
ಕಳೆದ ಸೀಸನ್ನಲ್ಲಿ ಹನುಮಂತ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಇಡೀ ಶೋ ದಿಕ್ಕನ್ನು ಬದಲಿಸಿದ್ದರು. ಹಲವು ತಿಂಗಳ ಕಾಲ ಅವರು ಭರ್ಜರಿ ಮನರಂಜನೆ ನೀಡಿದ್ದರು. ಯಾರೇ ನಾಮಿನೇಷನ್ ಮಾಡಿದರೂ ಅವರು ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆ ಬಳಿಕ ಕೋಟಿ ಮತಗಳ ಅಂತರದಲ್ಲಿ ಅವರು ಗೆಲುವು ಕಂಡರು. ಈ ಸೀಸನ್ ಅಲ್ಲಿ ಗಿಲ್ಲಿ ಕೂಡ ರೇಸ್ನಲ್ಲಿ ಮುಂದಿದ್ದಾರೆ. ಆದರೆ, ಹನುಮಂತನ 10 ಪರ್ಸೆಂಟ್ ಕೂಡ ಗಿಲ್ಲಿ ಇಲ್ಲ ಎಂದು ಬಿಗ್ ಬಾಸ್ (Bigg Boss) ಮನೆಗೆ ಬಂದ ಅತಿಥಿಗಳು ಹೇಳಿಕೆ ನೀಡಿದ್ದಾರೆ.
ಬಿಗ್ ಬಾಸ್ ಈಗ ಬಿಬಿ ಪ್ಯಾಲೇಸ್ ಆಗಿ ಬದಲಾಗಿದೆ. ಉಗ್ರಂ ಮಂಜು ಅವರು ಬ್ಯಾಚುಲರ್ ಪಾರ್ಟಿ ಮಾಡೋದಕ್ಕೆ ಆಗಮಿಸಿದ್ದಾರೆ. ಅವರ ಜೊತೆ ಮೋಕ್ಷಿತಾ ಪೈ, ರಜತ್, ಚೈತ್ರಾ ಕುಂದಾಪುರ, ತ್ರಿವಿಕ್ರಮ್ ಕೂಡ ಜೊತೆಗಿದ್ದಾರೆ. ಅವರು ಸಖತ್ ಮನರಂಜನೆ ನೀಡುತ್ತಿದ್ದಾರೆ. ಈ ವೇಳೆ ಗಿಲ್ಲಿಯನ್ನು ಅವರು ಹನುಮಂತನ ಜೊತೆ ಹೋಲಿಕೆ ಮಾಡಿ ನೋಡಿದ್ದಾರೆ.
ಅತಿಥಿಗಳ ಆತಿಥ್ಯವನ್ನು ಒಳ್ಳೆಯ ರೀತಿಯಲ್ಲಿ ಮಾಡಬೇಕು ಎಂಬುದು ಬಿಗ್ ಬಾಸ್ ಆದೇಶ ಆಗಿತ್ತು. ಆದರೆ, ಇದನ್ನು ಗಿಲ್ಲಿ ಅವರು ಗಂಭೀರವಾಗಿ ಸ್ವೀಕರಿಸಿಲ್ಲ. ಅತಿಥಿಗಳ ಕಾಲೆಳೆಯುವ ಪ್ರಯತ್ನವನ್ನು ಗಿಲ್ಲಿ ಮಾಡಿದ್ದಾರೆ. ಇದು ಅತಿಥಿಗಳ ಕೋಪಕ್ಕೆ ಕಾರಣ ಆಗಿದೆ. ರಜತ್ ಹಾಗೂ ಮಂಜು ಕರೆದು ಅನೇಕ ಬಾರಿ ವಾರ್ನ್ ಮಾಡಿದ್ದಾರೆ. ಆದರೆ, ಈ ವಾರ್ನಿಂಗ್ಗೆ ಎಲ್ಲ ಗಿಲ್ಲಿ ಜಗ್ಗುವವರೇ ಅಲ್ಲ. ಅವರು ತಮ್ಮ ಕೀಟಲೆ ಮುಂದುವರಿಸಿದ್ದಾರೆ. ಎಲ್ಲ ಸಂದರ್ಭದಲ್ಲೂ ಹಾಸ್ಯ ಮನಸ್ಥಿತಿಯಲ್ಲೇ ನಡೆದುಕೊಂಡಿದ್ದಾರೆ.
ಇದನ್ನೂ ಓದಿ: ಅತಿಥಿಗಳಿಗೆ ಅವಮಾನ, ಗಿಲ್ಲಿಗೆ ಎಚ್ಚರಿಕೆ ನೀಡಿದ ಉಗ್ರಂ ಮಂಜು, ರಜತ್
ಈ ವಿಚಾರದ ಬಗ್ಗೆ ರಜತ್, ತ್ರಿವಿಕ್ರಂ ಮಂಜು ಮೊದಲಾದವರು ಚರ್ಚೆ ಮಾಡಿದ್ದಾರೆ. ‘ಇವನು ನಮ್ಮವನ (ಹನುಮಂತ) ರೀತಿಯೇ. ನಮ್ಮವನು ಶಾಂತವಾಗಿ ಇರ್ತಿದ್ದ. ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತ್ರ ಮಾತನಾಡುತ್ತಿದ್ದ. ಇವನು ಬಾಯಿಗೆ ಬಂದಂತೆಲ್ಲ ಮಾತನಾಡುತ್ತಿದ್ದಾನೆ’ ಎಂದು ರಜತ್ ಹೇಳಿದರು. ‘ಅವನ 10 ಪರ್ಸೆಂಟ್ ಕೂಡ ಇವನಿಲ್ಲ ಬಿಡಿ’ ಎಂದು ತ್ರಿವಿಕ್ರಂ ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:58 am, Wed, 26 November 25