
ಗಂಡಸು ಹೊರಗೆ ದುಡಿಯಬೇಕು, ಹೆಂಡತಿ ಆದವಳು ಮನೆಗೆಲಸ ಮಾಡಬೇಕು ಎಂಬ ಸಂಪ್ರದಾಯ ಸತ್ತು ದಶಕಗಳೇ ಆಗಿವೆ. ಪಾತ್ರೆ, ಬಟ್ಟೆ ತೊಳೆಯುವುದು, ಕಸ ಗುಡಿಸುವುದು ಇಂಥಹಾ ಕೆಲಗಳ ಮಾಡುವುದು ಹೆಂಗಸಿನ ಕೆಲಸ, ಗಂಡಸಾದವನು ಇಂಥಹಾ ಕೆಲಸ ಮಾಡಿದರೆ ಅವನ ಘನತೆಗೆ ಕುತ್ತು ಎಂಬ ಭಾವ ಪೂರ್ವಜರ ಕಾಲದಲ್ಲಿತ್ತು. ಕಳೆದ ಐವತ್ತು ವರ್ಷಗಳಲ್ಲಿ ಇಂಥಹಾ ನೀಚ ಆಲೋಚನೆಗಳು ಮರೆಯಾಗುತ್ತಾ ಬಂದಿವೆ. ಆದರೆ ಅವು ಇನ್ನೂ ಪೂರ್ಣವಾಗಿ ಮರೆಯಾಗಿಲ್ಲ ಎಂಬುದಕ್ಕೆ ಬಿಗ್ಬಾಸ್ನ ಭಾನುವಾರದ ಎಪಿಸೋಡ್ನಲ್ಲಿ ಜೀವಂತ ಸಾಕ್ಷಿ ದೊರಕಿತು.
ಬಿಗ್ಬಾಸ್ನಲ್ಲಿ ಮಹಿಳೆ-ಪುರುಷ ಎಂಬ ಭೇದ ಭಾವ ಇಲ್ಲ. ಅದರಲ್ಲೂ ಮನೆ ಕೆಲಸದ ವಿಷಯದಲ್ಲಿ ಎಲ್ಲರೂ ಸಮಾನರು. ಅಡುಗೆ ಮನೆ ಕೆಲಸ, ಸ್ವಚ್ಛತೆ ಕೆಲಸಗಳನ್ನು ಪುರುಷ-ಮಹಿಳೆ ಭೇದವಿಲ್ಲದೆ ಮಾಡಲೇ ಬೇಕು. ಆದರೆ ಈ ಬಾರಿ ಸ್ಪರ್ಧಿಯಾಗಿ ಬಂದಿರುವ ಗಾಯಕ ಮಾಳು ನಿಪನಾಳ ಅವರು ‘ಮನೆಗೆಲಸ ಮಾಡುವ ಗಂಡಸು ಹೆಂಡತಿ ಗುಲಾಮ’ ಎಂದು ಯಾವುದೋ ಸಂದರ್ಭದಲ್ಲಿ ಸಹ ಸ್ಪರ್ಧಿಯ ಜೊತೆಗೆ ಹೇಳಿದ್ದರು. ಆ ಮೂಲಕ ಮನೆ ಗೆಲಸ ಮಾಡುವುದು ನಿಕೃಷ್ಟದ ಕಾರ್ಯ, ಅದು ಮಹಿಳೆಯರಿಗೆ ಮಾತ್ರವೇ ಮೀಸಲು ಎಂಬರ್ಥದ ಧೋರಣೆ ಪ್ರಕಟಿಸಿದ್ದರು.
ಇಂದಿನ ಎಪಿಸೋಡ್ನಲ್ಲಿ ಸುದೀಪ್ ಅವರು ಈ ವಿಷಯವನ್ನು ಚರ್ಚೆಗೆ ಎತ್ತಿಕೊಂಡರು. ಆಗ ಮಾಳು ನಿಪನಾಳ ಅವರು ನಮ್ಮ ಕಡೆ ಅದು ‘ಸಂಪ್ರದಾಯ’ ಎಂದು ತಮ್ಮ ಹೇಳಿಕೆಯನ್ನು ಡಿಫೆಂಡ್ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ಯಾವುದೇ ಕುಕೃತ್ಯಕ್ಕೆ ‘ಸಂಪ್ರದಾಯ’ದ ಪಟ್ಟಿ ಹಚ್ಚಿಬಿಟ್ಟರೆ ಅದು ಪ್ರಶ್ನಾತೀತ ಆಗಿಬಿಡುತ್ತದೆ ಎಂಬುದು ಅವರ ಭಾವನೆ ಆಗಿತ್ತು ಎಂದು ತೋರುತ್ತದೆ. ಅಲ್ಲೇ ಇದ್ದ ಸಹಸ್ಪರ್ಧಿ ಮಲ್ಲವ್ವ ಸಹ ಇದನ್ನೇ ಹೇಳಿದರು. ನಮ್ಮಲ್ಲಿ ವರ್ಷಗಳಿಂದಲೂ ಇದೇ ನಡೆದು ಬಂದಿದೆ ಎಂದರು.
