ಅಪರ್ಣಾ ದೊಡ್ಡ ಸಿನಿಮಾ ನಟಿ ಆಗಬಹುದಿತ್ತು, ಆದರೆ…: ಬಾಲ್ಯದ ಗೆಳೆಯ ರವೀಂದ್ರನಾಥ್ ಮಾತು

|

Updated on: Jul 12, 2024 | 12:44 PM

ಖ್ಯಾತ ನಿರೂಪಕಿ ಅಪರ್ಣಾ ವಸ್ತಾರೆ ಅವರ ಬಗ್ಗೆ ಬಾಲ್ಯದ ಗೆಳೆಯ ಹಾಗೂ ದೀರ್ಘ ಕಾಲದ ಸಹೋದ್ಯೋಗಿ ರವೀಂದ್ರನಾಥ್ ಮಾತನಾಡಿದ್ದಾರೆ. ಅಪರ್ಣಾ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಬಹುದಾಗಿದ್ದ ಪ್ರತಿಭೆ ಹೊಂದಿದ್ದ ಕಲಾವಿದೆ ಎಂಬುದನ್ನು ರವೀಂದ್ರನಾಥ್ ಹೇಳಿದ್ದಾರೆ.

ಅಪರ್ಣಾ ದೊಡ್ಡ ಸಿನಿಮಾ ನಟಿ ಆಗಬಹುದಿತ್ತು, ಆದರೆ...: ಬಾಲ್ಯದ ಗೆಳೆಯ ರವೀಂದ್ರನಾಥ್ ಮಾತು
Follow us on

ಖ್ಯಾತ ನಿರೂಪಕಿ, ನಟಿ ಅಪರ್ಣಾ ಇಹಲೋಕ ತ್ಯಜಿಸಿದ್ದಾರೆ. ಅಪರ್ಣಾರ ಈ ಹಠಾತ್ ನಿಧನ ಅವರ ಗೆಳೆಯರಿಗೆ, ಚಿತ್ರಕಲಾವಿದರಿಗೆ ತೀವ್ರ ಆಘಾತ ತಂದಿದೆ. ಅಪರ್ಣಾರ ಜೊತೆಗೆ ಕೆಲಸ ಮಾಡಿದ ಅವರ ಒಡನಾಟದಲ್ಲಿದ್ದ ಹಲವು ಗೆಳೆಯರು, ಆಪ್ತರು ಅಪರ್ಣಾ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಪರ್ಣಾರ ಬಾಲ್ಯ ಸ್ನೇಹಿತರಾಗಿದ್ದ ಆ ಬಳಿಕ ಹಲವು ದಶಕಗಳ ಕಾಲ ಸಹೋದ್ಯೋಗಿಯೂ ಆಗಿದ್ದ ಹಿರಿಯ ಸುದ್ದಿ ನಿರೂಪಕ ರವೀಂದ್ರನಾಥ್ ರವೀಂದ್ರನಾಥ್ ಅವರು ಅಪರ್ಣಾ ಅವರ ಬಗ್ಗೆ ಕೆಲವು ಅಪರೂಪದ ವಿಷಯಗಳನ್ನು ಟಿವಿ9 ಕನ್ನಡದ ಜೊತೆಗೆ ಹಂಚಿಕೊಂಡಿದ್ದಾರೆ.

‘ನಮ್ಮ ಹಾಗೂ ಅಪರ್ಣಾರ ಕುಟುಂಬದ ನಡುವೆ ಆತ್ಮೀಯ ಗೆಳೆತನವಿತ್ತು. ಆರಂಭದ ದಿನಗಳಲ್ಲಿ ನಾನು ಆಕಾಶವಾಣಿಯಲ್ಲಿ ಬಾಲಕಲಾವಿದನಾಗಿ ನಾಟಕಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಅದೇ ಸಮಯದಲ್ಲಿ ಅಪರ್ಣಾ ಸಹ ಬಾಲಕಲಾವಿದೆಯಾಗಿ ಆಕಾಶವಾಣಿಯ ನಾಟಕಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಡಾ ವಸಂತ್ ಕೌಲಿ ಅವರ ನಿರ್ದೇಶನದಲ್ಲಿ ಹಲವು ನಾಟಕಗಳಲ್ಲಿ ಒಟ್ಟಾಗಿ ನಟಿಸಿದೆವು. ಅಪರ್ಣಾರ ಭಾಷೆ, ಉಚ್ಛಾರದ ಬಗ್ಗೆ ಎಲ್ಲರೂ ಹೆಮ್ಮೆ ಪಡುತ್ತಾರೆ. ಅದಕ್ಕೆ ಮುಖ್ಯ ಕಾರಣವಾಗಿದ್ದು ಆ ನಾಟಕಗಳು ಮತ್ತು ಆಕಾಶವಾಣಿ’ ಎಂದು ಗುರುತಿಸುತ್ತಾರೆ ರವೀಂದ್ರನಾಥ್.

