ಈ ಬಾರಿಯ ಬಿಗ್ಬಾಸ್ (BiggBoss) ಮನೆ ಹಲವು ಮೊದಲುಗಳನ್ನು ಕಂಡಿದೆ. ಅತಿ ಹೆಚ್ಚು ವಿವಾದಕ್ಕೂ ಕಾರಣವಾಗಿದೆ. ಬಿಗ್ಬಾಸ್ ಮನೆಯಿಂದ ಸ್ಪರ್ಧಿ ನೇರವಾಗಿ ಜೈಲಿಗೆ ಹೋಗಿದ್ದಾರೆ, ಜೈಲಿನಿಂದ ಬಿಗ್ಬಾಸ್ ಮನೆಗೆ ಬಂದಿದ್ದಾರೆ. ಬಿಗ್ಬಾಸ್ ಮನೆಯ ಬಳಿ ಪೊಲೀಸರು ಬಂದು ಹೋಗಿದ್ದಾರೆ. ಎಲಿಮಿನೇಟ್ ಆದವರು ಮನೆಯಿಂದ ಹೊರಗೆ ಹೋಗದೆ ಉಳಿದಿದ್ದಾರೆ, ಕಳಪೆ ಪಟ್ಟ ಪಡೆದು ಜೈಲಿಗೆ ಹೋದವರು ತಪ್ಪಿಸಿಕೊಂಡು ಹೊರಗೆ ಹೋಗಿದ್ದಾರೆ. ಸುದೀಪ್ ತಮ್ಮ ಕೆಲವು ಅಧಿಕಾರಗಳನ್ನು ಇದೇ ಸೀಸನ್ನಲ್ಲಿ ಮೊದಲ ಬಾರಿಗೆ ಬಳಸಿದ್ದಾರೆ. ಎಂಟನೇ ವಾರವೂ ಒಬ್ಬರು ಸ್ಪರ್ಧಿ ಹೊರಗೆ ಹೋಗಬೇಕಿತ್ತು ಆದರೆ ಸುದೀಪ್ ತಮ್ಮ ವಿಶೇಷ ಅಧಿಕಾರ ಬಳಸಿ, ಬಿಗ್ಬಾಸ್ ಕನ್ನಡ ಇತಿಹಾಸದಲ್ಲಿ ಮೊದಲ ಬಾರಿಗೆ ನಿರ್ಣಯವೊಂದನ್ನು ತೆಗೆದುಕೊಂಡಿದ್ದಾರೆ.
ಈ ವಾರ ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆಗಿದ್ದವರ ಪೈಕಿ ಶನಿವಾರದ ಎಪಿಸೋಡ್ನಲ್ಲಿ ವರ್ತೂರು ಸಂತೋಷ್, ನಮ್ರತಾ, ಡ್ರೋನ್ ಪ್ರತಾಪ್ ಅವರುಗಳು ಸೇಫ್ ಆಗಿದ್ದರು. ಭಾನುವಾರಕ್ಕೆ ವಿನಯ್, ಸಂಗೀತಾ, ತನಿಷಾ, ಮೈಖಲ್ ಹಾಗೂ ಸ್ನೇಹಿತ್ ಉಳಿದುಕೊಂಡಿದ್ದರು. ಭಾನುವಾರ ಎಪಿಸೋಡ್ ಆರಂಭವಾದಾಗ ವಿನಯ್ ಮೊದಲಿಗೆ ಸೇಫ್ ಆದರು ಅವರ ಬಳಿಕ ಸಂಗೀತಾ ಸೇಫ್ ಆದರು. ತನಿಷಾ ಸಹ ಸೇಫ್ ಆಗಿ ಅಂತಿಮವಾಗಿ ಮೈಖಲ್ ಹಾಗೂ ಸ್ನೇಹಿತ್ ಅವರುಗಳು ಕೊನೆಯದಾಗಿ ಉಳಿದರು.
