ಕನ್ನಡ ಜನಪ್ರಿಯ ಧಾರಾವಾಹಿ ‘ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ನ ನಾಯಕ ನಟ ಅನಿರುದ್ಧ್ (Aniruddha Jatkar) ಅವರ ಮೇಲೆ ಕನ್ನಡ ಕಿರುತೆರೆ ನಿರ್ಮಾಪಕರ ಸಂಘ 2 ವರ್ಷಗಳ ಕಾಲ ನಿಷೇಧ ಹೇರಿದೆ. ಈ ಮೂಲಕ ಕಿರುತೆರೆಯ ಯಾವುದೇ ಕಾರ್ಯಕ್ರಮಗಳಲ್ಲಿ ಅನಿರುದ್ಧ್ಗೆ ಅವಕಾಶ ಕೊಡದಂತೆ ನಿರ್ಧರಿಸಲಾಗಿದೆ ಎಂದು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ತಿಳಿಸಿದ್ದಾರೆ. ನಟ ಅನಿರುದ್ಧ್ ಅವರ ಜೊತೆ ತಂತ್ರಜ್ಞರ ತಂಡ ಮುನಿಸಿಕೊಂಡಿದ್ದು, ಹೀಗಾಗಿ ಅವರನ್ನು ಸೀರಿಯಲ್ನಿಂದ ಕೈ ಬಿಡಲು ನಿರ್ಧರಿಸಲಾಗಿದೆ.
ನಾವು ಅನಿರುದ್ಧ್ ಅವರನ್ನು ಬ್ಯಾನ್ ಮಾಡಿಲ್ಲ. ಆದರೆ ಎರಡು ವರ್ಷ ಅವರನ್ನು ಕಿರುತೆರೆಯಿಂದ ದೂರ ಇಡುತ್ತಿದ್ದೇವೆ ಎಂದು ಭಾಸ್ಕರ್ ತಿಳಿಸಿದ್ದಾರೆ. ಅನಿರುದ್ಧ್ ಅವರು ಜೊತೆ ಜೊತೆಯಲಿ ಧಾರಾವಾಹಿ ತಂಡ ಪ್ರಮುಖರೊಬ್ಬರನ್ನು ಮೂರ್ಖ ಎಂದು ಕರೆದಿದ್ದಾರೆ. ಸ್ಕ್ರಿಪ್ಟ್ ವಿಚಾರಕ್ಕೆ ನಿಂದಿಸಿ ಶೂಟಿಂಗ್ ಸೆಟ್ನಿಂದ ಹೊರ ಹೋಗಿದ್ದಾರೆ. ಈ ವೇಳೆ ಕಿರಿಕ್ ನಡೆದಿದೆ.
ಕಳೆದ ಎರಡು ದಿನಗಳ ಹಿಂದೆ ಕೂಡ ಧಾರವಾಹಿ ತಂಡದ ಜೊತೆ ಜಗಳ ಆಡಿಕೊಂಡು ಅನಿರುದ್ಧ್ ಶೂಟಿಂಗ್ ಮಾಡದೇ ಹೊರ ನಡೆದಿದ್ದರು. ಅವರ ಇಂತಹ ನಡೆಯನ್ನ ಸಹಿಸಿ ಸಾಕಾಗಿದೆ. ಹಲವು ಭಾರಿ ಇಂತಹ ಘಟನೆ ಪುನಾರಾರ್ವನೆಯಾಗಿದ್ದು, ಹೀಗಾಗಿ ಈ ನಿರ್ಧಾರ ಮಾಡಿದ್ದೇವೆ ಎಂದು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.
ಈ ಬಗ್ಗೆ ಜೊತೆ ಜೊತೆಯಲಿ ಧಾರಾವಾಹಿ ನಿರ್ದೇಶಕರಾದ ಆರೋರು ಜಗದೀಶ್ ಕಿರುತೆರೆ ನಿರ್ಮಾಪಕರ ಸಂಘಕ್ಕೆ ಕಂಪ್ಲೇಟ್ ಕೊಟ್ಟಿದ್ದಾರೆ. ದೂರಿನ ಮೇರೆಗೆ ಕಿರುತೆರೆ ನಿರ್ಮಾಪಕ ಸಂಘ ಸಭೆ ಸೇರಿ ಇನ್ಮುಂದೆ ಅನಿರುದ್ಧ್ ಅವರಿಗೆ ಕಿರುತೆರೆಯಲ್ಲಿ ಅವಕಾಶ ಕೊಡಬಾರದು ಅಂತ ನಿರ್ಧರಿಸಲಾಗಿದೆ.
ನಿಷೇಧಕ್ಕೆ ಅವಕಾಶವೇ ಇಲ್ಲ..!
ಕಿರುತೆರೆ ನಿರ್ಮಾಪಕರ ಸಂಘವು ಎರಡು ವರ್ಷಗಳ ಕಾಲ ನಟ ಅನಿರುದ್ಧ್ ಅವರನ್ನು ನಿಷೇಧಿಸಿದ್ದೇವೆ ಎಂದು ತಿಳಿಸಿದರೆ, ಇಂತಹ ಕ್ರಮಕ್ಕೆ ಯಾವುದೇ ಅವಕಾಶವಿಲ್ಲ ಎಂದು ಟೆಲಿವಿಷನ್ ಅಸೋಸಿಯೇಷನ್ ಹೇಳಿಕೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್, ಅನಿರುದ್ಧ್ ಬ್ಯಾನ್ಗೆ ಅವಕಾಶವೇ ಇಲ್ಲ. ಇವರೇ ಎಲ್ಲಾ ನಿರ್ಧಾರಗಳನ್ನ ತೆಗೆದುಕೊಂಡರೆ ಆಗುವುದಿಲ್ಲ. ಮೆಗಾ ಸೀರಿಯಲ್ ಸೆಟ್ಗಳಲ್ಲಿ ಈ ರೀತಿ ಘಟನೆ ಸರ್ವೆ ಸಾಮಾನ್ಯ. ಅವುಗಳನ್ನೆಲ್ಲಾ ಕೂತು ಅವರೇ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಒಂದು ವೇಳೆ ಧಾರವಾಹಿ ಪ್ರಸಾರ ಆಗುತ್ತಿರುವ ಚಾನೆಲ್ ಕಲಾವಿದನನ್ನು ನಿಷೇಧಿಸಬಹುದು. ಇದರ ಹೊರತಾಗಿ ಏಕಾಏಕಿ ಯಾರನ್ನು ಬ್ಯಾನ್ ಮಾಡುವ ಅವಕಾಶ ಇಲ್ಲ ಎಂದು ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಜೊತೆ ಜೊತೆಯಲಿ ಸಾಗಿದ್ದ ಜನಪ್ರಿಯ ಧಾರಾವಾಹಿ ತಂಡದಲ್ಲಿನ ಬಿರುಕು ಮುಂದಿನ ದಿನಗಳಲ್ಲಿ ಯಾವ ದಿಕ್ಕಿನತ್ತ ಸಾಗಲಿದೆ ಕಾದು ನೋಡಬೇಕಿದೆ.