ಧಮ್ಕಿಗಳಿಗೆ ಬಗ್ಗದೇ ‘ಸೂರ್ಯವಂಶ’ ಧಾರಾವಾಹಿ ಶುರು ಮಾಡಿದ ಅನಿರುದ್ಧ್; ಉದಯ ಟಿವಿಯಲ್ಲಿ ಪ್ರಸಾರ

|

Updated on: Mar 06, 2024 | 7:19 PM

ಉದಯ ಟಿವಿಯಲ್ಲಿ ‘ಸೂರ್ಯವಂಶ’ ಧಾರಾವಾಹಿ ಮಾರ್ಚ್​ 11ರಿಂದ ಪ್ರಸಾರ ಆರಂಭಿಸಲಿದೆ. ಸೋಮವಾರದಿಂದ ಶನಿವಾರದ ತನಕ ಪ್ರತಿ ರಾತ್ರಿ 8 ಗಂಟೆಗೆ ಈ ಸೀರಿಯಲ್ ಬಿತ್ತರ ಆಗಲಿದೆ. ಪದ್ಮನಾಭ್​ ಅವರು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಪ್ರೋಮೋ ನೋಡಿದ ವೀಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದವರು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಧಮ್ಕಿಗಳಿಗೆ ಬಗ್ಗದೇ ‘ಸೂರ್ಯವಂಶ’ ಧಾರಾವಾಹಿ ಶುರು ಮಾಡಿದ ಅನಿರುದ್ಧ್; ಉದಯ ಟಿವಿಯಲ್ಲಿ ಪ್ರಸಾರ
ಅನಿರುದ್ಧ್​ ಜತ್ಕರ್​, ಸುಂದರ್​ ರಾಜ್​, ಅಶ್ವಿನಿ
Follow us on

ನಟ ಅನಿರುದ್ಧ್​ ಜತ್ಕರ್​ (Anirudh Jatkar) ಅವರು ಈ ಮೊದಲು ‘ಜೊತೆಜೊತೆಯಲಿ’ ಸೀರಿಯಲ್​ನಿಂದ ಹೊರಬಂದಾಗ ಕೆಲವು ಕಾಂಟ್ರವರ್ಸಿ ಎದುರಾಗಿದ್ದವು. ಅನಿರುದ್ಧ್ ಅವರನ್ನು ಕಿರುತೆರೆಯಿಂದ ಬ್ಯಾನ್​ ಮಾಡಬೇಕು ಎಂಬ ಮಾತುಗಳು ಕೇಳಿಬಂದಿದ್ದವು. ಬೇರೆ ಸೀರಿಯಲ್​ ಮೂಲಕ ಅನಿರುದ್ಧ್​ ಅವರು ಮತ್ತೆ ಪ್ರೇಕ್ಷಕರ ಎದುರು ಬರಬೇಕು ಎಂಬ ನಿರ್ಧಾರ ಮಾಡಿದಾಗ ಕೆಲವರು ಧಮ್ಕಿ ಹಾಕುವ ಪ್ರಯತ್ನ ಮಾಡಿದ್ದರು. ಆ ಬಗ್ಗೆ ಅನಿರುದ್ಧ್ ಅವರು ಮಾತನಾಡಿದ್ದಾರೆ. ‘ಸೂರ್ಯವಂಶ’ (Suryavamsha) ಧಾರಾವಾಹಿ ಮೂಲಕ ಅನಿರುದ್ಧ್​ ಅವರು ಮತ್ತೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ‘ಉದಯ ಟಿವಿ’ (Udaya Tv) ಮೂಲಕ ಈ ಸೀರಿಯಲ್​ ಪ್ರಸಾರ ಆಗಲಿದೆ. ಇಂದು (ಮಾರ್ಚ್​ 6) ‘ಸೂರ್ಯವಂಶ’ ಸೀರಿಯಲ್​ ತಂಡದವರು ಸುದ್ದಿಗೋಷ್ಠಿ ನಡೆಸಿದ್ದಾರೆ.

