ಹುಲಿ ಉಗುರು ಹೊಂದಿರುವ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರಿಗೆ ಸಂಕಷ್ಟ ಹೆಚ್ಚಿದೆ. ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಲಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada) ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದ ಅವರನ್ನು ಅಕ್ಟೋಬರ್ 22ರ ರಾತ್ರಿ ಬಂಧಿಸಲಾಗಿತ್ತು. ಬಳಿಕ ಅರಣ್ಯಾಧಿಕಾರಿಗಳು ಕೋರಮಂಗಲದ NGVಯ ಜಡ್ಜ್ ನಿವಾಸದಲ್ಲಿ ಹಾಜರುಪಡಿಸಿದರು. 2ನೇ ಎಸಿಜೆಎಂ ನ್ಯಾಯಾಧೀಶರು ವರ್ತೂರು ಸಂತೋಷ್ಗೆ (Varthur Santhosh) ನವೆಂಬರ್ 6ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ಜಾಮೀನು ಸಿಗುವ ತನಕ ಪರಪ್ಪನ ಅಗ್ರಹಾರದಲ್ಲಿ ಸಂತೋಷ್ ಕಾಲ ಕಳೆಯುಬೇಕಿದೆ.
ವರ್ತೂರು ಸಂತೋಷ್ ಅವರ ನ್ಯಾಯಾಂಗ ಬಂಧನಕ್ಕೆ ಸಂಬಂಧಿಸಿದಂತೆ ಅವರ ಪರ ವಕೀಲ ನಟರಾಜ್ ಹೇಳಿಕೆ ನೀಡಿದ್ದಾರೆ. ‘ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದೇವೆ. ಬುಧವಾರ ವಿಚಾರಣೆ ಇದೆ’ ಎಂದು ಅವರು ಹೇಳಿದ್ದಾರೆ. ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ದೂರುದಾರರಿಗೆ ಸೂಚಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲೇ ವರ್ತೂರು ಸಂತೋಷ್ ಅರೆಸ್ಟ್; ಮಾಡಿದ ಕ್ರೈಮ್ ಏನು?
‘ಸಂತೋಷ್ ಧರಿಸಿರುವುದು ಹುಲಿ ಉಗುರು ಅಂತಾ ಹೇಳುತ್ತಿದ್ದಾರೆ. ಪರಿಣಿತರು ಪರಿಶೀಲನೆ ನಡೆಸಿ ನಂತರ ವರದಿ ಬಂದ ಬಳಿಕ ಗೊತ್ತಾಗಲಿದೆ. ಹೊಸೂರು ರಸ್ತೆಯಲ್ಲಿ ಮೂರು ವರ್ಷಗಳ ಹಿಂದೆ ಖರೀದಿಸಿದ್ದಾರೆ. ಬಿಲ್ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ’ ಎಂದ ವಕೀಲ ನಟರಾಜ್ ಹೇಳಿದ್ದಾರೆ.
ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಸಂತೋಷ್ ಕೊರಳಿನಲ್ಲಿ ಹುಲಿ ಉಗುರು ಹಾಕಿಕೊಂಡಿದ್ದಾರೆ ಎಂಬ ದೂರು ಬಂದಿತ್ತು. ಅದರ ಆಧಾರದಲ್ಲಿ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ವನ್ಯ ಜೀವಿಗಳ ಕಾನೂನಿನ ಆಧಾರದ ಮೇಲೆ ಅರೆಸ್ಟ್ ಮಾಡಲಾಗಿದೆ. ಈ ಪ್ರಕರಣದಲ್ಲಿ ಯಾರೇ ಇದ್ದರೂ ಕೂಡ ಕಾನೂನು ರೀತಿಯಲ್ಲಿ ಕ್ರಮವನ್ನು ಜರುಗಿಸಲಾಗುವುದು’ ಎಂದು ಅವರು ಹೇಳಿದ್ದಾರೆ.
ಹಳ್ಳಿಕಾರ್ ತಳಿಯನ್ನು ಸಂರಕ್ಷಿಸುವ ಮೂಲಕ ವರ್ತೂರು ಸಂತೋಷ್ ಅವರು ಪ್ರಸಿದ್ಧಿ ಪಡೆದಿದ್ದಾರೆ. ಬಿಗ್ ಬಾಸ್ ವೇದಿಕೆಯಲ್ಲಿ ಅವರು ಈ ಕುರಿತು ಮಾತನಾಡಿದ್ದರು. ಟ್ರೋಫಿ ಗೆಲ್ಲುವ ಕನಸು ಕಂಡಿದ್ದ ಅವರು ಈಗ ಜೈಲು ಸೇರುವಂತಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:48 pm, Mon, 23 October 23