ಮತ್ತೆ ರಕ್ಷಿತಾ ಶೆಟ್ಟಿಯನ್ನೇ ಟಾರ್ಗೆಟ್ ಮಾಡಿದ ಅಶ್ವಿನಿ ಗೌಡ: ಅತಿರೇಕವಾಗಿ ಆಡುತ್ತಿರುವ ರಾಶಿಕಾ
ರಕ್ಷಿತಾ ಶೆಟ್ಟಿ ಏನೇ ಮಾಡಿದರೂ ಅದರಲ್ಲಿ ತಪ್ಪು ಹುಡುಕಲು ರಾಶಿಕಾ ಶೆಟ್ಟಿ ಪ್ರಯತ್ನಿಸುತ್ತಿದ್ದಾರೆ. ಅಶ್ವಿನಿ ಗೌಡ ಕೂಡ ರಾಶಿಕಾ ಶೆಟ್ಟಿ ಜೊತೆ ಸೇರಿಕೊಂಡು ರಕ್ಷಿತಾ ಶೆಟ್ಟಿಯನ್ನೇ ಟಾರ್ಗೆಟ್ ಮಾಡಿದ್ದಾರೆ. ಈ ಮೊದಲು ಅಶ್ವಿನಿ ಗೌಡ ಅವರು ಈ ರೀತಿ ಮಾಡಿದ್ದಕ್ಕೆ ಕಿಚ್ಚ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದರು.

ಯೂಟ್ಯೂಬರ್ ರಕ್ಷಿತಾ ಶೆಟ್ಟಿ (Rakshita Shetty) ಅವರು ಬಿಗ್ ಬಾಸ್ (Bigg Boss Kannada Season 12) ಮನೆಯಲ್ಲಿ ಹೈಲೈಟ್ ಆಗುತ್ತಿದ್ದಾರೆ. ಅವರನ್ನು ಮಟ್ಟಹಾಕಲು ಅಶ್ವಿನಿ ಗೌಡ ಅವರು ಮೊದಲಿನಿಂದಲೂ ಪ್ಲ್ಯಾನ್ ಮಾಡುತ್ತಲೇ ಇದ್ದಾರೆ. ಆದರೆ ಅದಕ್ಕೆ ಅವರು ತುಳಿಯುತ್ತಿರುವ ಹಾದಿ ಯಾಕೋ ಸರಿ ಎನಿಸುತ್ತಿಲ್ಲ. ಈ ಮೊದಲು ಜಾಹ್ನವಿ ಜೊತೆ ಸೇರಿಕೊಂಡು ಅಶ್ವಿನಿ ಗೌಡ (Ashwini Gowda) ಅವರು ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡಿದ್ದರು. ಅದರಿಂದಾಗಿ ಅವರಿಗೆ ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದರು. ಆದರೂ ಕೂಡ ಅವರು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಈಗ ಜಾಹ್ನವಿ ಬದಲು ಅಶ್ವಿನಿ ಗೌಡ ಜೊತೆ ರಾಶಿಕಾ ಶೆಟ್ಟಿ ಸೇರಿಕೊಂಡಿದ್ದಾರೆ.
ಈ ವಾರದಲ್ಲಿ ರಘು ಕ್ಯಾಪ್ಟನ್ ಆಗಿದ್ದಾರೆ. ಅವರು ರಕ್ಷಿತಾ ಶೆಟ್ಟಿಗೆ ಅಡುಗೆ ಮನೆಯ ಜವಾಬ್ದಾರಿ ನೀಡಿದ್ದಾರೆ. ರಕ್ಷಿತಾ ಟೀಮ್ನಲ್ಲಿ ರಾಶಿಕಾ ಇದ್ದಾರೆ. ರಕ್ಷಿತಾ ಹೇಳಿದ ಕೆಲಸವನ್ನು ರಾಶಿಕಾ ಮಾಡಬೇಕಿತ್ತು. ಆದರೆ ಅಡುಗೆ ಮಾಡಲ್ಲ ಎಂದು ರಾಶಿಕಾ ನಾಟಕ ಮಾಡಿದ್ದಾರೆ. ‘ನನಗೆ ಕೈ ನೋವು. ಅಡುಗೆ ಮಾಡೋಕೆ ಕಷ್ಟ. ಬೇಕಿದ್ರೆ ಪಾತ್ರೆ ತೊಳೆಯುತ್ತೇನೆ’ ಎಂದು ಅವರು ಹೇಳಿದ್ದಾರೆ. ಈ ವಿಚಾರದಲ್ಲಿ ರಕ್ಷಿತಾ ಶೆಟ್ಟಿ ಮತ್ತು ರಾಶಿಕಾ ಶೆಟ್ಟಿ ನಡುವೆ ಕಿರಿಕ್ ಆಗಿದೆ.