ಇದನ್ನೂ ಓದಿ:ಬಿಗ್ಬಾಸ್ ಕನ್ನಡ 12ರ ಮೊದಲ ಎಲಿಮಿನೇಷನ್ ಒಟ್ಟಿಗೆ ಇಬ್ಬರು ಹೊರಕ್ಕೆ
ಆದರೆ ಸುದೀಪ್ ಇಬ್ಬರ ಮಾತನ್ನು ನಯವಾಗಿಯೇ ಖಂಡಿಸಿ, ಬದಲಾವಣೆ ಆಗಿಲ್ಲ ಎಂದೇ ಅಂದುಕೊಳ್ಳೋಣ, ನಿಮ್ಮಲ್ಲಿ ಅದು ‘ಸಂಪ್ರದಾಯ’ವೇ ಎಂದುಕೊಳ್ಳೋಣ, ಆದರೆ ಕೆಟ್ಟ ಸಂಪ್ರದಾಯವೊಂದನ್ನು ಬದಲಾಯಿಸುವುದು ನಿಮ್ಮ ಕರ್ತವ್ಯ ಅಲ್ಲವೇ? ಎಂದು ಪ್ರಶ್ನೆ ಮಾಡಿದರು. ನೀವು ಹಾಡುಗಳನ್ನು ಮಾಡುತ್ತೀರಿ, ಯೂಟ್ಯೂಬ್ ಮೂಲಕ ಕೋಟ್ಯಂತರ ಜನರಿಗೆ ತಲುಪಿಸುತ್ತೀರಿ, ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದೀರಿ, ಸಾಕಷ್ಟು ಮುಂದುವರೆದಿದ್ದೀರಿ, ಆದರೆ ಇನ್ನೂ ಆ ಹಳೆಯ ಆಲೋಚನೆಯಲ್ಲಿಯೇ ಬದುಕುತ್ತಿದ್ದೀರಿ ಎಂದರೆ ನಿಮಗೆ ಆ ಆಲೋಚನೆ ಪ್ರಿಯವಾಗಿದೆ, ನಿಮಗೆ ಆ ಸಂಪ್ರದಾಯ ಬೇಕಾಗಿದೆ. ನಿಮ್ಮ ಸುಖಕ್ಕಾಗಿ ಆ ಸಂಪ್ರದಾಯವನ್ನು ಜೀವಂತ ಇಟ್ಟಿದ್ದೀರೆಂದು ಅರ್ಥವೆಂದು ಮಾತಿನ ಛಾಟಿ ಬೀಸಿದರು ಸುದೀಪ್.
ನೀವು ಅಷ್ಟೋಂದು ಸಂಪ್ರದಾಯವಾದಿ, ಆಧುನಿಕತೆಯ ವಿರೋಧಿ ಎನ್ನುವುದೇ ನಿಜವಾಗಿದ್ದರೆ ನೀವು ನಿಮ್ಮ ಹಳ್ಳಿಗೆ ವಿದ್ಯುತ್ ಬಂದಿದ್ದನ್ನೂ ವಿರೋಧಿಸಬೇಕಿತ್ತು, ನಿಮ್ಮ ಊರಿಗೆ ಬಸ್ಸು ಬಂದಿದ್ದನ್ನೂ ವಿರೋಧಿಸಬೇಕಿತ್ತು. ಹಳ್ಳಿಯ ಜನ ಪೇಟೆಗೆ ಬರುವುದನ್ನೂ ವಿರೋಧಿಸಬೇಕಿತ್ತು. ನಿಮಗೆ ಅನುಕೂಲವಾಗುವ ಎಲ್ಲ ಬದಲಾವಣೆ ಬೇಕು, ಆದರೆ ಮಹಿಳೆಗೆ ಅನುಕೂಲವಾಗುವ ಬದಲಾವಣೆ ಬೇಡ ಅಥವಾ ನಿಮ್ಮ ಅಹಂಗೆ ತೊಂದರೆ ಆಗುವ ಬದಲಾವಣೆ ಬೇಡ ಅಲ್ಲವೇ? ತಾಯಿಯೂ ಒಂದು ಹೆಣ್ಣು, ಆಕೆಗೆ ಸಹಾಯ ಮಾಡಿದವನು ನಿಮ್ಮ ಪ್ರಕಾರ ಮಗನೇ ಅಲ್ಲ ಅಲ್ಲವೇ? ಎಂದು ಪ್ರಶ್ನಿಸಿದರು. ಬಳಿಕ ‘ಬದಲಾವಣೆ ಎಂಬುದು ಹೊಸ ಪೀಳಿಗೆಯಿಂದಲೇ ಆಗಬೇಕು. ನಿಮ್ಮ ಪೀಳಿಗೆಯವರು ಬದಲಾವಣೆ ತನ್ನಿ. ಆಗುತ್ತಿರುವ ತಪ್ಪನ್ನು ಬದಲಾಯಿಸಿ’ ಎಂದು ಹಿರಿಯಣ್ಣನಂತೆ ಸಲಹೆ ನೀಡಿದರು. ಸುದೀಪ್ ಅವರ ಮಾತಿಗೆ ಹೌದೆಂದು ತಲೆ ಆಡಿಸಿದರು ಮಾಳು, ಮನೆ ಮಂದಿ ಚಪ್ಪಾಳೆ ತಟ್ಟಿ ಸುದೀಪ್ ಅವರ ಅಭಿಪ್ರಾಯವನ್ನು ಸ್ವಾಗತಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