‘ಬಾಲ್ಯದ ಸಮಯದಲ್ಲಿ ಅವರ ಮನೆ ಗುಟ್ಟಹಳ್ಳಿ ಬಳಿ ಇತ್ತು, ಅಲ್ಲಿಗೆ ಹೋಗಿ ಊಟ ಮಾಡುತ್ತಿದ್ದ ನೆನಪು, ಓಡಾಡಿ, ಆಟವಾಡಿದ ನೆನಪುಗಳು ಬಹಳ ಇವೆ. ಆ ನಂತರ ನಾವು ಮತ್ತೆ ದೂರದರ್ಶನದಲ್ಲಿ ಒಟ್ಟಿಗೆ ಕೆಲಸ ಮಾಡಲು ಪ್ರಾರಂಭಿಸಿದೆವು. ಅಪರ್ಣಾ ನಿರೂಪಕಿಯಾಗಿ, ನಾನು ಸುದ್ದಿ ವಾಚಕನಾಗಿ ಕೆಲಸ ಆರಂಭಿಸಿದೆವು. ಹಲವಾರು ಸರ್ಕಾರಿ ಕಾರ್ಯಕ್ರಮಗಳಲ್ಲಿ ನಾವು ಒಟ್ಟಿಗೆ ನಿರೂಪಣೆ ಮಾಡಿದ್ದೇವೆ. ಹಲವಾರು ಸಾಕ್ಷ್ಯಚಿತ್ರಗಳಲ್ಲಿ ನಾವಿಬ್ಬರೂ ಒಟ್ಟಿಗೆ ಧ್ವನಿ ನೀಡಿದ್ದೀವೆ. ನಮ್ಮಿಬ್ಬರದ್ದು ಬಹಳ ದೀರ್ಘ ಒಡನಾಟ’ ಎಂದು ನೆನಪು ಮಾಡಿಕೊಂಡಿದ್ದಾರೆ ರವೀಂದ್ರನಾಥ್.

ಇದನ್ನೂ ಓದಿ:ಮುಂದಿನ ನಿಲ್ದಾಣ…. ಮೆಟ್ರೋ ಧ್ವನಿ ಅಪರ್ಣಾ ನಿಧನ, ಬಿಎಂಆರ್​ಸಿಎಲ್​ನಿಂದ ಶ್ರದ್ಧಾಂಜಲಿ

‘ಅಪರ್ಣಾ ಅವರು ಚೌಕಟ್ಟು ಹಾಕಿಕೊಂಡಿದ್ದವರಲ್ಲ. ಬಾಲ್ಯದಲ್ಲಿಯೇ ದೊಡ್ಡ ಕನಸುಗಳನ್ನು ಕಟ್ಟಿಕೊಂಡಿದ್ದರು. ಅಪರ್ಣಾರ ತಂದೆಗೆ ಸಿನಿಮಾದೊಟ್ಟಿಗೆ ನಂಟಿತ್ತು. ನಮಗೂ ಆಗೆಲ್ಲ ಅನ್ನಿಸಿತ್ತು, ಅಪರ್ಣಾ ದೊಡ್ಡ ನಟಿಯಾಗುತ್ತಾರೆ ಎಂದು. ಅವರಿಗೂ ಆಸೆ ಇತ್ತು, ಆದರೆ ಕೆಲವು ಖಾಸಗಿ ಕಾರಣಗಳಿಂದ ಅವರು ನಟಿಯಾಗಿ ಹೆಚ್ಚು ಗುರುತಿಸಿಕೊಳ್ಳಲು ಆಗಲಿಲ್ಲ. ಆದರೆ ಅವರಿಗೆ ಅಪಾರವಾದ ನಟನಾ ಪ್ರತಿಭೆಯಂತೂ ಇತ್ತು. ನಿರೂಪಕಿಯಾಗಿ ಅವರಿಗೆ ಬಹಳ ಬೇಡಿಕೆ ಇತ್ತು, ನಿರೂಪಕಿಯಾಗಿ ಅವರಿಗಿದ್ದ ಬೇಡಿಕೆ ಮತ್ತು ಆ ಬೇಡಿಕೆಯನ್ನು ಪೂರೈಸುವ ಅಗತ್ಯತೆ ಇದ್ದ ಕಾರಣ ಅವರು ಕೊನೆಗೆ ನಿರೂಪಕಿಯಾಗಿಯೇ ಮುಂದುವರೆಸಿರು. ಇಲ್ಲವಾದರೆ ಅವರು ಇಷ್ಟು ಹೊತ್ತಿಗೆ ಐದುನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟಿಯಾಗಬೇಕಿತ್ತು’ ಎಂದಿದ್ದಾರೆ ರವೀಂದ್ರ.