ರಾಶಿಕಾ ಹೇಳಿದ್ದನ್ನೇ ಕ್ಯಾಪ್ಟನ್ ರುಘುಗೆ ರಕ್ಷಿತಾ ಶೆಟ್ಟಿ ತಿಳಿಸಿದ್ದಾರೆ. ಆಗ ರಾಶಿಕಾ ಅವರು ರಕ್ಷಿತಾ ಮೇಲೆ ಜಗಳಕ್ಕೆ ಬಂದರು. ‘ಅಡುಗೆ ಮಾಡಲ್ಲ ಅಂತ ನಾನು ಹೇಳಿಲ್ಲ. ಸರಿಯಾಗಿ ತಿಳಿಸಿ ಹೇಳು. ಎಲ್ಲದಕ್ಕೂ ನೀನು ಮಧ್ಯೆ ಬರಬೇಡ. ನಾನು ಮಾತನಾಡುವಾಗ ಅಡ್ಡ ಬರಬೇಡ. ನಿನ್ನ ಕೆಲಸ ನೀನು ನೋಡಿಕೋ’ ಎಂದು ರಾಶಿಕಾ ಶೆಟ್ಟಿ ಕೂಗಾಡಿದ್ದಾರೆ. ಇದೇ ಸಮಯವನ್ನು ನೋಡಿಕೊಂಡು ಅಶ್ವಿನಿ ಗೌಡ ಕೂಡ ಸೇರಿಕೊಂಡಿದ್ದಾರೆ.
ಈ ವಿಚಾರದಲ್ಲಿ ಅಶ್ವಿನಿ ಗೌಡ ಅವರು ಮೂಗು ತೂರಿಸುವ ಅವಶ್ಯಕತೆ ಇರಲೇ ಇಲ್ಲ. ಆದರೂ ಕೂಡ ಅವರು ಮಧ್ಯೆ ಬಂದು ರಕ್ಷಿತಾ ಶೆಟ್ಟಿಗೆ ಬೈಯ್ಯಲು ಆರಂಭಿಸಿದರು. ‘ತುಂಬಾ ಅತಿಯಾಗಿ ಆಡಬೇಡ. ನಿನ್ನೆಯಿಂದ ನೋಡುತ್ತಿದ್ದೇನೆ. ಎಲ್ಲದಕ್ಕೂ ಮಧ್ಯದಲ್ಲಿ ಬಂದ್ರೆ ಹುಷಾರ್. ಗೌರವ ಅನ್ನೋದು ಬರೀ ಮಧ್ಯೆ ಮಾತನಾಡೋದರಿಂದ ಸಿಗಲ್ಲ’ ಎಂದು ಅಶ್ವಿನಿ ಗೌಡ ಕಿರುಚಿದರು.
ಇದನ್ನೂ ಓದಿ: ಅಶ್ವಿನಿ ಗೌಡ ವಿರುದ್ಧ ಗೆದ್ದರೂ ಗಳಗಳನೆ ಅತ್ತ ಜಾಹ್ನವಿ: ವಿಚಿತ್ರ ವರ್ತನೆ ಎಂದ ಸ್ಪರ್ಧಿಗಳು
ಇಷ್ಟೇ ಸಾಲದು ಎಂಬಂತೆ ಅಶ್ವಿನಿ ಗೌಡ ಅವರು ಮತ್ತೆ ಪಿತೂರಿ ಮುಂದುವರಿಸಿದ್ದಾರೆ. ‘ಆಕೆ ಯಾವ ಹಂತಕ್ಕೆ ಬೇಕಾದರೂ ಹೋಗಿ ಮಾತನಾಡುತ್ತಾಳೆ’ ಎಂದು ರಕ್ಷಿತಾ ಶೆಟ್ಟಿ ವಿರುದ್ಧ ರಾಶಿಕಾ ಮತ್ತು ರಿಷಾ ಜೊತೆ ಸೇರಿ ಅಶ್ವಿನಿ ಗೌಡ ಪಿತೂರಿ ಮಾಡಿದ್ದಾರೆ. ಇವರೆಲ್ಲ ಮಾಡುತ್ತಿರುವುದು ತಪ್ಪು ಎಂಬುದು ಗಿಲ್ಲಿ, ರಘು ಮುಂತಾದ ಬಿಗ್ ಬಾಸ್ ಮನೆಯ ಸದಸ್ಯರಿಗೆ ಗೊತ್ತಾಗುತ್ತಿದೆ. ‘ರಕ್ಷಿತಾನ ಇವರು ಮನೆ ಕೆಲಸದವಳ ರೀತಿ ನಡೆಸಿಕೊಳ್ಳುತ್ತಿದ್ದಾರೆ. ಅವಳು ಎಲ್ಲ ಕೆಲಸವನ್ನೂ ಮಾಡುತ್ತಾಳೆ’ ಎಂದು ಅಭಿಷೇಕ್, ಚಂದ್ರಪ್ರಭ, ರಘು ಅವರು ಮಾತನಾಡಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




