‘ಕೆಬಿಸಿ 18’ ಶೂಟಿಂಗ್ ವೇಳೆ ಜಾರಿ ಬಿದ್ದು ಕಾಲಿಗೆ ಗಾಯ ಮಾಡಿಕೊಂಡ ಅಮಿತಾಭ್ ಬಚ್ಚನ್

ನಟ ಅಮಿತಾಭ್ ಬಚ್ಚನ್ ಅವರು 83ನೇ ವಯಸ್ಸಿನಲ್ಲಿ ಕೂಡ ಸಖತ್ ಆ್ಯಕ್ಟೀವ್ ಆಗಿದ್ದಾರೆ. ನಟನಾಗಿ, ರಿಯಾಲಿಟಿ ಶೋ ನಿರೂಪಕನಾಗಿ ಅವರು ಬ್ಯುಸಿ ಆಗಿದ್ದಾರೆ. ‘ಕೌನ್ ಬನೇಗಾ ಕರೋಡ್‌ಪತಿ 18’ ಚಿತ್ರೀಕರಣದ ವೇಳೆ ಅವರಿಗೆ ಗಾಯ ಆಗಿದೆ. ಆ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.

‘ಕೆಬಿಸಿ 18’ ಶೂಟಿಂಗ್ ವೇಳೆ ಜಾರಿ ಬಿದ್ದು ಕಾಲಿಗೆ ಗಾಯ ಮಾಡಿಕೊಂಡ ಅಮಿತಾಭ್ ಬಚ್ಚನ್
Amitabh Bachchan
Image Credit source: Sony Entertainment Television

Updated on: Sep 30, 2026 | 9:20 PM

ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ‘ಕೌನ್ ಬನೇಗಾ ಕರೋಡ್‌ಪತಿ 18’ ರಿಯಾಲಿಟಿ ಶೋ ಶೂಟಿಂಗ್ ವೇಳೆ ಜಾರಿ ಬಿದ್ದು, ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ ಬಿಗ್ ಬಿ ಸ್ವತಃ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಸಾಮಾನ್ಯವಾಗಿ ಕೆಬಿಸಿ ಕಾರ್ಯಕ್ರಮದ ಆರಂಭಿಕ ಹಂತದಲ್ಲಿ ವೇದಿಕೆಯ ಮಧ್ಯಭಾಗದಲ್ಲಿ ನಿಂತುಕೊಂಡು ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುವ ಅಮಿತಾಭ್ ಬಚ್ಚನ್, ಈ ಬಾರಿ ಗಾಯದ ಕಾರಣದಿಂದಾಗಿ ಕುಳಿತುಕೊಂಡೇ ತಮ್ಮ ಮಾತುಗಳನ್ನು ಆರಂಭಿಸಿದರು.

ಸಂಚಿಕೆಯ ಆರಂಭದಲ್ಲಿ ಓಡುತ್ತಾ ಬಂದು ವೇದಿಕೆಯ ಆಸನದಲ್ಲಿ ಕುಳಿತ ಅಮಿತಾಭ್, ‘ಸಾಮಾನ್ಯವಾಗಿ ನಾನು ವೇದಿಕೆಯ ಮಧ್ಯದಲ್ಲಿ ನಿಂತುಕೊಂಡು ಆರಂಭಿಕ ಮಾತುಗಳನ್ನು ಆಡುತ್ತೇನೆ. ಆದರೆ ಇಂದು ನನ್ನ ಮೊಣಕಾಲಿಗೆ ಗಾಯವಾಗಿದೆ. ನಿನ್ನೆ ಶೂಟಿಂಗ್ ನಡೆಯುತ್ತಿದ್ದಾಗ ಜಾರಿ ಬಿದ್ದಿದ್ದರಿಂದ ಎಡ ಮೊಣಕಾಲಿಗೆ ಏಟಾಗಿದೆ’ ಎಂದು ತಮ್ಮ ಎಡಗಾಲನ್ನು ತೋರಿಸುತ್ತಾ ಘಟನೆಯನ್ನು ವಿವರಿಸಿದರು.