‘ನಿರೂಪಣೆಗೆ ಹೊಸತನವನ್ನು ಅಪರ್ಣಾ ನೀಡಿದರು. ವಿಷಯವನ್ನು ಪ್ರಸ್ತುತಿಯ ಕುಶಲತೆಯನ್ನು ಇನ್ಯಾರಲ್ಲೂ ನಾನು ಕಾಣಲಿಲ್ಲ. ಅವರಿಗೆ ಭಾಷೆಯ ಮೇಲೆ ಬಹಳ ಹಿಡಿತವಿತ್ತು, ಪದಗಳ ಆಯ್ಕೆ ಬಗ್ಗೆ ಅಪಾರವಾದ ಕುಶಲತೆ ಇತ್ತು. ನಿರೂಪಣೆ ಕಲೆಯನ್ನು ಹೊಸ ಎತ್ತರಕ್ಕೆ ಅಪರ್ಣಾ ಕೊಂಡೊಯ್ದರು. ಇತ್ತೀಚೆಗಿನ ವರ್ಷಗಳಲ್ಲಿ ನಮ್ಮ ಒಡನಾಟ ಕಡಿಮೆಯಾಗಿತ್ತಾದರೂ ಪ್ರತಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಗೆ ಮಾಣಿಕ್ ಶಾ ಪೆರೆಡ್​ನ ಕಾರ್ಯಕ್ರಮದ ವೀಕ್ಷಕ ವಿವರಣೆಗೆ ನಾವು ಭೇಟಿ ಆಗುತ್ತಿದ್ದೆವು. ರಿಹರ್ಸಲ್ ಇತರೆಗಳಿಗಾಗಿ ಒಂದು ವಾರವಾದರೂ ಒಟ್ಟಿಗೆ ಸೇರಿ ಮಾತನಾಡುತ್ತಿದ್ದೆವು, ಹೋಟೆಲ್​ಗೆ ತೆರಳಿ ಊಟ ಮಾಡಿ ಕೆಲ ಆಪ್ತ ಮಾತುಗಳನ್ನು ಆಡುತ್ತಿದ್ದೆವು. ಎರಡು ತಿಂಗಳ ಹಿಂದೆ ಕೊನೆಯ ಬಾರಿ ನಾನು ಕರೆ ಮಾಡಿ ಕಾರ್ಯಕ್ರಮವೊಂದಕ್ಕೆ ಬರುತ್ತಿದ್ದೀರ ಎಂದಾಗ ಇಲ್ಲ ತುಸು ಆರೋಗ್ಯ ಸರಿಯಿಲ್ಲ ಎಂದಷ್ಟೆ ಅಪರ್ಣಾ ಹೇಳಿದರು. ಆದರೆ ಅವರ ಆರೋಗ್ಯ ಇಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದು ನಮಗೆ ತಿಳಿದಿರಲಿಲ್ಲ’ ಎಂದು ಬಾಲ್ಯದ ಗೆಳತಿಯ ಆತ್ಮಕ್ಕೆ ಶಾಂತಿ ಕೋರಿದರು ರವೀಂದ್ರನಾಥ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