ಮನೆಯಲ್ಲಿ ಯಾರೂ ಇಲ್ಲ ಆದರೆ ಶೋ ನಿಲ್ಲಲ್ಲ ಎಂದ ಬಿಗ್ಬಾಸ್
Bigg Boss Kannada 12: ಬಿಗ್ಬಾಸ್ ಕನ್ನಡ ಸ್ಪರ್ಧಿಗಳು ಈಗ ಮತ್ತೆ ಬಿಗ್ಬಾಸ್ ಮನೆಗೆ ಮರಳಿದ್ದಾರೆ. ಆದರೆ ಸುಮಾರು 24 ಗಂಟೆಗೂ ಹೆಚ್ಚಿನ ಸಮಯ ಅವರು ಮನೆಯಿಂದ ಹೊರಗಿದ್ದರು. ಇದೀಗ ಬಿಗ್ಬಾಸ್ ಕನ್ನಡದ ಈ ದಿನದ ಎಪಿಸೋಡ್ನ ಮೊದಲ ಪ್ರೋಮೊ ಬಿಡುಗಡೆ ಆಗಿದ್ದು, ಬಿಗ್ಬಾಸ್ ಮನೆಯಲ್ಲಿ ಜನರು ಇರದೇ ಇರುವ ಖಾಲಿ ಮನೆಯ ಪ್ರೋಮೊ ಬಿಡುಗಡೆ ಮಾಡಲಾಗಿದೆ.

ಬಿಗ್ಬಾಸ್ ಕನ್ನಡ 12 (Bigg Boss Kannada 12) ರಿಯಾಲಿಟಿ ಶೋ ತಾತ್ಕಾಲಿಕವಾಗಿ ಬಂದ್ ಆಗಿತ್ತು. ಜಾಲಿವುಡ್ ಸ್ಟುಡಿಯೋ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಜಾಲಿವುಡ್ ಸ್ಟುಡಿಯೋ ಬಂದ್ ಮಾಡಲಾಗಿತ್ತು. ಸ್ಟುಡಿಯೋದ ಒಳಗೆ ಇರುವ ಬಿಗ್ಬಾಸ್ ಮನೆಗೂ ಬೀಗ ಬಿದ್ದಿತ್ತು. ಸ್ಪರ್ಧಿಗಳನ್ನು ಮನೆಯಿಂದ ಈಗಲ್ಟನ್ ರೆಸಾರ್ಟ್ಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ ಇದೀಗ ಸುದೀಪ್ ಹಾಗೂ ಇತರರ ಸಂಘಟಿತ ಪ್ರಯತ್ನಗಳಿಂದಾಗಿ ಬಿಗ್ಬಾಸ್ ಸ್ಪರ್ಧಿಗಳು ಮತ್ತೆ ಬಿಗ್ಬಾಸ್ ಮನೆಗೆ ಮರಳಿದ್ದಾರೆ. ಆದರೆ ಸ್ಪರ್ಧಿಗಳು ಸುಮಾರು 24 ಗಂಟೆಗೂ ಹೆಚ್ಚು ಸಮಯ ಸ್ಪರ್ಧಿಗಳು ಮನೆಯಲ್ಲಿ ಇರಲಿಲ್ಲ. ಹಾಗಾಗಿ ಒಂದು ದಿನದ ಎಪಿಸೋಡ್ ವ್ಯರ್ಥವಾಗಿದೆ.
ಇಂದು (ಅಕ್ಟೋಬರ್ 09) ಕಲರ್ಸ್ ವಾಹಿನಿಯು ಬಿಗ್ಬಾಸ್ ಇಂದಿನ ಎಪಿಸೋಡ್ನ ಮೊದಲ ಪ್ರೋಮೊ ಬಿಡುಗಡೆ ಮಾಡಿದೆ. ಈ ಪ್ರೋಮೊ ಬಹಳ ವಿಶಿಷ್ಟವಾಗಿಯೂ, ವಿಶೇಷವಾಗಿಯೂ ಇದೆ. ನಿನ್ನೆ ಮನೆಯಲ್ಲಿ ನಡೆದುದ್ದನ್ನು ಇಂದಿನ ಎಪಿಸೋಡ್ನಲ್ಲಿ ತೋರಿಸಲಾಗುತ್ತದೆ. ಆದರೆ ನಿನ್ನೆ ಮನೆ ಎಲ್ಲ ಖಾಲಿ ಇತ್ತು, ಹಾಗಾಗಿ ಬಿಗ್ಬಾಸ್ ಇಂದು ಬಿಡುಗಡೆ ಮಾಡಿರುವ ಪ್ರೋಮೋನಲ್ಲೂ ಸಹ ಮನೆಯೆಲ್ಲ ಖಾಲಿ ಇದೆ!