ಎಸ್​. ನಾರಾಯಣ್​ ಅವರ ನಿರ್ದೇಶನದಲ್ಲಿ ‘ಸೂರ್ಯವಂಶ’ ಸೀರಿಯಲ್​ ಈ ಮೊದಲೇ ಸೆಟ್ಟೇರಬೇಕಿತ್ತು. ಆದರೆ ಕಾರಣಾಂತರಗಳಿಂದ ತಂಡ ಬದಲಾಯಿತು. ಈ ಬದಲಾದ ತಂಡದ ಜೊತೆ ಅನಿರುದ್ಧ್​ ಅವರು ಕೈ ಜೋಡಿಸಿದ್ದಾರೆ. ಹರಿಸಂತು ಅವರು ಈ ಸೀರಿಯಲ್​ನ ಪ್ರಧಾನ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ. ಸಂಚಿಕೆ ನಿರ್ದೇಶನದ ಜವಾಬ್ದಾರಿಯನ್ನು ಪ್ರಕಾಶ್​ ಮುಚ್ಚಳಗುಡ್ಡ ಅವರು ನಿಭಾಯಿಸುತ್ತಿದ್ದಾರೆ. ಮಾರ್ಚ್​ 11ರಿಂದ ಸೋಮವಾರದಿಂದ ಶನಿವಾರದ ತನಕ ಪ್ರತಿ ರಾತ್ರಿ 8 ಗಂಟೆಗೆ ಉದಯ ಟಿವಿಯಲ್ಲಿ ‘ಸೂರ್ಯವಂಶ’ ಸೀರಿಯಲ್​ ಪ್ರಸಾರ ಆಗಲಿದೆ.

ತಮ್ಮ ವಿರುದ್ಧದ ಪಿತೂರಿ ಬಗ್ಗೆ ಅನಿರುದ್ಧ್ ಮೌನ ಮುರಿದಿದ್ದಾರೆ. ‘ನಮ್ಮ ನಿರ್ಮಾಪಕರಿಗೆ ಕರೆ ಬಂದಿಲ್ಲವೇನೋ. ಬಂದಿದ್ದರೂ ಅವರು ಹೇಳದೇ ಇರಬಹುದು. ಆದರೆ ಉದಯ ವಾಹಿನಿಯವರಿಗೆ ಅನೇಕ ಕರೆಗಳು ಬಂದಿವೆ. ಈ ಚಾನೆಲ್ ಉತ್ತುಂಗದಲ್ಲಿ ಇದ್ದಾಗ ಬೇರೆ ಚಾನೆಲ್​ಗಳು ಹುಟ್ಟಿಯೇ ಇರಲಿಲ್ಲ. ಅದು ಉದಯ ವಾಹಿನಿಯ ಶಕ್ತಿ. ಅದು ಅವರಿಗೂ ಗೊತ್ತಿದೆ. ಯಾರು ಎಷ್ಟೇ ಕರೆಗಳು ಮಾಡಿದರೂ ಕೂಡ ಕಚೇರಿಗೆ ಬನ್ನಿ ಮಾತನಾಡೋಣ ಅಂತ ಉದಯ ಟಿವಿ ಅವರು ಹೇಳಿದರು. ಆದರೆ ಯಾರೂ ಮಾತನಾಡಲು ಬರಲಿಲ್ಲ’ ಎಂದು ಅನಿರುದ್ಧ್ ಹೇಳಿದ್ದಾರೆ. ಈ ಮೊದಲು ಎಸ್​. ನಾರಾಯಣ್​ ಅವರ ಬಳಿಯೂ ಹೋಗಿ ‘ಅನಿರುದ್ಧ್​ ಅವರನ್ನು ಆಯ್ಕೆ ಮಾಡಿಕೊಳ್ಳಬೇಡಿ’ ಅಂತ ಕೆಲವರು ಪಿತೂರಿ ಮಾಡಿದ್ದರು. ‘ಅಂಥವರಿಗೆ ಎಸ್​. ನಾರಾಯಣ್​ ಸೂಕ್ತ ಉತ್ತರ ನೀಡಿದ್ದರು. ಆ ಬಳಿಕ ಬೇರೆ ಯಾರೂ ಮಾತನಾಡಲು ಬರಲಿಲ್ಲ’ ಎಂದಿದ್ದಾರೆ ಅನಿರುದ್ಧ್.

