ವೀಕೆಂಡ್ ವಿತ್ ರಮೇಶ್ (Weekend With Ramesh) ಐದನೇ ಸೀಸನ್ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಐದನೇ ಸೀಸನ್ನ 10 ಎಪಿಸೋಡ್ಗಳು ಈವರೆಗೆ ಮುಗಿದಿದ್ದು, ನಟಿ ರಮ್ಯಾ, ಪ್ರಭುದೇವ, ಡಾಲಿ ಧನಂಜಯ್, ವೈದ್ಯ ಮಂಜುನಾಥ್, ದತ್ತಣ್ಣ, ಅವಿನಾಶ್, ಮಂಡ್ಯ ರಮೇಶ್ ಅವರುಗಳು ಸಾಧಕರ ಕುರ್ಚಿಯ ಮೇಲೆ ಕುಳಿತಿದ್ದಾರೆ. ಇದೀಗ ಮತ್ತೊಂದು ವೀಕೆಂಡ್ ಬರಲಿಕ್ಕಿದ್ದು, ಈ ವಾರ ಸಾಧಕರ ಕುರ್ಚಿಯಲ್ಲಿ ಯಾರು ಕೂರಲಿದ್ದಾರೆ ಎಂಬ ಕುತೂಹಲ ಸಹಜವಾಗಿಯೇ ಶೋನ ಅಭಿಮಾನಿಗಳಲ್ಲಿದೆ.
ಈ ವಾರ ಸಾಧಕರ ಕುರ್ಚಿಯ ಮೇಲೆ ಇಬ್ಬರು ಅತಿಥಿಗಳು ಕೂರಲಿದ್ದಾರೆ. ಶನಿವಾರ ಒಬ್ಬರು ಹಾಗೂ ಭಾನುವಾರ ಒಬ್ಬರು ಅತಿಥಿಗಳು ಆಗಮಿಸಿ ತಮ್ಮ ಜೀವನವನ್ನು ಮೆಲುಕು ಹಾಕಲಿದ್ದಾರೆ. ಕನ್ನಡ ಸಿನಿಮಾ ಹಾಗೂ ಟಿವಿ ಲೋಕದ ಜನಪ್ರಿಯ ತಾರೆಯೊಬ್ಬರು ಹಾಗೂ ಶಿಕ್ಷಣ ಕ್ಷೇತ್ರದ ಸಾಧಕರೊಬ್ಬರು ಈ ವಾರ ಸಾಧಕರ ಕುರ್ಚಿ ಏರಲಿದ್ದಾರೆ.
ಜನಪ್ರಿಯ ನಟ, ಟಿವಿ ಲೋಕದಲ್ಲಿಯೂ ಸೆಲೆಬ್ರಿಟಿ ಆಗಿರುವ ನಟ ಸಿಹಿ-ಕಹಿ ಚಂದ್ರು ಅವರು ಈ ಶನಿವಾರದ ಎಪಿಸೋಡ್ನಲ್ಲಿ ಅತಿಥಿಯಾಗಿ ಆಗಮಿಸಲಿದ್ದಾರೆ. ತಮ್ಮ ಜೀವನ ಹಲವು ಖುಷಿಯ-ದುಃಖದ ಸವಾಲಿನ ಕ್ಷಣಗಳನ್ನು ಮೆಲುಕು ಹಾಕುವ ಜೊತೆಗೆ ತಮ್ಮ ಏಳಿಗೆಯಲ್ಲಿ ಜೊತೆಯಾಗಿ ನಿಂತ ಹಲವು ಮಹನೀಯರನ್ನು ಸ್ಮರಿಸಲಿದ್ದಾರೆ. ವಿಶೇಷವೆಂದರೆ ಈ ಎಪಿಸೋಡ್ನಲ್ಲಿ ಶಂಕರ್ ನಾಗ್ ಹಾಗೂ ಮಾಲ್ಗುಡಿ ಡೇಸ್ನ ಚರ್ಚೆ ಸಹ ಆಗಲಿದೆ.