ಇಬ್ಬರೂ ಒಳ್ಳೆಯ ಆಟಗಾರರು. ಈ ವಾರ ಇಬ್ಬರೂ ಬಹಳ ಚೆನ್ನಾಗಿ ಆಡಿದ್ದರು. ಸ್ನೇಹಿತ್ ಅಂತೂ ಚೆನ್ನಾಗಿ ಆಡಿ ಕ್ಯಾಪ್ಟನ್ ಸಹ ಆಗಿದ್ದರು. ಮೈಖಲ್ ಆರಂಭದಿಂದಲೂ ಒಳ್ಳೆಯ ಸ್ಪರ್ಧಿಯೇ. ಇಬ್ಬರಲ್ಲಿ ಯಾರೇ ಹೋದರು ಅದು ಅನ್ಯಾಯವೇ ಆಗಿರುತ್ತಿತ್ತು. ಇದನ್ನೆಲ್ಲ ಗಮನಿಸಿದ ನಿರೂಪಕ ಸುದೀಪ್, ಮೊದಲ ಬಾರಿಗೆ ತಮ್ಮ ವಿಶೇಷ ಅಧಿಕಾರ ಬಳಸಿ ಇಬ್ಬರಲ್ಲಿ ಯಾರನ್ನೂ ಮನೆಯಿಂದ ಹೊರಗೆ ಕಳಿಸಲಿಲ್ಲ. ಆದರೆ ತಾವೇಕೆ ಯಾರನ್ನೂ ಮನೆಯಿಂದ ಹೊರಗೆ ಕಳಿಸಲಿಲ್ಲ ಎಂಬುದಕ್ಕೆ ಕಾರಣವನ್ನೂ ಸಹ ಸುದೀಪ್ ನೀಡಿದರು.
ಇದನ್ನೂ ಓದಿ:‘ಬಿಗ್ ಬಾಸ್ ವಿನ್ ಆಗೋದು ನಾನೇ’ ಎಂದ ವಿನಯ್; ಬೆಂಬಲ ಸೂಚಿಸಿದ ಸ್ನೇಹಿತ್ಗೆ ವೀಕ್ಷಕರ ಪ್ರಶ್ನೆ
ಈಗ ತಾನೇ ಮನೆಗೆ ಇಬ್ಬರು ಹೊಸಬರು ಬಂದಿದ್ದಾರೆ. ಅವರು ಮನೆಯಲ್ಲಿ ಇರಬೇಕಾದರೆ 50 ದಿನಗಳಿಗಲೂ ಹೆಚ್ಚು ಸಮಯದಿಂದ ಆಡುತ್ತಾ ಬಂದಿರುವ ಗಟ್ಟಿ ಸ್ಪರ್ಧಿಗಳನ್ನು ಹೊರಹಾಕುವುದು ಸರಿಯಲ್ಲ, ಅವರಿಬ್ಬರ ಹೆಸರು ನಾಮಿನೇಷನ್ನಲ್ಲಿ ಇದ್ದಿದ್ದರೆ ಯಾರು ಹೊರಗೆ ಹೋಗುತ್ತಿದ್ದರು? ಹಾಗೆಂದು ಹೊಸಬರನ್ನು ನಾಮಿನೇಷನ್ ಪಟ್ಟಿಗೆ ಸೇರಿಸುವಂತೆಯೂ ಇಲ್ಲ, ಅವರಿಗೂ ಅವಕಾಶ ಬೇಕು. ಅದನ್ನೆಲ್ಲ ಯೋಚಿಸಿ ಈ ನಿರ್ಣಯ ತೆಗೆದುಕೊಂಡಿದ್ದೇನೆ ಎಂದರು ಸುದೀಪ್.
ಆದರೆ ತಾವು ಸೇಫ್ ಮಾಡಿದ ಸ್ನೇಹಿತ್ ಹಾಗೂ ಮೈಖಲ್ ಅವರನ್ನು ಸುದೀಪ್ ಅವರೇ ಮುಂದಿನ ವಾರಕ್ಕೆ ನಾಮಿನೇಷನ್ ಪಟ್ಟಿಗೆ ಸೇರಿಸಿದರು. ಅಲ್ಲದೆ ಮುಂದಿನ ವಾರಕ್ಕೆ ಕ್ಯಾಪ್ಟನ್ ಆಗಿರುವ ಸ್ನೇಹಿತ್ಗೆ ಸಹ ಸಂಪೂರ್ಣ ಅಧಿಕಾರ ಸಿಗಬಹುದೇ ಎಂಬ ಬಗ್ಗೆಯೂ ಅನುಮಾನವಿದೆ ಎಂದೂ ಸಹ ಸುದೀಪ್ ಹೇಳಿದರು. ಇಬ್ಬರೂ ಚೆನ್ನಾಗಿ ಆಡಿ ಮುಂದಿನ ವಾರ ಏನಾಗುತ್ತೋ ನೋಡೋಣ ಎಂದರು ಸುದೀಪ್. ಕಿಚ್ಚನ ಕಾರಣದಿಂದ ಸೇಫ್ ಆದ ಸ್ನೇಹಿತ್ ಕಣ್ಣೀರು ಹಾಕಿ ಧನ್ಯವಾದ ಹೇಳಿದರೆ, ಮೈಖಲ್, ಮುಂದಿನ ವಾರ ಇನ್ನೂ ಚೆನ್ನಾಗಿ ಆಡುವ ಭರವಸೆ ನೀಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