ಪ್ರೋಮೊನಲ್ಲಿ ಖಾಲಿ ಇರುವ ಬೆಡ್ ರೂಂ, ಕಿಚನ್, ಲಿವಿಂಗ್ ರೂಂ, ಹೊರಗಡೆಯ ಏರಿಯಾಗಳನ್ನು ತೋರಿಸಲಾಗಿದೆ. ಪ್ರೋಮೊದ ಕೊನೆಯಲ್ಲಿ ‘ಎಂದಿನಂತೆ ಅದೇ ಸಮಯದಲ್ಲಿ, ಬಿಗ್ಬಾಸ್ ಕನ್ನಡ ರಾತ್ರಿ 9:30ಕ್ಕೆ ಪ್ರಸಾರ’ ಎಂದು ಬಿಗ್ಬಾಸ್ ಖಡಕ್ ಧ್ವನಿಯಲ್ಲಿ ಹೇಳಿದೆ. ಆ ಮೂಲಕ, ಮನೆಯಲ್ಲಿ ಜನ ಇರಲಿ, ಇಲ್ಲದೇ ಇರಲಿ, ಬಿಗ್ಬಾಸ್ ಶೋ ಪ್ರಸಾರ ಆಗಿಯೇ ತೀರುತ್ತದೆ ಎಂದು ಸಾರಿ ಹೇಳಿದೆ ಬಿಗ್ಬಾಸ್.
View this post on Instagram
ಬಿಗ್ಬಾಸ್ ಶೋ ನೂರು ದಿನಗಳ ಶೋ ಆಗಿದ್ದು, ಇಲ್ಲಿ ಸ್ಪರ್ಧಿಗಳಷ್ಟೆ ದಿನಗಳಿಗೂ ಸಹ ಮಹತ್ವ ಇದೆ. ಬಿಗ್ಬಾಸ್ ಮನೆಯಲ್ಲಿ ಯಾರು ಇದ್ದರೂ, ಬಿಟ್ಟರು, ಸಂಖ್ಯೆ ತಪ್ಪುವಂತಿಲ್ಲ. ಹಾಗಾಗಿಯೇ ಸ್ಪರ್ಧಿಗಳು ಇಲ್ಲದೇ ಹೋದ ದಿನವನ್ನೂ ಸಹ ಬಿಗ್ಬಾಸ್ ಶೋನ ಭಾಗವಾಗಿಯೇ ಪರಿಗಣಿಸಿದಂತಿದೆ. ಹಾಗಾಗಿಯೇ ಖಾಲಿ ಮನೆಯ ಎಪಿಸೋಡ್ ಪ್ರಸಾರಕ್ಕೆ ಮುಂದಾಗಿದೆ. ಪ್ರೋಮೊನಲ್ಲಿ ಖಾಲಿ ಮನೆ ತೋರಿಸಿದ್ದಾರಾದರೂ ಎಪಿಸೋಡ್ನಲ್ಲಿ, ಬಿಗ್ಬಾಸ್ ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗುವ ಮುಂಚೆ ನಡೆದ ಘಟನೆಗಳು, ಬಿಗ್ಬಾಸ್ ಮನೆಯಿಂದ ಹೊರಗೆ ಹೋದ ಸನ್ನಿವೇಶಗಳ ದೃಶ್ಯಗಳನ್ನು ಪ್ರಸಾರ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ:ಒಂದು ಫೋನ್ ಕರೆಯಿಂದ ಬಿಗ್ಬಾಸ್ ಬಾಗಿಲು ತೆಗೆಸಿದ ಕಿಚ್ಚ ಸುದೀಪ್
ಈ ಹಿಂದೆ ಕೋವಿಡ್ ಕಾರಣಕ್ಕೆ ಬಿಗ್ಬಾಸ್ ಶೋ ಅನ್ನು ಬಂದ್ ಮಾಡಲಾಗಿತ್ತು. ಅದರ ಹೊರತಾಗಿ ಇನ್ಯಾವ ಸೀಸನ್ನಲ್ಲೂ ಸಹ ಶೋ ಅರ್ಧಕ್ಕೆ ನಿಂತಿದ್ದು ಇಲ್ಲ. ಕಳೆದ ವರ್ಷವೂ ಸಹ ಬಿಗ್ಬಾಸ್ ಮನೆಯ ಬಗ್ಗೆ ಕೆಲ ಆರೋಪಗಳು ಕೇಳಿಬಂದವು, ನೊಟೀಸ್ಗಳು ಬಂದಿದ್ದವು. ಆದರೆ ಶೋ ಅಬಾಧಿತವಾಗಿ ನಡೆದಿತ್ತು. ಆದರೆ ಈ ಬಾರಿ ಶೋ ತಾತ್ಕಾಲಿಕವಾಗಿ ಬಂದ್ ಆಗಿ ಮತ್ತೆ ಶುರುವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




