ಬಿಗ್ ಬಾಸ್ ಕನ್ನಡ ಸೀಸನ್ 8ರ ಫಿನಾಲೆ (Bigg Boss Finale) ಎಪಿಸೋಡ್ನಲ್ಲಿ ದಿವ್ಯಾ ಉರುಡುಗ (Divya Uruduga) ಎಲಿಮಿನೇಟ್ ಆಗಿದ್ದಾರೆ. 120 ದಿನಗಳ ಕಾಲ ಕಠಿಣ ಪೈಪೋಟಿ ನೀಡಿದ್ದ ಅವರು ಫಿನಾಲೆ ಪ್ರವೇಶಿಸುವಲ್ಲಿ ಯಶಸ್ವಿ ಆಗಿದ್ದರು. ಟಾಪ್ 3 ಸ್ಪರ್ಧಿಗಳಲ್ಲಿ ಸ್ಥಾನ ಪಡೆಯುವ ಮೂಲಕ ಭರವಸೆ ಮೂಡಿಸಿದ್ದರು. ಆದರೆ ಕೊನೇ ಕ್ಷಣದಲ್ಲಿ ಅವರಿಗೆ ಹಿನ್ನಡೆ ಆಗಿದೆ. ವೀಕ್ಷಕರಿಂದ ಹೆಚ್ಚು ವೋಟ್ ಪಡೆಯುವಲ್ಲಿ ಅವರು ವಿಫಲರಾಗಿದ್ದಾರೆ. ಮಂಜು ಪಾವಗಡ, ಅರವಿಂದ್ ಕೆಪಿ (Aravind KP) ಮತ್ತು ದಿವ್ಯಾ ಉರುಡುಗ ಫಿನಾಲೆ ಪ್ರವೇಶಿಸಿದ್ದರು. ದಿವ್ಯಾಗಿಂತಲೂ ಅರವಿಂದ್ ಹೆಚ್ಚು ವೋಟ್ ಪಡೆಯುವ ಮೂಲಕ ತಮ್ಮ ಆಪ್ತ ಸ್ನೇಹಿತೆಯನ್ನೇ ಹಿಂದಿಕ್ಕಿದ್ದಾರೆ. ಈಗ ಮಂಜು ಮತ್ತು ಅರವಿಂದ್ ನಡುವೆ ಹಣಾಹಣಿ ಮುಂದುವರಿದಿದೆ.
ಈ ಸೀಸನ್ನಲ್ಲಿ ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಅವರು ಬೆಸ್ಟ್ ಜೋಡಿ ಆಗಿದ್ದರು. ಎಲ್ಲ ವಿಚಾರದಲ್ಲಿಯೂ ಒಬ್ಬರಿಗೊಬ್ಬರು ಸಪೋರ್ಟ್ ಮಾಡಿಕೊಳ್ಳುತ್ತ ಮುಂದೆ ಸಾಗುತ್ತಿದ್ದರು. ಇಬ್ಬರೂ ರಿಯಲ್ ಲೈಫ್ನಲ್ಲಿ ಕೂಡ ಜೊತೆಯಾಗಿದ್ದರೆ ಚೆಂದ ಎಂದು ವೀಕ್ಷಕರು ಮಾತನಾಡಿಕೊಳ್ಳುವ ಮಟ್ಟಕ್ಕೆ ಈ ಜೋಡಿಯ ನಡುವೆ ಬಾಂಧವ್ಯ ಇತ್ತು. ಅಂತಿಮವಾಗಿ ಅವರಿಬ್ಬರ ನಡುವೆಯೇ ಬಿಗ್ ಬಾಸ್ ಫಿನಾಲೆಯ ಟಫ್ ಕಾಂಪಿಟೀಷನ್ ನಡೆಯಿತು.
ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಉರುಡುಗಗೆ ಹೋಲಿಸಿದರೆ ಅರವಿಂದ್ ಅವರಿಗೆ ಜನಪ್ರಿಯತೆ ಜಾಸ್ತಿ ಇತ್ತು. ಅವರು ಮನರಂಜನೆ ಕ್ಷೇತ್ರದಿಂದ ಬಾರದಿದ್ದರೂ ಹೆಚ್ಚು ವೋಟ್ ಪಡೆಯುವಲ್ಲಿ ಯಶಸ್ವಿ ಆದರು. ಟಾಸ್ಕ್ನಲ್ಲಿಯೂ ಅವರು ಹಿಂದೆ ಬಿದ್ದಿರಲಿಲ್ಲ. ಅವರ ಜೊತೆ ಹೆಚ್ಚು ಆಪ್ತವಾಗಿ ಗುರುತಿಸಿಕೊಂಡಿದ್ದೇ ದಿವ್ಯಾಗೆ ಮುಳುವಾಗಿರಬಹುದು ಎಂಬ ಅಭಿಪ್ರಾಯ ವೀಕ್ಷಕರ ವರ್ಗದಿಂದ ಕೇಳಿಬರುತ್ತಿದೆ.
ತಾವು ಔಟ್ ಎಂದು ಗೊತ್ತಾದ ತಕ್ಷಣ ದಿವ್ಯಾ ಉರುಡುಗ ಭಾವುಕರಾದರು. ಅವರಿಗಿಂತಲೂ ಹೆಚ್ಚಾಗಿ ಅರವಿಂದ್ ಅವರು ಎಮೋಷನಲ್ ಆದರು. ಕಣ್ಣೀರು ಹಾಕುತ್ತಲೇ ದಿವ್ಯಾ ಅವರು ತಮ್ಮ ಬಿಗ್ ಬಾಸ್ ಜರ್ನಿಗೆ ಅಂತ್ಯ ಹಾಡಿದರು. ಅವರ ಕಣ್ಣೀರು ಒರೆಸಿ ಅರವಿಂದ್ ಮತ್ತು ಮಂಜು ಬೀಳ್ಕೊಟ್ಟರು. ‘ಇದು ನನ್ನ ಅದ್ಭುತ ಅನುಭವ. ಇದನ್ನು ನಾನು ಜೀವನ ಪರ್ಯಂತ ಕಾಪಾಡಿಕೊಳ್ಳುತ್ತೇನೆ’ ಎಂದು ದೊಡ್ಮನೆಯೊಳಗೆ ದಿವ್ಯಾ ಕೊನೇ ಮಾತುಗಳನ್ನು ಆಡಿದರು.
ಇದನ್ನೂ ಓದಿ:
ಬಿಗ್ ಬಾಸ್ ಪ್ರಶಸ್ತಿ ಮೊತ್ತದಲ್ಲಿ ಏರಿಕೆ; ಟಾಪ್ 5ನಲ್ಲಿರುವ ಎಲ್ಲರಿಗೂ ಸಿಗುತ್ತಿದೆ ಪ್ರೈಜ್ ಅಮೌಂಟ್
Published On - 10:33 pm, Sun, 8 August 21