ಇನ್ನು ಭಾನುವಾರದ ಎಪಿಸೋಡ್ಗೆ ಶಿಕ್ಷಣ ಕ್ಷೇತ್ರದಲ್ಲಿ ಮಹತ್ ಸಾಧನೆ ಮಾಡಿರುವ ಗುರುರಾಜ ಕರ್ಜಗಿ ಅವರು ಅತಿಥಿಯಾಗಿ ಆಗಮಿಸಲಿದ್ದಾರೆ. ಸಾವಿರಾರು ಶಿಕ್ಷಕರನ್ನು ತರಬೇತಿಗೊಳಿಸಿರುವ ಗುರುರಾಜ ಕರ್ಜಗಿ ಅವರು ಬೇಂದ್ರ, ಮಾಸ್ತಿ ಅವರುಗಳ ನೆನಪನ್ನು ಮೆಲುಕು ಹಾಕಿದ್ದಾರೆ ಜೊತೆಗೆ ಅದ್ಬುಲ್ ಕಲಾಂ ಅವರೊಟ್ಟಿಗಿನ ಮಾತುಕತೆಯನ್ನೂ ಸಹ ಸ್ಮರಿಸಿದ್ದಾರೆ. ಶಿಕ್ಷಣದ ಮಹತ್ವದ, ಶಿಕ್ಷಣದಲ್ಲಿ ಗುರುವಿನ ಮಹತ್ವ ಇನ್ನೂ ಹಲವು ವಿಷಯಗಳ ಬಗ್ಗೆ ಗುರುರಾಜ ಕರ್ಜಗಿ ಅವರು ಎಪಿಸೋಡ್ನಲ್ಲಿ ಮಾತನಾಡಲಿದ್ದಾರೆ. ಸಂಗೀತ ಕಟ್ಟಿ ಸೇರಿದಂತೆ ಹಲವು ಮಹನೀಯರು ಅಂದಿನ ಶೋಗೆ ಆಗಮಿಸಿ ಕರ್ಜಗಿ ಅವರ ಒಡನಾಟದ ಸವಿ ಹಂಚಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಜೀವ ಕೊಟ್ಟ’ಎರಡನೇ ತಾಯಿ’ಯನ್ನು ವೀಕೆಂಡ್ ವಿತ್ ರಮೇಶ್ನಲ್ಲಿ ಭೇಟಿಯಾದ ಡಾಲಿ
ವೀಕೆಂಡ್ ವಿತ್ ರಮೇಶ್ನಲ್ಲಿ ಕಳೆದ ವಾರವೂ ಇಬ್ಬರು ಸಾಧಕರು ಆಗಮಿಸಿದ್ದರು. ಪೋಷಕ ಪಾತ್ರಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ನಟ ಅವಿನಾಶ್ ಹಾಗೂ ರಂಗಭೂಮಿಯನ್ನು ಉಸಿರಾಗಿಸಿಕೊಂಡಿದ್ದರು ಸಿನಿಮಾ ಹಾಗೂ ಟಿವಿಗಳಲ್ಲಿ ಬಹುಬೇಡಿಕೆಯ ನಟರಾಗಿರುವ ಮಂಡ್ಯ ರಮೇಶ್ ಅವರುಗಳು ಸಾಧಕರ ಕುರ್ಚಿಯ ಮೇಲೆ ಕೂತಿದ್ದರು. ಈ ವಾರ ಸಿನಿಮಾ ರಂಗದಿಂದ ಹೊರಾಗಿರುವ ಸಾಧಕರೊಬ್ಬರು ಅತಿಥಿಯಾಗಿ ಆಗಮಿಸುತ್ತಿರುಗವುದು ವಿಶೇಷ. ಈ ಸೀಸನ್ನಲ್ಲಿ ವೈದ್ಯ ಮಂಜುನಾಥ್ ಅವರ ಬಳಿಕ ಸಿನಿಮಾ ಕ್ಷೇತ್ರದ ಹೊರತಾದ ಸಾಧಕರಾಗಿ ಆಗಮಿಸುತ್ತಿರುವ ಎರಡನೇ ವ್ಯಕ್ತಿ ಗುರುರಾಜ ಕರ್ಜಗಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