ರೆಸಾರ್ಟ್​​ನಿಂದ ಬಿಗ್​​ಬಾಸ್ ಮನೆಗೆ ಮರಳಿದ ಸ್ಪರ್ಧಿಗಳು, ಆಟ ಮತ್ತೆ ಶುರು

Bigg Boss Kannada 12: ಬಿಗ್​​ಬಾಸ್ ಕನ್ನಡ ಸೀಸನ್ 12ರ ಎಲ್ಲ ಸ್ಪರ್ಧಿಗಳನ್ನು ಬಿಗ್​​ಬಾಸ್ ಮನೆಯಿಂದ ಹೊರಗೆ ಕರೆತಂದು ಈಗಲ್​​ಟನ್ ರೆಸಾರ್ಟ್​​ನಲ್ಲಿ ಇರಿಸಲಾಗಿತ್ತು. ಬಿಗ್​​ಬಾಸ್ ಆಯೋಜಕರು, ಜಾಲಿವುಡ್​​ ರೆಸಾರ್ಟ್​​ನ ಅಧಿಕಾರಿಗಳು, ಕಿಚ್ಚ ಸುದೀಪ್ ಇನ್ನೂ ಕೆಲವರ ಸಂಘಟಿತ ಪ್ರಯತ್ನದಿಂದಾಗಿ ಬಿಗ್​​ಬಾಸ್ ಶೋ ಪ್ರಾರಂಭಕ್ಕೆ ಅನುಮತಿ ನೀಡಲಾಗಿದೆ.

ರೆಸಾರ್ಟ್​​ನಿಂದ ಬಿಗ್​​ಬಾಸ್ ಮನೆಗೆ ಮರಳಿದ ಸ್ಪರ್ಧಿಗಳು, ಆಟ ಮತ್ತೆ ಶುರು
Bigg Boss Kannada

Updated on: Oct 09, 2025 | 7:06 AM

ಜಾಲಿವುಡ್ ಸ್ಟುಡಿಯೋಕ್ಕೆ (Jollywood studio) ಅಧಿಕಾರಿಗಳು ಬೀಗ ಹಾಕಿದ್ದ ಕಾರಣಕ್ಕೆ ಬಿಗ್​​ಬಾಸ್ ಕನ್ನಡ ಶೋ ಅನ್ನು ಸಹ ನಿಲ್ಲಿಸಲಾಗಿತ್ತು. ಬಿಗ್​​ಬಾಸ್ ಕನ್ನಡ ಸೀಸನ್ 12ರ ಎಲ್ಲ ಸ್ಪರ್ಧಿಗಳನ್ನು ಬಿಗ್​​ಬಾಸ್ ಮನೆಯಿಂದ ಹೊರಗೆ ಕರೆತಂದು ಈಗಲ್​​ಟನ್ ರೆಸಾರ್ಟ್​​ನಲ್ಲಿ ಇರಿಸಲಾಗಿತ್ತು. ಬಿಗ್​​ಬಾಸ್ ಆಯೋಜಕರು, ಜಾಲಿವುಡ್​​ ರೆಸಾರ್ಟ್​​ನ ಅಧಿಕಾರಿಗಳು, ಕಿಚ್ಚ ಸುದೀಪ್ ಇನ್ನೂ ಕೆಲವರ ಸಂಘಟಿತ ಪ್ರಯತ್ನದಿಂದಾಗಿ ಬಿಗ್​​ಬಾಸ್ ಶೋ ಪ್ರಾರಂಭಕ್ಕೆ ಅನುಮತಿ ನೀಡಲಾಗಿದೆ. ಅದರ ಬೆನ್ನಲ್ಲೆ ಎಲ್ಲ 17 ಸ್ಪರ್ಧಿಗಳನ್ನು ಮತ್ತೆ ಬಿಗ್​​ಬಾಸ್​​ ಮನೆಗೆ ಕಳಿಸಲಾಗಿದೆ.

ಜಾಲಿವುಡ್​ ಸ್ಟುಡಿಯೋ ಉಲ್ಲಂಘಿಸಿರುವ ಮಾಲಿನ್ಯಕ್ಕೆ ಸಂಬಂಧಿಸಿದ ನಿಯಮಗಳನ್ನು ಸರಿಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು 10 ದಿನಗಳ ಕಾಲಾವಕಾಶ ನೀಡಿದ್ದಾರೆ. ಹಾಗೂ ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳು, ಜಾಲಿವುಡ್ ಸ್ಟುಡಿಯೋಕ್ಕೆ ಬೀಗ ಹಾಕಿರುವುದಕ್ಕೂ ಬಿಗ್​​ಬಾಸ್ ಶೋಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಅದರ ಬೆನ್ನಲ್ಲೆ ಬಿಗ್​​ಬಾಸ್ ಶೋ ನಡೆಸಲು ಅನುಮತಿ ದೊರೆತಿದ್ದು ಮುಖ್ಯ ದ್ವಾರವನ್ನಲ್ಲದೆ ಜಾಲಿವುಡ್​​ ಸ್ಟುಡಿಯೋಸ್​​ನ ಸಿ ಗೇಟ್ ಮಾತ್ರ ಓಪನ್ ಮಾಡಿಸಿ ಬಿಗ್​​ಬಾಸ್ ಸಿಬ್ಬಂದಿ ಮತ್ತು ಸ್ಪರ್ಧಿಗಳನ್ನು ಒಳಗೆ ಬಿಟ್ಟಿದ್ದಾರೆ.

ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ನೇತೃತ್ವದಲ್ಲಿ ಜಾಲಿವುಡ್ ಸ್ಟುಡಿಯೋನ ಸಿ ಗೇಟ್ ಓಪನ್ ಮಾಡಲಾಗಿದೆ. ಈ ಸಮಯದಲ್ಲಿ ಜಿಲ್ಲಾಧಿಕಾರಿಗೆ ಬೆಂಗಳೂರು ದಕ್ಷಿಣ ಎಸ್​ಪಿ ಶ್ರೀನಿವಾಸಗೌಡ ಸಹ ಸಾಥ್ ನೀಡಿದರು. ಕೇವಲ ಬಿಗ್​​ಬಾಸ್​ ಶೋಗೆ ಮಾತ್ರವೇ ಅವಕಾಶ ಕಲ್ಪಿಸಲಾಗಿದ್ದು, ಜಾಲಿವುಡ್​ ಸ್ಟುಡಿಯೋನಲ್ಲಿ ಇನ್ಯಾವುದೇ ಚಟುವಟಿಕೆಗೆ ಸದ್ಯಕ್ಕೆ ಅವಕಾಶ ನೀಡಲಾಗಿಲ್ಲ.

ಇದನ್ನೂ ಓದಿ:ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?

ಬಿಗ್​​ಬಾಸ್ ಶೋಗೆ ಅವಕಾಶ ಸಿಕ್ಕ ಬೆನ್ನಲ್ಲೆ, ಈಗಲ್​​ಟನ್​​​ನಲ್ಲಿ ಉಳಿದುಕೊಂಡಿದ್ದ ಸ್ಪರ್ಧಿಗಳನ್ನು ಅಲ್ಲಿಂದ ಶಿಫ್ಟ್ ಮಾಡಲಾಗಿದೆ. ಮುಂಜಾನೆ 4 ಗಂಟೆ ಸುಮಾರಿಗೆ ರೆಸಾರ್ಟ್​​ನಿಂದ ಎಲ್ಲ 17 ಸ್ಪರ್ಧಿಗಳನ್ನು ಬಿಗ್​​ಬಾಸ್ ಮನೆಗೆ ತಂದು ಬಿಡಲಾಗಿದೆ. ಕಾರಿನ ಗಾಜಿಗೆ ಕಪ್ಪು ಬಟ್ಟೆ ಹಾಕಿ, ಯಾರಿಗೂ ಸ್ಪರ್ಧಿಗಳು ಕಾಣದಂತೆ ಹಾಗೂ ಸ್ಪರ್ಧಿಗಳಿಗೂ ಹೊರಗಿನದ್ದು ಏನೂ ಕಾಣದಂತೆ ಕರೆದುಕೊಂಡು ಬರಲಾಗಿದೆ.

ಎಲ್ಲ ಸ್ಪರ್ಧಿಗಳು ಬಿಗ್​​ಬಾಸ್ ಮನೆಗೆ ವಾಪಸ್ಸಾಗಿದ್ದು ಇದೀಗ ಎಲ್ಲರೂ ಮತ್ತೆ ಆಟದಲ್ಲಿ ತೊಡಗಿಕೊಂಡಿದ್ದಾರೆ. ಇಂದು ರಾತ್ರಿ ಪ್ರಸಾರವಾಗುವ ಎಪಿಸೋಡ್​ ಈಗಾಗಲೇ ಎಡಿಟ್ ಆಗಿ ತಯಾರಾಗಿದೆ ಎನ್ನಲಾಗುತ್ತಿದೆ. ಸ್ಪರ್ಧಿಗಳು ಬಿಗ್​​ಬಾಸ್ ಮನೆಯಿಂದ ಹೊರಗೆ ಹೋದ ದಿನದ ಎಪಿಸೋಡ್​​ ಇಂದು ಪ್ರಸಾರ ಆಗಲಿದ್ದು, ಎಪಿಸೋಡ್​​ನಲ್ಲಿ ಸ್ಪರ್ಧಿಗಳು ಹೊರಗೆ ಹೋಗುವುದನ್ನೂ ತೋರಿಸಲಾಗಿದೆಯೇ ಎಂಬ ಕುತೂಹಲ ಇದೆ. ಇಂದು ಬಿಗ್​​ಬಾಸ್​​ನಲ್ಲಿ ನಡೆಯುವ ಚಟುವಟಿಕೆಗಳು ನಾಳಿನ ಎಪಿಸೋಡ್​​ನಲ್ಲಿ ಪ್ರಸಾರ ಆಗಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