ಡ್ರೋನ್ ಪ್ರತಾಪ್ ವಿರುದ್ಧ ಮತ್ತೊಂದು ದೂರು ದಾಖಲು

|

Updated on: Feb 01, 2024 | 11:04 PM

Drone Prathap: ಬಿಗ್​ಬಾಸ್ ರನ್ನರ್ ಅಪ್ ಡ್ರೋನ್ ಪ್ರತಾಪ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಮಹೇಶ್ ಎಂಬುವರು ಪ್ರತಾಪ್ ವಿರುದ್ಧ ದೂರು ನೀಡಿದ್ದಾರೆ.

ಡ್ರೋನ್ ಪ್ರತಾಪ್ ವಿರುದ್ಧ ಮತ್ತೊಂದು ದೂರು ದಾಖಲು
Follow us on

ಬಿಗ್​ಬಾಸ್ ಕನ್ನಡ (Bigg Boss Kannada) ಸೀಸನ್ 10ರ ರನ್ನರ್ ಅಪ್ ಆಗಿರುವ ಡ್ರೋನ್ ಪ್ರತಾಪ್​ಗೆ ಬಿಗ್​ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಕೆಲವು ಸಂಕಷ್ಟಗಳು ಶುರುವಾಗಿವೆ. ಪ್ರತಾಪ್, ಬಿಗ್​ಬಾಸ್ ಮನೆಗೆ ಹೋದಾಗ ಅವರ ಮೇಲೆ ಕರುಣೆಯ ಸುರಿಮಳೆಯನ್ನೇ ಕರ್ನಾಟಕ ಜನ ಸುರಿಸಿದ್ದರು. ಅದರ ಆಧಾರದಲ್ಲಿಯೇ ಅವರು ಬಿಗ್​ಬಾಸ್ ಫಿನಾಲೆ ವರೆಗೆ ಬಂದು ರನ್ನರ್ ಅಪ್ ಆಗಿದ್ದರು. ಆದರೆ ಅದರ ಬೆನ್ನಲ್ಲೆ ಕೆಲವರು ಅವರ ವಿರುದ್ಧ ಕೆಲವು ಆರೋಪಗಳನ್ನು ಸಹ ಮಾಡಿದ್ದು, ಇದೀಗ ಪ್ರತಾಪ್ ವಿರುದ್ಧ ನಿಯಮ ಉಲ್ಲಂಘನೆಯ ದೂರು ದಾಖಲಾಗಿದೆ.

ಡ್ರೋನ್ ಪ್ರತಾಪ್, ಡ್ರೋನ್ ಆರ್ಕ್ ಹೆಸರಿನ ಸಂಸ್ಥೆ ಪ್ರಾರಂಭಿಸಿದ್ದು, ಅದರ ಮೂಲಕ ಡ್ರೋನ್ ಮಾರಾಟದಲ್ಲಿ ತೊಡಗಿದ್ದರು. ಬಿಗ್​ಬಾಸ್ ಮನೆಗೆ ಹೋಗುವ ಮುಂಚೆಯೇ ಪ್ರತಾಪ್ ಡ್ರೋನ್ ಮಾರಾಟದಲ್ಲಿ ತೊಡಗಿದ್ದರು. ಡ್ರೋನ್ ಮೂಲಕ ಔಷಧಿ ಸಿಂಪಡಿಸುವ ಕೆಲವು ಪ್ರಾತ್ಯಕ್ಷತೆ ವೀಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕೆಲವರಿಗೆ ತಮ್ಮ ಡ್ರೋನ್​ಗಳ ಮಾರಾಟವನ್ನೂ ಸಹ ಮಾಡಿದ್ದರು.

