ಹನುಮಂತ, ಭವ್ಯಾ ಗೌಡ, ತ್ರಿವಿಕ್ರಮ್​ಗೆ ಬಿಗ್ ಬಾಸ್ ಟ್ರೋಫಿ ಯಾಕೆ ಮುಖ್ಯ?

|

Updated on: Jan 21, 2025 | 10:52 PM

ಒಬ್ಬೊಬ್ಬರು ಒಂದೊಂದು ಕನಸು ಇಟ್ಟುಕೊಂಡು ಬಿಗ್ ಬಾಸ್ ಮನೆಗೆ ಬಂದಿದ್ದರು. ಎಲ್ಲರಿಗೂ ಫಿನಾಲೆ ತಲುಪಲು ಸಾಧ್ಯವಾಗಲಿಲ್ಲ. ನೂರಾರು ದಿನಗಳ ಕಾಲ ಗುದ್ದಾಡಿ ಆಟ ಆಡಿದವರಿಗೆ ಮಾತ್ರ ಫಿನಾಲೆಯ ವಾರವನ್ನು ತಲುಪುವ ಅವಕಾಶ ಸಿಕ್ಕಿತು. ಟ್ರೋಫಿ ಎದುರು ಕುಳಿತುಕೊಂಡು ತಮಗೆ ಈ ಗೆಲುವು ಯಾಕೆ ಮುಖ್ಯ ಎಂಬುದನ್ನು ಸ್ಪರ್ಧಿಗಳು ಹೇಳಿಕೊಂಡಿದ್ದಾರೆ.

ಹನುಮಂತ, ಭವ್ಯಾ ಗೌಡ, ತ್ರಿವಿಕ್ರಮ್​ಗೆ ಬಿಗ್ ಬಾಸ್ ಟ್ರೋಫಿ ಯಾಕೆ ಮುಖ್ಯ?
Bhavya Gowda, Hanumantha, Trivikram
Follow us on

ಭವ್ಯಾ ಗೌಡ ಅವರು ಅನೇಕ ಏಳು-ಬೀಳುಗಳನ್ನು ಅನುಭವಿಸಿ ಬಿಗ್ ಬಾಸ್ ಫಿನಾಲೆಗೆ ಬಂದಿದ್ದಾರೆ. ತಮಗೆ ಈ ಶೋ ಗೆಲ್ಲುವುದು ಬಹಳ ಮುಖ್ಯ ಎಂದು ಅವರು ಹೇಳಿದ್ದಾರೆ. ಕಿರುತೆರೆಯಲ್ಲಿ ಭವ್ಯಾ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಹಾಗಿದ್ರೂ ಕೂಡ ಅವರಿಗೆ ಆರ್ಥಿಕವಾಗಿ ಗಟ್ಟಿಯಾಗಿ ನಿಲ್ಲುವ ಇನ್ನೂ ಸಾಧ್ಯವಾಗಿಲ್ಲ. ಜೀವನ ಕಟ್ಟಿಕೊಳ್ಳಲು ಹಣದ ಅವಶ್ಯಕತೆ ಇದೆ. ಈ ವಿಷಯವನ್ನು ಅವರು ಬಿಗ್ ಬಾಸ್ ಟ್ರೋಫಿಯ ಎದುರು ವಿವರಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಹತ್ತಿರದಿಂದ ಟ್ರೋಫಿಯನ್ನು ನೋಡುವ ಅವಕಾಶ ಕಲ್ಪಿಸಲಾಗಿತ್ತು. ಆಗ ಎಲ್ಲ ಫೈನಲಿಸ್ಟ್​ಗಳು ಮನಸ್ಸಿನ ಮಾತು ಹಂಚಿಕೊಂಡರು.

‘ಜೀವನಲ್ಲಿ ತುಂಬ ಆಸೆ ಕೈ ತಪ್ಪಿ ಹೋಗಿತ್ತು. ಈ ಶೋನಿಂದ ನನಗೆ ಆರ್ಥಿಕವಾಗಿ ಸಹಾಯ ಆಗುತ್ತದೆ ಎಂಬ ಆಲೋಚನೆಯಲ್ಲೇ ನಾನು ಬಂದಿದ್ದು. ವಯಸ್ಸಿಗೂ ಮೀರಿ ಜವಾಬ್ದಾರಿ ನಿಭಾಯಿಸಿದ್ದೀನಿ. ದೊಡ್ಡವರಿಗೆ ಪೈಪೋಟಿ ನೀಡಿ ಫಿನಾಲೆಗೆ ಬಂದಿದ್ದೇನೆ. ಅಪ್ಪ, ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇಷ್ಟು ವರ್ಷ ಅವರು ನಮಗಾಗಿ ದುಡಿದಿದ್ದಾರೆ. ನಾನು ದುಡಿದು ಅವರನ್ನು ಮನೆಯಲ್ಲಿ ಆರಾಮಾಗಿ ಇರುವಂತೆ ನೋಡಿಕೊಳ್ಳಬೇಕು’ ಎಂದು ಭವ್ಯಾ ಗೌಡ ಹೇಳಿದರು.

