
ಬಿಗ್ ಬಾಸ್ (Bigg Boss) ಮನೆಯಲ್ಲಿ ಯಾರಿಗಾದರೂ ಕೇಡು ಬಯಸಿದರೆ ಅದು ದೊಡ್ಡ ಕಿತ್ತಾಟಕ್ಕೆ ಕಾರಣ ಆಗುತ್ತದೆ. ರಘು ಅವರಿಗೆ ಈ ವಾರ ಹಾಗೆಯೇ ಆಯಿತು. ಚೆನ್ನಾಗಿ ಆಡುತ್ತಿದ್ದ ರಘು ಅವರು, ರಕ್ಷಿತಾ ಕಾರಣಕ್ಕೆ ನಾಮಿನೇಷನ್ ಸ್ಥಾನಕ್ಕೆ ಹೋಗಿ ಕೂರಬೇಕಾಯಿತು. ಆ ಬಳಿಕ ಮಾಳು ಅವರು ರಘು ಅವರನ್ನು ನೇರವಾಗಿ ನಾಮಿನೇಟ್ ಮಾಡಿದರು. ಈ ಎಲ್ಲಾ ವಿಚಾರಕ್ಕೆ ರಘು ಅಪ್ಸೆಟ್ ಆಗಿದ್ದರು. ಆದರೆ, ಅವರು ಎಲ್ಲರಂತೆ ಜಗಳ ಮಾಡಲಿಲ್ಲ. ಈಗ ಅವರು ತನ್ನತ್ತ ಬಂದ ಕಲ್ಲುಗಳಲ್ಲೇ ಮನೆ ಕಟ್ಟಿಕೊಂಡಿದ್ದಾರೆ.
ರಘು ಅವರ ಬಿಗ್ ಬಾಸ್ ಮನೆಯ ಆಟ ಗಮನ ಸೆಳೆಯುತ್ತಿದೆ. ಮೂರನೇ ವಾರದ ಬಳಿಕ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಅವರು ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆದರು. ಆ ಬಳಿಕ ಮುಂದಿನ ವಾರಕ್ಕೆ ಮತ್ತೆ ಕ್ಯಾಪ್ಟನ್ ಆಗುವ ಅರ್ಹತೆ ಪಡೆದರು. ಆ ವಾರ ವೋಟಿಂಗ್ ಮೂಲಕ ಕ್ಯಾಪ್ಟನ್ ಆಯ್ಕೆ ಮಾಡಲಾಯಿತು. ಆ ವಾರವೂ ಟಾಸ್ಕ್ ಮೂಲಕ ಕ್ಯಾಪ್ಟನ್ನ ಆಯ್ಕೆ ಮಾಡೋ ಅವಕಾಶ ಇದ್ದಿದ್ದರೆ ರಘು ಅವರೇ ಮತ್ತೆ ಕ್ಯಾಪ್ಟನ್ ಆಗುತ್ತಿದ್ದರೇನೋ. ಆ ವಾರ ಧನುಷ್ ಅವರಿಗೆ ಹೆಚ್ಚು ವೋಟ್ ಬಿದ್ದು ಕ್ಯಾಪ್ಟನ್ ಆದರು.
ಈ ವಾರ ರಘು ಅವರು ನಾಮಿನೇಟ್ ಆಗದೇ ಇರುವ ತಂಡದಲ್ಲಿ ಇದ್ದರು. ಈ ವೇಳೆ ಟಾಸ್ಕ್ ಗೆದ್ದ ತಂಡದವರು ಎದುರಾಳಿ ತಂಡದಿಂದ ಒಬ್ಬರನ್ನು ನಾಮಿನೇಟ್ ಮಾಡಿ, ನಾಮಿನೇಟ್ ತಂಡಕ್ಕೆ ಕಳುಹಿಸಬೇಕಿತ್ತು. ಆಗ ರಕ್ಷಿತಾ ಶೆಟ್ಟಿ ಅವರು ಹಠ ಹಿಡಿದು ರಘು ಅವರನ್ನು ನಾಮಿನೇಟ್ ಮಾಡಿದರು. ಈ ವಿಚಾರ ಅವರಿಗ ಬೇಸರ ಮೂಡಿಸಿತ್ತು. ನಂತರ ಮಾಳು ಅವರು ರಘು ಅವರನ್ನು ನೇರವಾಗಿ ನಾಮಿನೇಟ್ ಮಾಡಿ ಮತ್ತೊಂದು ಶಾಕ್ ಕೊಟ್ಟರು.
ಇದನ್ನೂ ಓದಿ: ಕಿಚ್ಚನ ಚಪ್ಪಾಳೆಯಲ್ಲೇ ಸ್ಟ್ರಕ್ ಆಗಿದ್ದಾರೆ ಗಿಲ್ಲಿ; ಅಸಲಿ ಆಟ ಎಲ್ಲಿ?
‘ರಕ್ಷಿತಾ ನನ್ನ ಹೆಸರನ್ನು ಏಕೆ ತೆಗೆದುಕೊಂಡರು ಎಂಬುದೇ ನನಗೆ ಗೊತ್ತಿಲ್ಲ. ನಂತರ ಮಾಳು ಕೂಡ ನನ್ನ ನಾಮಿನೇಟ್ ಮಾಡಿದರು. ಏನಾಗ್ತಿದೆ ಎಂಬುದೇ ತಿಳಿಯುತ್ತಿಲ್ಲ’ ಎಂದು ರಘು ಹೇಳಿದ್ದರು. ಈಗ ಇದುವೇ ವರದಾನ ಆಗಿದೆ. ನಾಮಿನೇಟ್ ಆದ ತಂಡ ಹೆಚ್ಚು ಟಾಸ್ಕ್ ಗೆದ್ದಿದ್ದರಿಂದ ಅವರು ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆ ಆದರು. ಈಗ ರಘು ಅವರು ಇದರಲ್ಲಿ ಗೆದ್ದು ಕ್ಯಾಪ್ಟನ್ ಆಗಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಕಿಚ್ಚನಿಂದ ರಘುಗೆ ಮತ್ತೆ ಚಪ್ಪಾಳೆ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.