‘ಶೆಫ್ ಚಿದಂಬರ’ ಚಿತ್ರದಲ್ಲಿ ಅನಿರುದ್ಧ್ಗೆ ಜೋಡಿಯಾದ ನಿಧಿ ಸುಬ್ಬಯ್ಯ; ಪೋಸ್ಟರ್ ರಿಲೀಸ್
‘ಶೆಫ್ ಚಿದಂಬರ’ ಚಿತ್ರತಂಡವು ನಿಧಿ ಸುಬ್ಬಯ್ಯ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಸಿನಿಮಾದಲ್ಲಿ ಅವರು ಮೋನಾ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಅವರ ಪೋಸ್ಟರ್ ಕುತೂಹಲ ಮೂಡಿಸುವಂತಿದೆ. ನಿಧಿ ಸುಬ್ಬಯ ಅವರ ಕೈಯಲ್ಲಿ ಬೇಡಿ ಇದೆ.
ಕನ್ನಡದ ಖ್ಯಾತ ನಟ ಅನಿರುದ್ಧ್ ಜತ್ಕರ್ (Anirudh Jatkar) ಅವರು ಹೀರೋ ಆಗಿ ಅಭಿನಯಿಸಿರುವ ‘ಶೆಫ್ ಚಿದಂಬರ’ (Chef Chidambara) ಸಿನಿಮಾ ಹಲವು ಕಾರಣಗಳಿಂದ ಕೌತುಕ ಮೂಡಿಸಿದೆ. ‘ರಾಘು’ ಚಿತ್ರದ ಖ್ಯಾತಿಯ ನಿರ್ದೇಶಕ ಎಂ. ಆನಂದರಾಜ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಸಿನಿಮಾ ತಂಡದಿಂದ ಅಪ್ಡೇಟ್ ಸಿಕ್ಕಿದೆ. ‘ಶೆಫ್ ಚಿದಂಬರ’ ಚಿತ್ರದ ಶೂಟಿಂಗ್ ಮುಕ್ತಾಯ ಆಗಿದೆ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಈಗ ನಾಯಕಿಯ ಪಾತ್ರವನ್ನು ಪರಿಚಯಿಸುವ ಹೊಸ ಪೋಸ್ಟರ್ ಬಿಡುಗಡೆ ಆಗಿದೆ. ‘ಶೆಫ್ ಚಿದಂಬರ’ ಸಿನಿಮಾದಲ್ಲಿ ನಿಧಿ ಸುಬ್ಬಯ್ಯ (Nidhi Subbaiah) ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ.
‘ಶೆಫ್ ಚಿದಂಬರ’ ಚಿತ್ರತಂಡವು ನಿಧಿ ಸುಬ್ಬಯ್ಯ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಸಿನಿಮಾದಲ್ಲಿ ಅವರು ಮೋನಾ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಅವರ ಪೋಸ್ಟರ್ ಕುತೂಹಲ ಮೂಡಿಸುವಂತಿದೆ. ನಿಧಿ ಸುಬ್ಬಯ ಅವರ ಕೈಯಲ್ಲಿ ಬೇಡಿ ಇದೆ. ಹಾಗಾದರೆ ಅವರ ಪಾತ್ರ ಯಾವ ರೀತಿ ಇರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ನಿಧಿ ಸುಬ್ಬಯ್ಯ ಅವರ ಆಯ್ಕೆಯ ಬಗ್ಗೆ ನಿರ್ದೇಶಕ ಆನಂದ್ರಾಜ್ ಮಾತನಾಡಿದ್ದಾರೆ. ‘ಬಹಳ ದಿನಗಳ ಬಳಿಕ ನಿಧಿ ಸುಬ್ಬಯ್ಯ ಅವರು ನಮ್ಮ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ನಿಧಿ ಅವರ ಪೋಸ್ಟರ್ ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಆ ಪಾತ್ರದ ಹಿಂದಿನ ಕುತೂಹಲ ತಣಿಯಬೇಕು ಎಂದರೆ ಪೂರ್ತಿ ಸಿನಿಮಾ ನೋಡಬೇಕು’ ಎಂದು ಆನಂದರಾಜ್ ಹೇಳಿದ್ದಾರೆ.
ಇದನ್ನೂ ಓದಿ: ‘ಯಜಮಾನ’ ಮುಹೂರ್ತ ನಡೆದ ದೈವಿ ಸ್ಥಳದಲ್ಲೇ ಸೆಟ್ಟೇರಿತು ಅನಿರುದ್ಧ್ ಹೊಸ ಸಿನಿಮಾ ‘ಶೆಫ್ ಚಿದಂಬರ’
ಅನಿರುದ್ಧ್ ಅವರು ಶೆಫ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ‘ಶೆಫ್ ಚಿದಂಬರ’ ಸಿನಿಮಾ ಡಾರ್ಕ್ ಕಾಮಿಡಿ ಪ್ರಕಾರದಲ್ಲಿ ಮೂಡಿಬರಲಿದೆ. ಈ ಪಾತ್ರಕ್ಕಾಗಿ ಅವರು ಬಹಳ ತಯಾರಿ ಮಾಡಿಕೊಂಡು ಶೂಟಿಂಗ್ನಲ್ಲಿ ಭಾಗಿ ಆಗಿದ್ದಾರೆ. ಅನಿರುದ್ಧ್ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಮತ್ತು ‘ಲವ್ ಮಾಕ್ಟೇಲ್’ ಸಿನಿಮಾದ ಖ್ಯಾತಿಯ ನಟಿ ರೆಚೆಲ್ ಡೇವಿಡ್ ಅವರು ಅಭಿನಯಿಸಿದ್ದಾರೆ. ಕೆ.ಎಸ್. ಶ್ರೀಧರ್, ಶರತ್ ಲೋಹಿತಾಶ್ವ, ಶಿವಮಣಿ ಮುಂತಾದ ಕಲಾವಿದರು ‘ಶೆಫ್ ಚಿದಂಬರ’ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ.
View this post on Instagram
‘ದಮ್ತಿ ಪಿಕ್ಚರ್ಸ್’ ಲಾಂಛನದಲ್ಲಿ ರೂಪ ಡಿ.ಎನ್. ನಿರ್ಮಿಸುತ್ತಿರುವ ‘ಶೆಫ್ ಚಿದಂಬರ’ ಸಿನಿಮಾಗೆ ನಿರ್ದೇಶಕರೇ ಕಥೆ ಬರೆದಿದ್ದಾರೆ. ಗಣೇಶ್ ಪರಶುರಾಮ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಉದಯ್ಲೀಲ ಛಾಯಾಗ್ರಹಣ ಮಾಡಿದ್ದಾರೆ. ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಜೇತ್ ಚಂದ್ರ ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ‘ವಿಕ್ರಾಂತ್ ರೋಣ’ ಸಿನಿಮಾ ಖ್ಯಾತಿಯ ಆಶಿಕ್ ಕುಸುಗೊಳ್ಳಿ ಅವರು ಡಿ.ಐ. ಮಾಡುತ್ತಿದ್ದಾರೆ. ನರಸಿಂಹಮೂರ್ತಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಕಾಸ್ಟ್ಯೂಮ್ ಡಿಸೈನ್ ಮತ್ತು ನೃತ್ಯ ನಿರ್ದೇಶನ ಮಾಧುರಿ ಪರಶುರಾಮ್ ಅವರದ್ದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.