ಬಿಗ್ ಬಿ ಗಾಯಗೊಂಡಿರುವ ಸುದ್ದಿ ಕೇಳಿ ಸೆಟ್‌ನಲ್ಲಿದ್ದ ಪ್ರೇಕ್ಷಕರು ಒಮ್ಮೆಲೇ ಆತಂಕಕ್ಕೊಳಗಾದರು. ಆದರೆ ತಕ್ಷಣವೇ ಪ್ರೇಕ್ಷಕರನ್ನು ಸಮಾಧಾನಪಡಿಸಿದ ಅಮಿತಾಭ್, ‘ಗಾಯವೇನೂ ಅಷ್ಟೊಂದು ಗಂಭೀರವಾಗಿಲ್ಲ. ಸ್ಪರ್ಧಿಗಳನ್ನು ವೇದಿಕೆಗೆ ಸ್ವಾಗತಿಸುವಾಗ ನಿಂತುಕೊಳ್ಳುತ್ತೇನೆ. ಆದರೆ ಸದ್ಯಕ್ಕೆ ಎದ್ದು ನಿಲ್ಲಲು ಸ್ವಲ್ಪ ಕಷ್ಟವಾಗುತ್ತಿರುವುದರಿಂದ ಕುಳಿತಿದ್ದೇನೆ’ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಪ್ರೇಕ್ಷಕರು ಅವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.

ಸಾಲು ಸಾಲು ಸಿನಿಮಾಗಳಲ್ಲಿ ಬಿಗ್ ಬಿ ಬ್ಯುಸಿ:
80 ದಾಟಿದರೂ ಸದಾ ಕ್ರಿಯಾಶೀಲರಾಗಿರುವ ಅಮಿತಾಭ್ ಬಚ್ಚನ್ ಕೈಯಲ್ಲಿ ಪ್ರಸ್ತುತ ಹಲವು ದೊಡ್ಡ ಪ್ರಾಜೆಕ್ಟ್‌ಗಳಿವೆ. ರಿಭು ದಾಸಗುಪ್ತಾ ನಿರ್ದೇಶನದ ಕೋರ್ಟ್‌ರೂಮ್ ಡ್ರಾಮಾ ‘ಸೆಕ್ಷನ್ 84’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದು, ಡಯಾನಾ ಪೆಂಟಿ, ನಿಮ್ರತ್ ಕೌರ್ ಹಾಗೂ ಅಭಿಷೇಕ್ ಬ್ಯಾನರ್ಜಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಇದನ್ನೂ ಓದಿ: 83ನೇ ವಯಸ್ಸಿನಲ್ಲೂ 24 ಗಂಟೆ ನಿರಂತರ ಕೆಲಸ ಮಾಡಿದ ನಟ ಅಮಿತಾಭ್ ಬಚ್ಚನ್

ಇದರ ಜೊತೆಗೆ ನಾಗ್ ಅಶ್ವಿನ್ ನಿರ್ದೇಶನದ ಸೂಪರ್ ಹಿಟ್ ‘ಕಲ್ಕಿ 2898 AD’ ಸಿನಿಮಾದ ಎರಡನೇ ಭಾಗದಲ್ಲೂ ಅಶ್ವತ್ಥಾಮನ ಪಾತ್ರದಲ್ಲಿ ಅಮಿತಾಭ್ ಮುಂದುವರಿಯಲಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ಹಾಗೂ ಕಮಲ್ ಹಾಸನ್ ಜೊತೆಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೆ ‘ಆಂಖೇ 2’ ಚಿತ್ರದಲ್ಲೂ ಬಿಗ್ ಬಿ ಅಭಿನಯಿಸಲಿದ್ದಾರೆ ಎಂದು ವರದಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us