‘ಅರ್ಜುನ್ ಜನ್ಯ ಗತಿ ಏನು’; ಅಭಿಮಾನಿಯ ನೇರ ಪ್ರಶ್ನೆಗೆ ಉತ್ತರಿಸಿದ ಅನುಶ್ರೀ

ಆ್ಯಂಕರ್ ಅನುಶ್ರೀ ಅವರು ರೋಷನ್ ಅವರನ್ನು ಮದುವೆಯಾಗಿದ್ದು, ಹೊಸ ಜೀವನ ನಡೆಸುತ್ತಿದ್ದಾರೆ. 'ಹಳ್ಳಿ ಪವರ್' ಶೋನಲ್ಲಿ ಅರ್ಜುನ್ ಜನ್ಯ ಬಗ್ಗೆ ಕೇಳಿದ ಪ್ರಶ್ನೆಗೆ ಅನುಶ್ರೀ ನೇರವಾಗಿ ಉತ್ತರಿಸಿದ್ದಾರೆ. 'ಎರಡು ವಾರದಲ್ಲಿ ಎಲ್ಲವೂ ಗೊತ್ತಾಗುತ್ತದೆ' ಎಂದು ಹೇಳುವ ಮೂಲಕ `ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 5` ಕುರಿತು ಸುಳಿವು ನೀಡಿದ್ದಾರೆ.

‘ಅರ್ಜುನ್ ಜನ್ಯ ಗತಿ ಏನು’; ಅಭಿಮಾನಿಯ ನೇರ ಪ್ರಶ್ನೆಗೆ ಉತ್ತರಿಸಿದ ಅನುಶ್ರೀ
ಅನುಶ್ರೀ

Updated on: Nov 08, 2025 | 11:58 AM

ಆ್ಯಂಕರ್ ಅನುಶ್ರೀ (Anchor Anushree) ಅವರು ಕೆಲ ತಿಂಗಳ ಹಿಂದೆ ರೋಷನ್ ಅವರನ್ನು ವಿವಾಹ ಆಗಿದ್ದಾರೆ. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಅನುಶ್ರೀ ಅವರು ವಿವಾಹದ ಬಳಿಕ ಅನೇಕ ಕಡೆಗಳಲ್ಲಿ ಕಾಣಿಸಿಕೊಂಡ ಉದಾಹರಣೆ ಇದೆ. ಈ ವೇಳೆ ವಿವಾಹದ ಬಗ್ಗೆ, ಅವರ ಹೊಸ ಜೀವನದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತಾ ಇದೆ. ಆದರೆ, ಯಾರೊಬ್ಬರೂ ಅರ್ಜುನ್ ಜನ್ಯ ಬಗ್ಗೆ ಪ್ರಶ್ನೆ ಮಾಡಿರಲಿಲ್ಲ. ಈಗ ಅವರಿಗೆ ಆ ರೀತಿಯ ಪ್ರಶ್ನೆಯೊಂದು ಎದುರಾಗಿದೆ. ಇದಕ್ಕೆ ಅವರು ನೇರವಾಗಿ ಉತ್ತರ ನೀಡಿದ್ದಾರೆ.

‘ಹಳ್ಳಿ ಪವರ್’ ಹೆಸರಿನ ಶೋ ಜೀ ಪವರ್​ನಲ್ಲಿ ಪ್ರಸಾರ ಕಾಣುತ್ತಾ ಇದೆ. ಈ ಶೋಗೆ ಅಕುಲ್ ಬಾಲಾಜಿ ಅವರು ಆ್ಯಂಕರ್. ಇತ್ತೀಚೆಗೆ ವಿಶೇಷ ಸಂಚಿಕೆ ಪ್ರಸಾರ ಕಂಡಿದ್ದು ‘ಮಹಾನಟಿ’ ಶೋ ಸ್ಪರ್ಧಿಗಳು ‘ಹಳ್ಳಿ ಪವರ್​’ಗೆ ಅತಿಥಿಗಳಾಗಿ ಬಂದಿದ್ದರು. ಅದೇ ರೀತಿ ಅನುಶ್ರೀ ಕೂಡ ಬಂದಿದ್ದರು. ಅವರಿಗೆ ಭವ್ಯ ಸ್ವಾಗತ ಸಿಕ್ಕಿತು. ವಿವಿಧ ಟಾಸ್ಕ್​​ಗೆ ಅಕುಲ್ ಹಾಗೂ ಅನುಶ್ರೀ ನೇತೃತ್ವ ವಹಿಸಿದ್ದರು. ನಂತರ ಹಳ್ಳಿ ಜೀವನವನ್ನು ಅನುಶ್ರೀ ಎಂಜಾಯ್ ಮಾಡಿದ್ದರು.

