ನಿನ್ನ ರೀತಿ ರೂಮ್​ಗೆ ಹೋಗಿ ಒಬ್ಬರ ಕೈ ಹಿಡಿದುಕೊಂಡಿಲ್ಲ: ರಕ್ಷಿತಾ ಮೇಲೆ ಅಶ್ವಿನಿ ಗೌಡ ಆರೋಪ

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಅಶ್ವಿನಿ ಗೌಡ ಅವರು ತುಂಬಾ ಗರಂ ಆಗಿ ಮಾತನಾಡಿದ್ದಾರೆ. ರಕ್ಷಿತಾ ಶೆಟ್ಟಿ ಅವರ ವರ್ತನೆಗಳ ಬಗ್ಗೆ ಅವರು ತಕರಾರು ತೆಗೆದಿದ್ದಾರೆ. ಗಂಭೀರ ಆರೋಪ ಮಾಡಿದ್ದಾರೆ. ವಾದ-ಪ್ರತಿವಾದ ನಡೆಯುವಾಗ ರಕ್ಷಿತಾ ಶೆಟ್ಟಿ ಅವರು ಕುಗ್ಗಲಿಲ್ಲ. ಅಶ್ವಿನಿ ಮಾತಿಗೆ ತಿರುಗೇಟು ನೀಡಿದ್ದಾರೆ.

ನಿನ್ನ ರೀತಿ ರೂಮ್​ಗೆ ಹೋಗಿ ಒಬ್ಬರ ಕೈ ಹಿಡಿದುಕೊಂಡಿಲ್ಲ: ರಕ್ಷಿತಾ ಮೇಲೆ ಅಶ್ವಿನಿ ಗೌಡ ಆರೋಪ
Ashwini Gowda

Updated on: Nov 03, 2025 | 10:37 PM

ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ (Rakshitha Shetty) ಅವರು ಬದ್ಧ ವೈರಿಗಳ ರೀತಿ ಆಗಿದ್ದಾರೆ. ಪ್ರತಿ ವಾರ ಕೂಡ ಅವರಿಬ್ಬರ ನಡುವೆ ಕಿರಿಕ್ ಆಗುತ್ತಲೇ ಇದೆ. ಇಬ್ಬರ ನಡುವೆ ದೊಡ್ಡ ವಯಸ್ಸಿನ ಅಂತರ ಇದೆ. ಅಶ್ವಿನಿ ಗೌಡ ಅವರಿಗೆ ರಕ್ಷಿತಾ ಶೆಟ್ಟಿ ಠಕ್ಕರ್ ನೀಡುತ್ತಿದ್ದಾರೆ. ನಾಮಿನೇಷನ್ ವೇಳೆ ಕೂಡ ಅವರಿಬ್ಬರು ಪರಸ್ಪರ ಕಿತ್ತಾಡುತ್ತಿದ್ದಾರೆ. ನವೆಂಬರ್ 3ರ ಸಂಚಿಕೆಯಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ಅಶ್ವಿನಿ ಗೌಡ (Ashwini Gowda) ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ವಿಷಯಗಳು ಮತ್ತೆ ವಾರಾಂತ್ಯದಲ್ಲಿ ಚರ್ಚೆಗೆ ಬರುವ ಸಾಧ್ಯತೆ ದಟ್ಟವಾಗಿದೆ.

‘ನಾನು ಅಂದುಕೊಂಡಷ್ಟು ಮುಗ್ಧೆ ರಕ್ಷಿತಾ ಅಲ್ಲ. ಡ್ರಾಮಾ ಅಂತ ಅವರು ಕೆಲವರಿಗೆ ಹೇಳುತ್ತಾರೆ. ಡ್ರಾಮಾ ಕಂಪನಿಗೆ ಅಪ್ಪ ಅಲ್ಲ, ಮುತ್ತಾತ ಇವರು. ಅಷ್ಟು ಡ್ರಾಮಾ ಮಾಡಿಕೊಂಡು ಬಂದಿದ್ದಾರೆ. ಇವರ ಕುತಂತ್ರ ಅರ್ಥ ಆಗತ್ತೆ ಅಂತ ಒಬ್ಬೊಬ್ಬರನ್ನೇ ಟಾರ್ಗೆಟ್ ಮಾಡುತ್ತಾರೆ. ಅಲ್ಲಿ ಹೋಗಿ ಅವರ ಕೈ ಹಿಡಿದುಕೊಳ್ಳುವುದು. ನಾವು ಯಾರೂ 24-25ನೇ ವಯಸ್ಸಿಗೆ ಯಾರಿಗೂ ಅಂಟಿಕೊಂಡು ಮಕ್ಕಳ ಥರ ಆಡಲಿಲ್ಲ. ದಯವಿಟ್ಟು ಅದನ್ನು ಕಡಿಮೆ ಮಾಡಿಕೊಳ್ಳಿ. ನಿಮ್ಮಷ್ಟೇ ವಯಸ್ಸಿನವರು ಹೊರಗಡೆ ನೋಡುತ್ತಾರೆ’ ಎಂದು ಅಶ್ವಿನಿ ಗೌಡ ಅವರು ಹೇಳಿದರು.

‘ನಾವು ಕಷ್ಟ ನೋಡದೇ ಇಲ್ಲಿಗೆ ಬಂದಿಲ್ಲ. ನಾವು 100 ಸಿನಿಮಾ ಮಾಡಿದ್ದೇವೆ. ನೀನು ಒಂದು ಯೂಟ್ಯೂಬ್ ಚಾನೆಲ್ ಮಾಡಿ ಬಂದಿದ್ದೀಯ. ನಮ್ಮ 15 ವರ್ಷದ ಪ್ರಯಾಣ ಇದೆ ಇದರಲ್ಲಿ. ಪ್ರತಿ ಪಾಠವನ್ನು ಕಲಿತುಕೊಂಡೇ ನಾವು ಬಿಗ್ ಬಾಸ್ ಮನೆಗೆ ಬಂದಿರುವುದು. ನಮ್ಮ ವ್ಯಕ್ತಿತ್ವವನ್ನು ಕಸದ ಬುಟ್ಟಿಗೆ ಹಾಕುವ ಯೋಗ್ಯತೆ ನಿನಗೆ ಇಲ್ಲ. ನಿನ್ನಂತಹ ಚಾನೆಲ್ ನಾನು 100 ಮಾಡಬಹುದು. ನನ್ನ ರೀತಿ 39-40ನೇ ವಯಸ್ಸಿಗೆ ನೀನು 100 ಸಿನಿಮಾ ಮಾಡಿಬಿಡು. ಇದು ನಿನಗೆ ಚಾಲೆಂಜ್. ಜೈಲಿಗೆ ಹೋಗೋಕೆ ರೆಡಿ ಇರುವ ಹೆಣ್ಮಗಳು ನಾನು. ನಿನ್ನ ರೀತಿ ರೂಮ್​​ಗಳಲ್ಲಿ ಹೋಗಿ ಒಬ್ಬೊಬ್ಬರನ್ನೇ ಕೈ ಹಿಡಿದುಕೊಂಡು ಬಕೆಟ್ ಹಿಡಿಯೋ ಕೆಲಸ ನಾನು ಮಾಡಿಲ್ಲ’ ಎಂದರು ಅಶ್ವಿನಿ ಗೌಡ.

‘ನೇರಾನೇರ ಮಾತನಾಡಿದ್ದೇನೆ. ಓಟ್ ಬ್ಯಾಂಕ್ ಕ್ರಿಯೇಟ್ ಮಾಡಬೇಕು ಅಂತಿದ್ದರೆ ಒಳಗೆ ಬಂದಾಗ ನಾಟಕ ಮಾಡಿ ಎಲ್ಲರ ಮನಸ್ಸು ಗೆಲ್ಲಬಹುದಿತ್ತು. ನಾಟಕ ಮಾಡೋದು ಹೇಗೆ ಅಂತ ನಿನ್ನಿಂದ ನಾನು ಕಲಿಯಬೇಕಿಲ್ಲ’ ಎಂದು ಅಶ್ವಿನಿ ಗೌಡ ಅವರು ಗುಡುಗಿದರು. ಈ ವಾದ-ಪ್ರತಿವಾದ ನಡೆಯುವಾಗ ಬಿಗ್ ಬಾಸ್ ಮನೆಯ ಎಲ್ಲ ಸದಸ್ಯರು ಗಪ್ ಚುಪ್ ಆಗಿದ್ದರು.

ಇದನ್ನೂ ಓದಿ: ರಕ್ಷಿತಾ ಶೆಟ್ಟಿ ಸಲುವಾಗಿ ಅಶ್ವಿನಿ ಗೌಡ ವಿರುದ್ಧ ತಿರುಗಿ ಬಿದ್ದ ಗಿಲ್ಲಿ ನಟ

ಅಶ್ವಿನಿ ಗೌಡ ಅವರ ಮಾತಿಗೆ ರಕ್ಷಿತಾ ಶೆಟ್ಟಿ ಅವರು ತಿರುಗೇಟು ನೀಡಿದರು. ‘ಮುಗ್ಧರಿಗೆ ನಾನು ಮುಗ್ಧೆ. ಆದರೆ ರಾಕ್ಷಸಿಗೆ ನಾನು ರಾಕ್ಷಸಿಯೇ ಆಗುತ್ತೇನೆ. ನಿಮ್ಮನ್ನು ಮನೆಗೆ ಕಳಿಸಿಯೇ ನಾನು ಹೋಗುತ್ತೇನೆ. ಇದು ನಿಮಗೆ ನನ್ನ ಮೊದಲ ಚಾಲೆಂಜ್’ ಎಂದು ರಕ್ಷಿತಾ ಶೆಟ್ಟಿ ಅವರು ಹೇಳಿದ್ದಾರೆ. ಈ ಜಗಳದ ನಂತರ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವಿನ ಕಿರಿಕ್ ಇನ್ನಷ್ಟು ಹೆಚ್ಚಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.