
ಬಿಗ್ಬಾಸ್ ಕನ್ನಡ ಸೀಸನ್ 13 (Bigg Boss Kannada) ಇನ್ನೊಂದು ವಾರದಲ್ಲಿ ಪ್ರಾರಂಭ ಆಗಲಿದೆ. ಈ ಬಾರಿ ಬಿಗ್ಬಾಸ್ ಮನೆಗೆ ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯರು ಸಹ ಎಂಟ್ರಿ ಕೊಡಲಿದ್ದಾರೆ. ಈಗಾಗಲೇ ಹಲವು ಸ್ಪರ್ಧಿಗಳ ಆಯ್ಕೆ ನಡೆದಿದೆ. ಆದರೆ ಇನ್ನೂ ಕೆಲವು ಸ್ಪರ್ಧಿಗಳ ಆಯ್ಕೆ ನಡೆಯುತ್ತಿದ್ದು, ಲಕ್ಷಾಂತರ ಆಕಾಂಕ್ಷಿಗಳ ಪೈಕಿ ಕೆಲವರನ್ನು ಆಯ್ಕೆ ಮಾಡಿ ಅವರಿಗೆ ಕೆಲವು ಪರೀಕ್ಷೆಗಳನ್ನು ನೀಡಿ ಅದರಲ್ಲಿ ಪಾಸ್ ಆಗುವವರನ್ನು ಬಿಗ್ಬಾಸ್ ಮನೆಗೆ ಕಳಿಸಲಾಗುತ್ತಿದೆ. ಈ ಅಗ್ನಿಪರೀಕ್ಷೆ, ಎಂಟಿವಿಯ ರೋಡೀಸ್ ಅನ್ನು ನೆನಪಿಸುತ್ತಿದೆ.
ಇದೀಗ ಕಲರ್ಸ್ ವಾಹಿನಿಯು, ‘ಬಿಗ್ಬಾಸ್ ಅಗ್ನಿಪರೀಕ್ಷೆಯ’ ಹೊಸ ಪ್ರೋಮೊ ಬಿಡುಗಡೆ ಮಾಡಿದೆ. ಕೆಲ ದಿನಗಳ ಹಿಂದೆ ಬಿಡುಗಡೆ ಮಾಡಿದ್ದ ಪ್ರೋಮೊನಲ್ಲಿ ಮಾಜಿ ಸ್ಪರ್ಧಿಗಳಾದ ಶ್ರುತಿ, ವಿನಯ್ ಗೌಡ, ಸಂಗೀತ ಶೃಂಗೇರಿ ಮತ್ತು ಚಂದನ್ ಶೆಟ್ಟಿ ಅವರುಗಳು ಬಿಗ್ಬಾಸ್ ಆಕಾಂಕ್ಷಿಗಳ ಅಗ್ನಿಪರೀಕ್ಷೆ ತೆಗೆದುಕೊಳ್ಳಲಿದ್ದಾರೆ ಎಂದು ಘೋಷಿಸಲಾಗಿತ್ತು. ಈಗ ಅಗ್ನಿಪರೀಕ್ಷೆ ಶುರುವಾಗಿದ್ದು, ತೀರ್ಪುಗಾರರು ವಿವಿಧ ರೀತಿಯ ಕ್ಲಿಷ್ಟವಾದ ಪರೀಕ್ಷೆಗಳನ್ನು ಆಕಾಂಕ್ಷಿಗಳಿಗೆ ಇರಿಸಿದ್ದಾರೆ.
ಇಂದು (ಆಗಸ್ಟ್ 09) ಬಿಡುಗಡೆ ಆಗಿರುವ ಪ್ರೋಮೊ ಪ್ರಕಾರ, ಸುಮಾರು 60ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳನ್ನು ಫೈನಲ್ ಮಾಡಲಾಗಿದ್ದು, ಅವರಿಗೆ ಅಗ್ನಿಪರೀಕ್ಷೆ ಇರಿಸಲಾಗಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತೀರ್ಪುಗಾರರ ಮುಂದೆ ಬಂದಿದ್ದಾರೆ. ತೀರ್ಪುಗಾರರು ಅವರನ್ನು ನಾನಾ ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ. ನಾನಾ ರೀತಿಯ ಪರೀಕ್ಷೆಗಳನ್ನು ಒಡ್ಡಿದ್ದಾರೆ.