ಅನುಶ್ರೀ ಬಂದಿದ್ದಾರೆ ಎಂಬ ಕಾರಣಕ್ಕೆ ಹಳ್ಳಿ ಮಂದಿಯ ಜೊತೆ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಆಗ, ಹಳ್ಳಿಯವರು ಅನುಶ್ರೀಗೆ ವಿವಿಧ ಪ್ರಶ್ನೆಗಳನ್ನು ಕೇಳಿದರು. ‘ನೀವು ಮದುವೆ ಆಗಿದ್ದೀರಿ. ಅರ್ಜುನ್ ಜನ್ಯ ಅವರ ಕಥೆ ಏನು’ ಎಂದು ಕೇಳಿದರು. ಆಗ ಅಕುಲ್ ಅವರು, ‘ನೀವು ರೋಷನ್​ನ ಮದುವೆ ಆಗಿದ್ದೀರಾ, ಅರ್ಜುನ್ ಜನ್ಯ ಕಥೆ ಏನು? ಇದನ್ನು ನೀವು ಹೇಳಲೇಬೇಕು. ದೇಶ ಇದನ್ನು ತಿಳಿಯಬೇಕಿದೆ’ ಎಂದರು.

‘ಆ ಪ್ರಶ್ನೆಗೆ ಉತ್ತರ ಎರಡು ವಾರದಲ್ಲಿ ಗೊತ್ತಾಗುತ್ತದೆ. ಈಗ ಹೇಳಿದರೆ ಮಜಾ ಹೋಗಿ ಬಿಡುತ್ತದೆ. ಅದು 10 ವರ್ಷಗಳ ಪ್ರೀತಿ’ ಎಂದರು ಅನುಶ್ರೀ. ಅರ್ಜುನ್ ಜನ್ಯ ಅವರು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋಗೆ ಜಡ್ಜ್ ಆಗಿದ್ದಾರೆ. ಇದರ ಐದನೇ ಸೀಸನ್ ಶೀಘ್ರವೇ ಪ್ರಸಾರ ಕಾಣಲಿದೆ. ಈ ಶೋಗೆ ಅನುಶ್ರೀ ಆ್ಯಂಕರ್ ಆಗಿರಲಿದ್ದಾರೆ. ಈ ಕಾರಣದಿಂದ ಅನುಶ್ರೀ ‘ಎರಡು ವಾರದಲ್ಲಿ ಉತ್ತರ ಸಿಗಲಿದೆ’ ಎಂದರು.

ಇದನ್ನೂ ಓದಿ: ‘ನಿನ್ನ ಜೊತೆ ನಾ ಮಾತ್ರ ಇರಬೇಕು’; ಪತಿಗೆ ಬರ್ತ್​ಡೇ ವಿಶ್ ಮಾಡಿ ಕಾಲೆಳೆದ ಅನುಶ್ರೀ

ಅನುಶ್ರೀ ಹಾಗೂ ಅರ್ಜುನ್ ಜನ್ಯ ಹಲವು ಶೋಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ವೇಳೆ ಫನ್​​ಗಾಗಿ ಇಬ್ಬರೂ ಜೋಡಿಗಳು ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿತ್ತು. ಈ ಕಾರಣದಿಂದ ಈ ರೀತಿಯ ಫನ್ ಪ್ರಶ್ನೆಗಳು ಎದುರಾಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.