
ಹಲವು ಅನಿರೀಕ್ಷಿತ ತಿರುವುಗಳಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಸಾಕ್ಷಿಯಾಗಲಿದೆ ಎಂದು ಮೊದಲೇ ಊಹಿಸಲಾಗಿತ್ತು. ಅದು ಬಿಗ್ ಬಾಸ್ ಮನೆ ಒಳಗಿನ ಆಟಕ್ಕೆ ಸಂಬಂಧಿಸಿದ ವಿಚಾರ. ಆದರೆ ಬಿಗ್ ಬಾಸ್ ಮನೆಯ ಹೊರಗೆ ಕೂಡ ಅಷ್ಟೇ ಅನಿರೀಕ್ಷಿತ ತಿರುವುಗಳು ಎದುರಾಗಿವೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದ ಕಾರಣ ಬಿಗ್ ಬಾಸ್ ಮನೆಯನ್ನು ಬಂದ್ ಮಾಡಲಾಗಿದೆ. ಬಂದ್ ಆಗುವುದಕ್ಕೂ ಮುನ್ನ ನಡೆದ ಆಟವನ್ನು ಸದ್ಯಕ್ಕೆ ಪ್ರಸಾರ ಮಾಡಲಾಗುತ್ತಿದೆ. ಬುಧವಾರದ (ಅಕ್ಟೋಬರ್ 8) ಸಂಚಿಕೆಯಲ್ಲಿ ಅಶ್ವಿನಿ ಗೌಡ (Ashwini Gowda) ಅವರು ತಮ್ಮ ಡೈಮಂಡ್ ರಿಂಗ್ ಕಳೆದುಹೋಗಿದೆ ಎಂದು ಹೇಳಿದ್ದಾರೆ.
ಜಂಟಿಗಳು ವರ್ಸಸ್ ಒಂಟಿಗಳು ಎಂಬ ಥೀಮ್ನಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ಆರಂಭ ಆಗಿತ್ತು. ಕಾಕ್ರೋಜ್ ಸುಧಿ ಅವರು ಅಸುರಾಧಿಪತಿಯಾಗಿ ವಿಶೇಷ ಅಧಿಕಾರ ಪಡೆದರು. ಆದರೆ ಅವರಿಗೆ ಒಂಟಿಗಳ ತಂಡದ ಅಶ್ವಿನಿ ಗೌಡ ಅವರಿಂದ ಬೆಂಬಲ ಸಿಗಲಿಲ್ಲ. ಅಶ್ವಿನಿ ಗೌಡ ಅವರಿಗೆ ಬುದ್ಧಿ ಕಲಿಸಲು ಕಾಕ್ರೋಜ್ ಸುಧಿ ನಿರ್ಧರಿಸಿದರು. ಹಾಗಾಗಿ ಮೇಕಪ್ ಮಾಡಿಕೊಳ್ಳದಂತೆ ನಿಯಮ ವಿಧಿಸಿದರು.
ಕಾಕ್ರೋಜ್ ಸುಧಿ ಅವರು ಮೇಕಪ್ ನಿಷೇಧಿಸಿದರೂ ಕೂಡ ಅಶ್ವಿನಿ ಗೌಡ, ಜಾಹ್ನವಿ ಮುಂತಾದವರು ಮೇಕಪ್ ಮಾಡಿಕೊಳ್ಳಲು ಪ್ರಯತ್ನಿಸಿದರು. ಹಾಗಾಗಿ ಅವರ ಮೇಕಪ್ ಕಿಟ್ ಕದಿಯಲು ಕಾಕ್ರೋಜ್ ಸುಧಿ ಹುನ್ನಾರ ಮಾಡಿದರು. ಧ್ರುವಂತ್ಗೆ ಹೇಳಿ ಮೇಕಪ್ ಕಿಟ್ ಮುಚ್ಚಿಡುವಂತೆ ಆದೇಶಿಸಿದರು. ಬಳಿಕ ಅಶ್ವಿನಿ ಗೌಡ ಅವರ ಮೇಕಪ್ ಕಿಟ್ ಕಾಣೆ ಆಯಿತು.
ಮೇಕಪ್ ಕಿಟ್ ವಿಚಾರಕ್ಕೆ ಕೈ ಹಾಕಿದ್ದಕ್ಕೆ ಅಶ್ವಿನಿ ಗೌಡ ಅವರಿಗೆ ಕೋಪ ಬಂತು. ತಮ್ಮ ಡೈಮಂಡ್ ರಿಂಗ್ ಕಾಣುತ್ತಿಲ್ಲ ಎಂದು ಅವರು ಆರೋಪಿಸಿದರು. ಅದಕ್ಕೆ ಕಾರಣ ಆದವರಿಗೆ ಗ್ರಹಚಾರ ಬಿಡಿಸುವುದಾಗಿ ಅಶ್ವಿನಿ ಗೌಡ ಅವರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ, ಮೇಕಪ್ ಕಿಟ್ಗೆ ಅದರದ್ದೇ ಆದ ಗೌರವ ಇದ್ದು, ಅದನ್ನು ಎಲ್ಲೆಲ್ಲೋ ಇಟ್ಟರೆ ತಾವು ಸುಮ್ಮನಿರುವುದಿಲ್ಲ ಎಂದು ಗರಂ ಆದರು.
ಇದನ್ನೂ ಓದಿ: ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಇದೆಲ್ಲವೂ ಬಿಗ್ ಬಾಸ್ ಮನೆ ಬಂದ್ ಆಗುವ ತನಕ ನಡೆದ ಘಟನೆಗಳು. ಆದರೆ ಮಂಗಳವಾರ (ಅ.7) ಬಿಗ್ ಬಾಸ್ ಮನೆಗೆ ಬೀಗ ಜಡಿಯಲಾಯಿತು. ಬಳಿಕ ಎಲ್ಲ ಸ್ಪರ್ಧಿಗಳನ್ನು ರೆಸಾರ್ಟ್ಗೆ ಶಿಫ್ಟ್ ಮಾಡಲಾಯಿತು. ಕಾನೂನಿನ ತೊಡಕು ಪರಿಹಾರ ಆದ ಬಳಿಕ ಮತ್ತೆ ಬಿಗ್ ಬಾಸ್ ಶೋ ಆರಂಭ ಆಗಲಿದೆ. ಆಗ ಬಿಗ್ ಬಾಸ್ ಆಟವನ್ನು ಹೊಸದಾಗಿ ಆರಂಭಿಸುತ್ತಾರಾ ಅಥವಾ ಎಲ್ಲಿ ನಿಂತಿತ್ತೋ ಅಲ್ಲಿಂದಲೇ ಆರಂಭಿಸುತ್ತಾರಾ ಎಂಬ ಕೌತುಕ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.