ಲಾಯರ್ ಜಗದೀಶ್ ಅನ್ನು ಬಿಗ್ಬಾಸ್ ಮನೆಯಿಂದ ಹೊರಗೆ ಹಾಕಲಾಗಿದೆ. ಜಗದೀಶ್ ಮೇಲೆ ಕೈ ಮಾಡಿದರೆಂದು ರಂಜಿತ್ ಅನ್ನು ಸಹ ಬಿಗ್ಬಾಸ್ ಮನೆಯಿಂದ ಹೊರಗೆ ಹಾಕಲಾಗಿದೆ. ಜಗದೀಶ್ ಸ್ಪರ್ಧಿಗಳ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದಾರೆ. ಮಹಿಳೆಯರ ಬಗ್ಗೆ ಅಗೌರವವಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಜಗದೀಶ್ ಅನ್ನು ಹೊರಗೆ ಹಾಕಲಾಗಿದೆ. ಇನ್ನು ಜಗಳ ನಡೆಯುವಾಗ ಜಗದೀಶ್ ಅನ್ನು ರಂಜಿತ್ ದೂಡಿದರು, ಇದು ಬಿಗ್ಬಾಸ್ ನಿಯಮಕ್ಕೆ ವಿರುದ್ಧವಾದ ಕಾರಣಕ್ಕೆ ರಂಜಿತ್ ಅನ್ನು ಸಹ ಬಿಗ್ಬಾಸ್ನಿಂದ ಎಲಿಮಿನೇಟ್ ಮಾಡಲಾಗಿದೆ.
ನಿನ್ನೆಯ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್, ಲಾಯರ್ ಜಗದೀಶ್ ಪರವಾಗಿ ಮಾತನಾಡಿದ್ದರು. ಲಾಯರ್ ಜಗದೀಶ್ ಅನ್ನು ಇತರೆ ಸ್ಪರ್ಧಿಗಳು ಪ್ರವೋಕ್ ಮಾಡಿದ್ದರಿಂದಲೇ ಆ ವ್ಯಕ್ತಿ ರೆಬೆಲ್ ಆದರು. ಜಗದೀಶ್ ಪ್ರವೋಕ್ ಆಗಲು ಸ್ಪರ್ಧಿಗಳೇ ಕಾರಣ ಎಂಬಂತೆ ಮಾತನಾಡಿದರು. ಜಗದೀಶ್ ಪರವಾಗಿ ನಿಲ್ಲದೇ ಇರುವುದಕ್ಕೆ ಕೆಲ ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಂಡರು. ಸುದೀಪ್ರ ನಿನ್ನೆಯ ಎಪಿಸೋಡ್ ನೋಡಿದವರಿಗೆ ಜಗದೀಶ್ ಮಾಡಿದ್ದು ಸರಿ ಎಂಬ ಅಭಿಪ್ರಾಯ ಮೂಡಿದರೂ ಅನುಮಾನವಿಲ್ಲ.
ಆದರೆ ಜಗದೀಶ್ ಜೊತೆಗೆ ಮನೆಯಿಂದ ಹೊರಗೆ ಬಂದ ರಂಜಿತ್, ಬಿಗ್ಬಾಸ್ ಮನೆಯಲ್ಲಿ ಜಗದೀಶ್ ಮಾಡಿದ ಕುಕೃತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ‘ಜಗದೀಶ್ ಮಾಡಿದ ಕೆಲಸಗಳನ್ನು ಟಿವಿಯಲ್ಲಿ ತೋರಿಸಲು, ಪ್ರಸಾರ ಮಾಡಲು ಸಾಧ್ಯವೇ ಇಲ್ಲ. ಹೆಣ್ಣು ಮಕ್ಕಳು ಸ್ನಾನ ಮಾಡಲು ಬಳಸುತ್ತಿದ್ದ ಬ್ರಶ್ ಅನ್ನು ತೆಗೆದುಕೊಂಡು ಅದರಲ್ಲಿ ಟಾಯ್ಲೆಟ್ ಕ್ಲೀನ್ ಮಾಡುತ್ತಿದ್ದ, ಹಲ್ಲು ಉಜ್ಜುವ ಬ್ರಶ್ ತೆಗೆದುಕೊಂಡು ಟಾಯ್ಲೆಟ್ ತೊಳೆಯುತ್ತಿದ್ದ. ಬರೀ ಸೊಂಟದ ಕೆಳಗಿನ ಭಾಷೆಯನ್ನು ಮಾತ್ರವೇ ಮಾತನಾಡುತ್ತಿದ್ದ. ಅದನ್ನೆಲ್ಲ ನಾವು ಪ್ರತಿದಿನ ಕೇಳಿಸಿಕೊಂಡಿದ್ದೇವೆ’ ಎಂದಿದ್ದಾರೆ ರಂಜಿತ್.
