಟೋ ತೆಗೆಸಿಕೊಳ್ಳುತ್ತೇನೆ. ಆದರೆ ಮನೆಗೆ ಹೋದಾಗ ಮಾನಸಿಕ ಒತ್ತಡ ಮತ್ತು ಸಾಲು ಸಾಲು ಸಮಸ್ಯೆಗಳು ನನ್ನನ್ನು ಕಾಡುತ್ತವೆ. ಜನರ ದೃಷ್ಟಿಯಲ್ಲಿ ನಾನು ಶ್ರೀಮಂತ, ಆದರೆ ಸತ್ಯ ಏನೆಂದರೆ ನನ್ನ ಬಳಿ ಇವತ್ತಿಗೂ ಒಂದು ಸ್ವಂತ ಕಾರಾಗಲಿ ಅಥವಾ ಸ್ವಂತ ಮನೆಯಾಗಲಿ ಇಲ್ಲ’ ಎಂದು ಅಬ್ದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಖ್ಯಾತಿಯ ಅಬ್ದು ರೋಜಿಕ್ ದುಬೈನಲ್ಲಿ ಅರೆಸ್ಟ್; ಹಣ ಇದ್ರೂ ಹೀಗಾ ಮಾಡೋದು?

‘ನನ್ನ ಹೈಟ್ ನೋಡಿ ಜನ ನನ್ನನ್ನು ಕೀಳಾಗಿ ಕಾಣುತ್ತಾರೆ. ಇವನಿಗೆ ಏನೂ ತಿಳಿಯುವುದಿಲ್ಲ, ಸುಲಭವಾಗಿ ಮೂರ್ಖನನ್ನಾಗಿ ಮಾಡಬಹುದು ಎಂದುಕೊಳ್ಳುತ್ತಾರೆ. ನಾನು ಎಲ್ಲೇ ಕೆಲಸಕ್ಕೆ ಹೋದರೂ ಜನ ನನ್ನೊಂದಿಗೆ ನೇರವಾಗಿ ಮಾತನಾಡುವುದಿಲ್ಲ, ನನ್ನ ಮ್ಯಾನೇಜ್‌ಮೆಂಟ್ ಜೊತೆಯೇ ಮಾತನಾಡುತ್ತಾರೆ. ಆದರೆ ನನಗೆ ಎಲ್ಲವೂ ಅರ್ಥವಾಗುತ್ತದೆ. ನಾನು ಎಲ್ಲರಲ್ಲೂ ಕೇಳಿಕೊಳ್ಳುವುದು ಇಷ್ಟೇ, ದಯವಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿ, ನನಗೆ ಮೋಸ ಮಾಡಬೇಡಿ’ ಎಂದು ಕೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

TV9 Web

TV9 Kannada

Read More
Follow Us