ಇದನ್ನೂ ಓದಿ: ಭಾರತಿ ವಿಷ್ಣುವರ್ಧನ್​ ಜೀವನದ ಕುರಿತ ಸಾಕ್ಷ್ಯಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಅನಿರುದ್ಧ್​ ಜತ್ಕರ್​

ಹಿರಿಯ ನಟ ಸುಂದರ್​ ರಾಜ್​ ಅವರು ಈ ಸೀರಿಯಲ್​ನಲ್ಲಿ ಸತ್ಯಮೂರ್ತಿ ಎಂಬ ಪಾತ್ರ ಮಾಡುತ್ತಿದ್ದಾರೆ. ಕಥಾನಾಯಕನ ತಾತನಾಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ‘ನಮ್ಮ ಮನೆಯಲ್ಲಿ ನಾವು ಮಗನನ್ನು ಕಳೆದುಕೊಂಡು ಮೊಮ್ಮಗನನ್ನು ಪಡೆದುಕೊಂಡೆವು. ಈ ಧಾರಾವಾಹಿಯಲ್ಲಿ ಕೂಡ ಇದೇ ರೀತಿಯ ಕಥೆ ಇದೆ. ಈ ಪಾತ್ರ ಒಪ್ಪಿಕೊಳ್ಳುವಾಗ ಉತ್ತಮ ಗುಣಮಟ್ಟದಲ್ಲಿ ಸೀರಿಯಲ್​ ಮೂಡಿಬರಬೇಕು ಎಂದು ನಾನು ಷರತ್ತು ಹಾಕಿದ್ದೆ. ಅದಕ್ಕೆ ತಕ್ಕಂತೆಯೇ ನಿರ್ಮಾಪಕರು ಅದ್ದೂರಿಯಾಗಿ ಸೀರಿಯಲ್​ ನಿರ್ಮಾಣ ಮಾಡುತ್ತಿದ್ದಾರೆ’ ಎಂದು ಸುಂದರ್​ ರಾಜ್​​ ಹೇಳಿದ್ದಾರೆ. ವಿಕ್ರಂ ಉದಯ್​ಕುಮಾರ್​, ರವಿ ಭಟ್​, ಸುಂದರಶ್ರೀ, ಪುಷ್ಪಾ ಬೆಳವಾಡಿ, ಲೋಕೇಶ್​​ ಬಸವಟ್ಟಿ ಮುಂತಾದ ಕಲಾವಿದರು ಈ ಸೀರಿಯಲ್​ನಲ್ಲಿ ನಟಿಸುತ್ತಿದ್ದಾರೆ.

‘ಸೂರ್ಯವಂಶ’ ಧಾರಾವಾಹಿ ತಂಡ

‘ಸೂರ್ಯವಂಶ’ ಧಾರಾವಾಹಿಯಲ್ಲಿ ನಾಯಕಿಯಾಗಿ ಅಶ್ವಿನಿ ನಟಿಸುತ್ತಿದ್ದಾರೆ. ಈ ಸೀರಿಯಲ್​ನ ಪ್ರೋಮೋಗಳು ಅದ್ದೂರಿಯಾಗಿ ಮೂಡಿಬಂದಿರುವ ಬಗ್ಗೆ ಅವರು ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಿರ್ಮಾಪಕರಿಗೆ ಧನ್ಯವಾದ ತಿಳಿಸಿದ್ದಾರೆ. ತನ್ವಿ ಕ್ರಿಯೇಷನ್ಸ್​ ಮೂಲಕ ಪದ್ಮನಾಭ್​ ಅವರು ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ನಾನು ಈ ಹಿಂದೆ ನಿರ್ಮಾಣ ಮಾಡಿದ ಮೂರು ಸಿನಿಮಾಗಳ ಪ್ರಸಾರ ಹಕ್ಕುಗಳನ್ನು ಉದಯ ಟಿವಿ ಅವರಿಗೆ ನೀಡಿದ್ದೇನೆ. ಈ ವಾಹಿನಿ ನನಗೆ ಗಾಡ್​ಫಾದರ್​ ಇದ್ದಂಗೆ. ಈ ಚಾನೆಲ್​ನಿಂದ ಸೂರ್ಯವಂಶ ಸೀರಿಯಲ್​ ನಿರ್ಮಾಣ ಮಾಡುವ ಅವಕಾಶ ಸಿಕ್ಕಾಗ ಅದನ್ನು ನಾನು ಖುಷಿಯಿಂದ ಒಪ್ಪಿಕೊಂಡೆ’ ಎಂದು ನಿರ್ಮಾಪಕ ಪದ್ಮನಾಭ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.