ಪ್ರೋಮೊನಲ್ಲಿ ತೋರಿಸಿರುವಂತೆ ಯುವತಿಯರಿಗೆ ಸಗಣಿಯನ್ನು ಮುಖಕ್ಕೆ ಫೇಸ್ ಮಾಸ್ಕ್ ರೀತಿ ಮೆತ್ತಿಕೊಳ್ಳುವಂತೆ ಹೇಳಿದ್ದಾರೆ. ಇನ್ನು ಕೆಲವರಿಗೆ ಹಾಗಲಕಾಯಿ, ಮೆಣಸಿನಕಾಯಿ ಜ್ಯೂಸ್ ಕುಡಿಸಿದ್ದಾರೆ. ಗಿನ್ನೆಸ್ ದಾಖಲೆ ಮಾಡಿದ್ದೇನೆಂದು ಬಂದ ಯುವಕನಿಂದ ಆ ದಾಖಲೆಯ ಪತ್ರವನ್ನು ಹರಿಸಿದ್ದಾರೆ. ಒಬ್ಬ ವ್ಯಕ್ತಿಗೆ ತಲೆ ಬೋಳಿಸಿಕೊಳ್ಳುವಂತೆ ಹೇಳಿದ್ದಾರೆ. ಯುವತಿಗೆ ತಮ್ಮ ಮೇಕಪ್ ಸಾಮಗ್ರಿಗಳನ್ನು ಒಡೆದು ಹಾಕುವಂತೆ ಹೇಳಿದ್ದಾರೆ. ಒಟ್ಟಾರೆ ನಾ-ನಾ ರೀತಿಯ ಪರೀಕ್ಷೆಗಳನ್ನು ಮಾಡಿಸಿದ್ದಾರೆ.
ಅಮುಕು-ಡುಮುಕು ಎನ್ನುತ್ತಾ ಇನ್ಸ್ಟಾಗ್ರಾಂನಲ್ಲಿ ಜನಪ್ರಿಯ ಆಗಿರುವ ಸೋಷಿಯಲ್ ಮೀಡಿಯಾ ಇನ್ಫ್ಲಯೆನ್ಸರ್ ಸಹ ಬಿಗ್ಬಾಸ್ ಅಗ್ನಿಪರೀಕ್ಷೆಗೆ ಬಂದಿದ್ದ, ಆದರೆ ವಿನಯ್ ಗೌಡ ಹಾಗೂ ಆತನ ನಡುವೆ ಕಾವೇರಿದ ವಾದ-ಪ್ರತಿವಾದ ನಡೆದಿದ್ದು, ವಿನಯ್ ಗೌಡ, ಆ ಇನ್ಫ್ಲಯೆನ್ಸರ್ ಅನ್ನು ವೇದಿಕೆಯಿಂದಲೇ ಮನೆಗೆ ಕಳಿಸಿದ್ದಾರೆ. ಅದೂ ಸಹ ಪ್ರೋಮೊನಲ್ಲಿ ತೋರಿಸಲಾಗಿದೆ. ಬಿಗ್ಬಾಸ್ ಕನ್ನಡ ಸೀಸನ್ 13, ಆಗಸ್ಟ್ 16ರಿಂದ ಪ್ರಾರಂಭ ಆಗಲಿದೆ. ಸುದೀಪ್ ಅವರು ಅದ್ಧೂರಿಯಾಗಿ ಹೊಸ ಸೀಸನ್ಗೆ ಚಾಲನೆ ನೀಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:40 pm, Sun, 9 August 26