ಮುಂದಿನ ನಿಲ್ದಾಣ…. ಮೆಟ್ರೋ ಧ್ವನಿ ಅಪರ್ಣಾ ನಿಧನ, ಬಿಎಂಆರ್​ಸಿಎಲ್​ನಿಂದ ಶ್ರದ್ಧಾಂಜಲಿ

ಶ್ವಾಸಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ನಟಿ, ನಿರೂಪಕಿ ಅಪರ್ಣಾ (58) ಅವರು ಗುರುವಾರ ರಾತ್ರಿ ನಿಧನರಾಗಿದ್ದಾರೆ. ನಮ್ಮ ಮೆಟ್ರೋದ ಘೋಷಣೆಯ ಹಿಂದಿನ ಶಾರೀರ ಅಪರ್ಣಾ ಅವರದ್ದಾಗಿದೆ. ಕಳೆದ 13 ವರ್ಷಗಳಿಂದ ಅಪರ್ಣ ಅವರು ನಮ್ಮ ಮೆಟ್ರೋಗೆ ಧ್ವನಿ ನೀಡುತ್ತಾ ಬಂದಿದ್ದರು. ಬಿಎಂಆರ್​ಸಿಎಲ್​ ಅಧಿಕಾರಿಗಳು ಅಪರ್ಣಾ ಅವರಿಗೆ ಸಂತಾಪ ಸೂಚಿಸಿದ್ದಾರೆ.

ಮುಂದಿನ ನಿಲ್ದಾಣ.... ಮೆಟ್ರೋ ಧ್ವನಿ ಅಪರ್ಣಾ ನಿಧನ, ಬಿಎಂಆರ್​ಸಿಎಲ್​ನಿಂದ ಶ್ರದ್ಧಾಂಜಲಿ
ನಿರೂಪಕಿ ಅಪರ್ಣಾ
Follow us
Kiran Surya
| Updated By: ವಿವೇಕ ಬಿರಾದಾರ

Updated on:Jul 12, 2024 | 12:14 PM

ಬೆಂಗಳೂರು, ಜುಲೈ 12: ಕನ್ನಡದ ನಟಿ, ಖ್ಯಾತ ನಿರೂಪಕಿ ಅಪರ್ಣಾ (58) (Aparna) ಅವರು ನಿಧನರಾಗಿದ್ದಾರೆ. ನಿರೂಪಕಿ ಅಪರ್ಣಾ ಅವರು ನಮ್ಮ ಮೆಟ್ರೋಗೆ (Namma Metro) ಧ್ವನಿಯಾಗಿದ್ದರು. ಮೆಟ್ರೋ ನಿಲ್ದಾಣ ಮತ್ತು ರೈಲುಗಳಲ್ಲಿ ಸೂಚನೆಗಳು ಅಪರ್ಣಾ ಅವರು ಧ್ವನಿಯಲ್ಲಿ ಕೇಳುತ್ತವೆ. ಮುಂದಿನ ನಿಲ್ದಾಣ ನಾಡಪ್ರಭು ಕೆಂಪೇಗೌಡ ನಿಲ್ದಾಣ.., ಬಾಗಿಲುಗಳು ಎಡಕ್ಕೆ ತೆರೆಯಲಿವೆ ಎಂಬ ಶಾರೀರ ಅಪರ್ಣಾ ಅವರದ್ದು. ಆದರೆ, ಇದೀಗ ಶಾರೀರ ಇದ್ದು ಶರೀರ ಇಹಲೋಕ ತ್ಯಜಿಸಿದೆ. ನಿರೂಪಕಿ ಅಪರ್ಣಾ ಅವರಿಗೆ ಬಿಎಂಆರ್​ಸಿಎಲ್​ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ. ನಮ್ಮ ಮೆಟ್ರೋದಲ್ಲಿ ವಾಯ್ಸ್ ಅನೌನ್ಸ್ ಮಾಡವ ಮೂಲಕ ಗೌರವದ ಸಂತಾಪ ಸೂಚಿಸಿದ್ದಾರೆ.