ಇದನ್ನೂ ಓದಿ:ಬಿಗ್ಬಾಸ್ ವೇದಿಕೆ ಮೇಲೆ ಲಾಯರ್ ಜಗದೀಶ್, ಮನೆಗೆ ಮತ್ತೆ ಎಂಟ್ರಿ?
‘ಹೊರಗಡೆ ಜನ ಹೇಳುತ್ತಿದ್ದಾರಲ್ಲ, ಜಗದೀಶ್ ಎಂಟರ್ಟೈನರ್, ಹಿರೋ ಎಂದೆಲ್ಲ. ಪಾಪ ಅವರಿಗೆ ಗೊತ್ತಿಲ್ಲ. ಒಳಗೆ ಜಗದೀಶ್ ಹೇಗಿದ್ದ, ಏನೇನೋ ಮಾತನಾಡಿದ್ದ, ಯಾರ್ಯಾರ ಮೇಲೆ ಏನೇನು ಮಾತನಾಡಿದ್ದ ಎಂದು. ಆತ ಈಗ ಮಾಡಿರುವುದು ತೋರಿಸಿದರೂ ಸಾಕು ಜನ ಆತನನ್ನು ವಿಲನ್ ಮಾಡುತ್ತಾರೆ. ಬೇಕೆಂದೆ ಬಂದು ಟಾಸ್ಕ್ಗಳನ್ನು ಫೇಲ್ ಮಾಡುತ್ತಿದ್ದ. ನನಗೆ ಸಿಗದೇ ಇರುವುದು ನಿಮಗ್ಯಾರಿಗೂ ಸಿಗಬಾರದು ಎಂದು ಓಪನ್ ಆಗಿ ಹೇಳುತ್ತಿದ್ದ. ರಾತ್ರಿ ಇದ್ದಕ್ಕಿದ್ದಂತೆ ಎದ್ದು ಓಡಾಡುವುದು. ಉದ್ದೇಶಪೂರ್ವಕವಾಗಿ ಇನ್ನೊಬ್ಬರಿಗೆ ತೊಂದರೆ ಕೊಡುವುದು ಮಾಡುತ್ತಿದ್ದ’ ಎಂದಿದ್ದಾರೆ ರಂಜಿತ್.
‘ಶೋ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡುತ್ತಿದ್ದ. ಏ ಡೈರೆಕ್ಟರ್ ಬಾರೋ ಇಲ್ಲಿ. ಶೋ ಮುಚ್ಚಿಸಿ ಹಾಕ್ತೀನಿ. ಶೋ ಹಾಳು ಮಾಡ್ತೀನಿ ಎಂದೆಲ್ಲ ಮಾತನಾಡುತ್ತಿದ್ದ. ನಮ್ಮ ನಟನಾ ವೃತ್ತಿ ಬಗ್ಗೆ ತುಚ್ಛವಾಗಿ ಮಾತನಾಡುತ್ತಿದ್ದ. ಅವನು ಮಾಡಿರುವ ಎಷ್ಟೋ ವಿಷಯಗಳನ್ನು, ಆಡಿರುವ ಮಾತುಗಳನ್ನು ಬಿಗ್ಬಾಸ್ ತೋರಿಸಿಲ್ಲ. ನಾನು ಸೇರಿದಂತೆ ಸ್ಪರ್ಧಿಗಳು ಕೇಳಿಕೊಂಡೆವು, ಜಗದೀಶ್ ಮಾಡಿರುವ ಕುಕೃತ್ಯವನ್ನು ಜನರಿಗೆ ತೋರಿಸಿ ಎಂದು. ಆದರೆ ತೋರಿಸಲು ಆಗದಷ್ಟು ಕೆಟ್ಟ ಕೃತ್ಯಗಳನ್ನು ಆತ ಮಾಡಿದ್ದಾನೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