ಇದೀಗ ಇದೇ ವಿಷಯವಾಗಿ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಡ್ರೋನ್ ಪ್ರತಾಪ್ ವಿರುದ್ಧ ದೂರು ದಾಖಲಾಗಿದೆ. ನಾಗರೀಕ ವಿಮಾನಯಾನ ಇಲಾಖೆ (ಡಿಜಿಸಿಎ)ಯ ಅನುಮತಿ ಪಡೆಯದೇ ಡ್ರೋನ್ ಪ್ರತಾಪ್ ಅವರು ಡ್ರೋನ್ ಮಾರಾಟ ಮಾಡಿದ್ದಾರೆ ಎಂದು ಮಹೇಶ್ ಎಂಬುವರು ಪ್ರತಾಪ್ ವಿರುದ್ಧ ದೂರು ನೀಡಿದ್ದಾರೆ. ಸೂಕ್ತ ಪರವಾನಗಿ ಇಲ್ಲದೆ ಡ್ರೋನ್ ಮಾರಾಟ ಮಾಡುತ್ತಿರುವ ಪ್ರತಾಪ್ ಅವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಹೇಶ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಪ್ರತಾಪ್​ ಸಿಂಹ ವಿರುದ್ಧ ಸುದ್ದಿಗೋಷ್ಠಿ ನಡೆಸದಂತೆ ಕೋರ್ಟ್ ತಡೆ, ಕೆಪಿಸಿಸಿ ವಕ್ತಾರ ಲಕ್ಷ್ಮಣ್​ಗೆ ನೋಟಿಸ್

ಡ್ರೋನ್ ಪ್ರತಾಪ್ ಈಗಾಗಲೇ ಕೆಲವರಿಗೆ ಡ್ರೋನ್​ಗಳನ್ನು ತಮ್ಮ ಸಂಸ್ಥೆಯ ಮೂಲಕ ಮಾರಾಟ ಮಾಡಿದ್ದಾರೆ. ಪುಣೆಯ ಸಾರಂಗ್ ಎಂಬುವರಿಗೆ ಕೆಲವು ಡ್ರೋನ್​ಗಳನ್ನು ಮಾರಾಟ ಮಾಡಿದ್ದಾರೆ. ಸಾರಂಗ್ ಸಹ ಪ್ರತಾಪ್ ವಿರುದ್ಧ ಕೆಲವು ದಿನಗಳ ಹಿಂದೆ ಆರೋಪ ಮಾಡಿದ್ದು, ತಮ್ಮಿಂದ 38 ಲಕ್ಷ ರೂಪಾಯಿ ಹಣ ಪಡೆದಿರುವ ಡ್ರೋನ್ ಪ್ರತಾಪ್, ಒಪ್ಪಂದದಲ್ಲಿ ಇದ್ದಷ್ಟು ಡ್ರೋನ್​ಗಳನ್ನು ನೀಡಿಲ್ಲ. ಕೆಲವು ಡ್ರೋನ್​ಗಳು ಮಾತ್ರವೇ ಈವರೆಗೆ ನೀಡಿದ್ದು ಅವುಗಳಲ್ಲಿ ಕೆಲವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.

ಅದರ ಜೊತೆಗೆ ಬಿಬಿಎಂಪಿ ಮಾಜಿ ಅಧಿಕಾರಿ ಪ್ರಯಾಗ್ ಸಹ ಡ್ರೋನ್ ಪ್ರತಾಪ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಬಿಗ್​ಬಾಸ್ ಮನೆ ಒಳಗಿದ್ದ ಪ್ರತಾಪ್, ಕೋವಿಡ್ ಸಮಯದಲ್ಲಿ ಕೆಲವು ಅಧಿಕಾರಿಗಳು ತಮ್ಮ ಬಳಿ ಕೆಟ್ಟದಾಗಿ ನಡೆದುಕೊಂಡರು. ತಲೆಗೆ ಹೊಡೆದರು. ದೌರ್ಜನ್ಯ ಮಾಡುವ ರೀತಿ ವರ್ತಿಸಿದ್ದರು ಎಂದು ಹೇಳಿ ಕಣ್ಣೀರು ಹಾಕಿದ್ದರು. ಪ್ರಯಾಗ್ ಅವರು ಪ್ರತಾಪ್ ಅನ್ನು ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ವಿಚಾರಣೆ ನಡೆಸಿದ್ದರು. ಹಾಗಾಗಿ ಪ್ರಯಾಗ್ ಅವರು 50 ಲಕ್ಷ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