ನಿರೂಪಕಿ ಅಪರ್ಣಾ ಅವರು ಕಳೆದ 13 ವರ್ಷಗಳಿಂದ ನಮ್ಮ ಮೆಟ್ರೋಗೆ ಧ್ವನಿ ನೀಡಿದ್ದಾರೆ. ಮೊದಲ ಬಾರಿಗೆ 2011ರ ಅಕ್ಟೋಬರ್ 20 ರಂದು ಎಂಜಿ ರೋಡ್​ನಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ಸಂಚಾರ ಆರಂಭಿಸಿದಾಗಿನಿಂದ ಇತ್ತೀಚೆಗೆ 2023ರ ಅಕ್ಟೋಬರ್​ 9 ರಂದು ಉದ್ಘಾಟನೆಗೊಂಡ ಕೆಂಗೇರಿಯಿಂದ ಚಲ್ಲಘಟ್ಟ, ಕೆ.ಆರ್ ಪುರನಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ರೈಲು ಮತ್ತು ನಿಲ್ದಾಣಗಳಲ್ಲಿ ನಟಿ ಅಪರ್ಣಾ ವಾಯ್ಸ್ ನೀಡಿದ್ದರು.

ಇದನ್ನೂ ಓದಿ: ಅಪರ್ಣಾಗೆ ಮದುವೆ ಮಾಡಬೇಡಿ ಎಂದು ಕೋರಿದ್ದ ನಿರ್ದೇಶಕ; ಚಿತ್ರರಂಗಕ್ಕೆ ಬರಲು ಕಾರಣವಾಗಿದ್ದು ಇದೇ ವ್ಯಕ್ತಿ

ತಮ್ಮ ಧ್ವನಿ ನಿಲ್ದಾಣಗಳಲ್ಲಿ ಮತ್ತು  ಮೆಟ್ರೋಗಳಲ್ಲಿ ಹೇಗೆ ಕೇಳಿಸುತ್ತದೆ ಎಂದು ತಿಳಿಯಲು ಅಪರ್ಣಾ ಅವರು 2011ರ ದೀಪಾವಳಿಯಂದು ಎಂಜಿ ರೋಡ್​ನಿಂದ ಬೈಯ್ಯಪ್ಪನಹಳ್ಳಿವರಗೆ ಮೆಟ್ರೋದಲ್ಲಿ  ಪ್ರಯಾಣಿಸಿದ್ದರು.ಕಳೆದ 13 ವರ್ಷಗಳಿಂದ ಮೆಟ್ರೋ ನಿಲ್ದಾಣ ಮತ್ತು ರೈಲಿಗೆ ಅಪರ್ಣಾ ಧ್ವನಿ  ನೀಡುತ್ತಾ ಬಂದಿದ್ದರು. ಈ ಹಿನ್ನೆಲೆಯಲ್ಲಿ ಬಿಎಂಆರ್​ಸಿಎಲ್​ ಅಧಿಕಾರಿಗಳು ಅಪರ್ಣಾ ಅವರ ಮನೆಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿದರು. ಎಲ್ಲ ಮೆಟ್ರೋ ರೈಲು ಮತ್ತು ನಿಲ್ದಾಣಗಳಲ್ಲಿ ಅಪರ್ಣಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸ್ಥಳೀಯ ಅಧಿಕಾರಿಗಳಿಗೆ ಬಿಎಂಆರ್​ಸಿಎಲ್​ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಸೂಚಿಸಿದ್ದಾರೆ.

ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳನ್ನು ಅಪರ್ಣಾ ಅವರು ನಿರೂಪಿಸಿದರು. ನಂತರ ಭಾರತ ಸರ್ಕಾರದ ‘ವಿವಿಧ ಭಾರತಿ’ ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. 1998ರಲ್ಲಿ ನಡೆದ ದೀಪಾವಳಿ ಕಾರ್ಯಕ್ರವೊಂದನ್ನು ಸತತ ಎಂಟು ಗಂಟೆಗಳ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು.

ಪುಟ್ಟಣ್ಣ ಕಣಗಾಲ್​ ನಿರ್ದೇಶನದ ‘ಮಸಣದ ಹೂವು’ ಸಿನಿಮಾ ಮೂಲಕ ಅಪರ್ಣಾ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಅವರು ಕೊನೆಯದಾಗಿ ನಟಿಸಿದ್ದ ‘ಗ್ರೇ ಗೇಮ್ಸ್​’ ಸಿನಿಮಾ ಇತ್ತೀಚೆಗೆ ತೆರೆಕಂಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:52 am, Fri, 12 July 24