‘ಟ್ರೋಫಿ ಜೊತೆ ಬರುವ ದುಡ್ಡಿನಿಂದ ನನಗೆ ಉಪಯೋಗ ಇದೆ. ನನಗೆ ಓದೋಕೆ ಆಗಲಲ್ಲಿ. ತಂಗಿನಾದರೂ ಓದಿಸಬೇಕು. ಅಕ್ಕನ ಮದುವೆ ಮಾಡಬೇಕು. ಮದುವೆಯಿಂದ ಸಾಲ ಆಗೋದು ಬೇಡ ಅಂತ ಅಕ್ಕ ಹೇಳಿದ್ದರು. ಅಪ್ಪನ ಧ್ವನಿ ಪೆಟ್ಟಿಗೆಗೆ ಪೆಟ್ಟು ಆಗಿತ್ತು. ಆಗ ನನ್ನ ಬಳಿ ಹಣ ಇರಲಿಲ್ಲ. ಅಪ್ಪ ಚೆನ್ನಾಗಿ ಹಾಡುತ್ತಿದ್ದರು. ಪೆಟ್ಟಾದ ಬಳಿಕ ಅವರ ವಾಯ್ಸ್ ಸರಿ ಮಾಡಿಸೋಕೆ ಆಗಲಿಲ್ಲ ಅಂತ ನೋವಾಯಿತು. ಆವತ್ತು ನನ್ನ ಬಳಿ ದುಡ್ಡ ಇದ್ದಿದ್ದರೆ ಅಪ್ಪನಿಗೆ ಚಿಕಿತ್ಸೆ ಕೊಡಿಸಬಹುದಿತ್ತು. ಈ ಶೋನಿಂದ ಏನೇ ಬಂದರೂ ಕುಟುಂಬವನ್ನು ಇನ್ನೂ ಮುಂದಕ್ಕೆ ತೆಗೆದುಕೊಂಡು ಹೋಗಬಹುದು’ ಎಂದು ಭವ್ಯಾ ಗೌಡ ಅವರು ಮನಸ್ಸಿನ ಮಾತು ತೆರೆದಿಟ್ಟರು.

ಹನುಮಂತ ಅವರು ಟ್ರೋಫಿ ಮೇಲೆ ಹೆಚ್ಚು ಏನನ್ನೂ ಮಾತನಾಡಲಿಲ್ಲ. ಸ್ವಾರ್ಥದ ಬೇಡಿಕೆಯನ್ನೂ ಇಡಲಿಲ್ಲ. ‘ನಿನ್ನ ಆಶೀರ್ವಾದ ಇರಲಿ ತಾಯಿ. ನನಗೆ ಕಪ್​ ನೋಡಿ ಮಾತು ಬರುತ್ತಿಲ್ಲ. ಎಲ್ಲರೂ ಮನೆಯಲ್ಲಿ ಚೆನ್ನಾಗಿ ಆಟ ಆಡಿದ್ದಾರೆ. ಯಾರಿಗೆ ಸೇರಬೇಕೋ ಅವರಿಗೆ ಕಪ್ ಸೇರಲಿ’ ಎಂದು ಅವರು ಹೇಳಿದರು.

ಇದನ್ನೂ ಓದಿ: ‘ಬಿಗ್ ಬಾಸ್ 11’ ಟ್ರೋಫಿ ಎದುರು ಕಣ್ಣೀರು ಹಾಕಿದ ಮಂಜು; ಬೇಡಿಕೊಂಡ ಮೋಕ್ಷಿತಾ

ತ್ರಿವಿಕ್ರಮ್ ಅವರು ಟ್ರೋಫಿ ಮುಂದೆ ಕುಳಿತು ಮಾತನಾಡಿದರು. ‘ನಾಟಕದಿಂದ ನಿನ್ನನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ತಂದೆ ಲಾರಿ ಡ್ರೈವರ್ ಆಗಿದ್ದರು. ಡ್ರೈವರ್ ಜೀವ ಚಕ್ರದಲ್ಲಿ ಇರುತ್ತದೆ ಎನ್ನುತ್ತಾರೆ. ಅದರಲ್ಲೇ ತಂದೆಯ ಕೊನೆಯುಸಿರು ಎಳೆದರು. ನಾವು ರಾತ್ರೋ ರಾತ್ರಿ ಮೈಸೂರಿಗೆ ಹೋದೆವು. ಆ ಊರಿನ ಋಣ ತೀರಿಸಬೇಕು. ತುಂಬ ಆಸೆ ಹೊತ್ತುಕೊಂಡು ಬೆಂಗಳೂರಿಗೆ ಬಂದೆ. ಅನೇಕ ಸಲ ಸೋತು ಇಲ್ಲಿಗೆ ಬಂದಿದ್ದೇನೆ. ಕೊನೇ ವಾರದ ತನಕ ಬಂದಿದ್ದೇನೆ. ಯಾವುದೇ ಆಟಕ್ಕೂ ನಾನು ಹಿಂಜರಿದಿಲ್ಲ. ಯೋಗ್ಯತೆ ಇರುವವರಿಗೆ ಮಾತ್ರ ಟ್ರೋಫಿ ಹೋಗೋದು. ಡ್ರೈವರ್ ಮಕ್ಕಳನ್ನು ಎಲ್ಲರೂ ಚಿಕ್ಕದಾಗಿ ನೋಡಿದ್ದರು. ನಾನು ಸ್ಟಾರ್​ ಆಗಿ ಬೆಳೆಯಬೇಕು’ ಎಂದು ತ್ರಿವಿಕ್ರಮ್ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.