ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಎಲ್ಲ ರೀತಿಯ ವ್ಯಕ್ತಿಗಳೂ ಇರುತ್ತಾರೆ. ಎಲ್ಲ ರೀತಿಯ ಭಾವನೆಗಳೂ ಇರುತ್ತವೆ. ಪ್ರತಿ ಹಂತದಲ್ಲೂ ಪರಿಸ್ಥಿತಿ ಬದಲಾಗುತ್ತದೆ. ಒಂದು ಕ್ಷಣ ಸ್ನೇಹಿತರಾಗಿದ್ದರು ಮುರುಕ್ಷಣವೇ ದುಷ್ಮನ್ಗಳಾಗುತ್ತಾರೆ. ಟಾಸ್ಕ್ ಇದ್ದರಂತೂ ಪೈಪೋಟಿ ಜೋರಾಗುತ್ತದೆ. ಆಗ ಯಾವ ಸ್ನೇಹವೂ ಲೆಕ್ಕಕ್ಕೆ ಬರುವುದಿಲ್ಲ. ಬಿಗ್ ಬಾಸ್ (BBK) ಮನೆಯಲ್ಲಿ ಬದುಕಬೇಕು ಎಂದರೆ ನಿಷ್ಠುರ ಕಟ್ಟಿಕೊಳ್ಳದೇ ಬೇರೆ ದಾರಿ ಇಲ್ಲ. ಎಲ್ಲರ ಜೊತೆಗೂ ಫ್ರೆಂಡ್ಶಿಪ್ ನಿಭಾಯಿಸಲು ಹೋದರೆ ಟಾಸ್ಕ್ ಆಡೋಕಾಗಲ್ಲ. ಇಂಥ ಸಂದಿಗ್ಧ ಪರಿಸ್ಥಿತಿ ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada Season 10) ಶೋನಲ್ಲಿ ಎದುರಾಗಿದೆ. ಎರಡನೇ ವಾರದಲ್ಲಿ ಪೈಪೋಟಿ ಹೆಚ್ಚಿದೆ.
ಕೆಲವು ಟಾಸ್ಕ್ಗಳನ್ನು ಸಿಂಗಲ್ ಆಗಿ ಆಡಬೇಕು. ಇನ್ನುಳಿದ ಟಾಸ್ಕ್ಗಳನ್ನು ಗುಂಪುಗಳಲ್ಲಿ ಆಡಬೇಕು. ಟಾಸ್ಕ್ನ ನೆಪದಿಂದಲೇ ಗುಂಪುಗಾರಿಕೆ ಉಂಟಾದ ಉದಾಹರಣೆ ಸಾಕಷ್ಟಿದೆ. ಬಿಗ್ ಬಾಸ್ ಮನೆಯಲ್ಲಿ ಒಮ್ಮೆ ಗುಂಪುಗಾರಿಕೆ ಶುರುವಾದರೆ ಅದರ ಪರಿಣಾಮ ಎಲ್ಲದರ ಮೇಲೂ ಆಗುತ್ತದೆ. ಸದ್ಯಕ್ಕೆ ದೊಡ್ಮನೆಯಲ್ಲಿ ಈಗ ಕಾರ್ತಿಕ್ ಮಹೇಶ್ ಹಾಗೂ ವಿನಯ್ ಗೌಡ ಅವರು ಎರಡು ಬೇರೆ ಬೇರೆ ಗುಂಪುಗಳ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಪರಸ್ಪರ ದ್ವೇಷ ಬೆಳೆಯುವ ಮಟ್ಟಕ್ಕೆ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ಉಂಟಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಯಾವ ಪರಿಸ್ಥಿತಿ ಕೂಡ ಯೂಸರ್ ಮ್ಯಾನ್ಯುಯಲ್ ಜೊತೆಗೆ ಬರುವುದಿಲ್ಲ. ಹೆಚ್ಚೇನೂ ಮುನ್ಸೂಚನೆ ನೀಡದೇ ಹೊಸ ಹೊಸ ಟಾಸ್ಕ್ಗಳನ್ನು ನೀಡಲಾಗುತ್ತದೆ. ಕೆಲವೇ ನಿಮಿಷಗಳಲ್ಲಿ ಎಲ್ಲವನ್ನೂ ಅರ್ಥ ಮಾಡಿಕೊಳ್ಳಬೇಕು. ಟಾಸ್ಕ್ನ ನಿಯಮವನ್ನು ಒಬ್ಬೊಬ್ಬರು ಒಂದೊಂದು ರೀತಿ ಅರ್ಥ ಮಾಡಿಕೊಂಡ ಘಟನೆಗಳೂ ನಡೆಯುತ್ತವೆ. ಅಂಥ ಸಂದರ್ಭದಲ್ಲಿ ಸ್ಪರ್ಧಿಗಳ ನಡುವೆ ಕಿತ್ತಾಟ ಶುರುವಾಗುತ್ತದೆ. ಈಗ ಬಿಗ್ ಬಾಸ್ ಮನೆಯಲ್ಲಿ ಆಗಿರುವ ಎರಡು ಗುಂಪುಗಳು ಇದೇ ಸವಾಲನ್ನು ಎದುರಿಸುತ್ತಿವೆ.
ಬೆಳಗ್ಗೆ ಕಣ್ಣು ಬಿಡೋದಕ್ಕೂ ಮುನ್ನವೇ ಬಿಗ್ ಬಾಸ್ ಮನೆಯಲ್ಲಿ ಜಗಳ; 2ನೇ ವಾರದ ಆಟ ಅಷ್ಟು ಸುಲಭವಿಲ್ಲ
ಮೊದಲ ವಾರ ಸ್ನೇಕ್ ಶ್ಯಾಮ್ ಎಲಿಮಿನೇಟ್ ಆದರು. ಎರಡನೇ ವಾರಕ್ಕೆ ಹಲವರ ಹೆಸರುಗಳು ನಾಮಿನೇಟ್ ಆಗಿವೆ. ಎಲಿಮಿನೇಷನ್ನಿಂದ ತಪ್ಪಿಸಿಕೊಳ್ಳಬೇಕು ಎಂದರೆ ಟಫ್ ಸ್ಪರ್ಧೆ ನೀಡಲೇಬೇಕು. ಕಾರ್ತಿಕ್ ಮಹೇಶ್, ವಿನಯ್ ಗೌಡ, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ರಕ್ಷಕ್, ಸ್ನೇಹಿತ್, ಸಿರಿ, ಗೌರೀಶ್ ಅಕ್ಕಿ, ನೀತೂ ವನಜಾಕ್ಷಿ, ಭಾಗ್ಯಶ್ರೀ, ಮೈಕೆಲ್ ಅಜಯ್, ಈಶಾನಿ, ತುಕಾಲಿ ಸಂತೋಷ್, ನಮ್ರತಾ ಗೌಡ, ವರ್ತೂರು ಸಂತೋಷ್, ತನಿಶಾ ಕುಪ್ಪಂಡ ಅವರು ಸ್ಪರ್ಧೆ ನಡೆಸುತ್ತಿದ್ದಾರೆ. ಬಿಗ್ ಬಾಸ್ ಸಂಚಿಕೆ ಪ್ರತಿ ರಾತ್ರಿ 9.30ಕ್ಕೆ ‘ಕಲರ್ಸ್ ಕನ್ನಡ’ ಟಿವಿಯಲ್ಲಿ ಪ್ರಸಾರ ಆಗುತ್ತದೆ. ದಿನದ 24 ಗಂಟೆಯೂ ‘ಜಿಯೋ ಸಿನಿಮಾ’ದಲ್ಲಿ ಈ ಕಾರ್ಯಕ್ರಮವನ್ನು ಉಚಿತವಾಗಿ ನೋಡಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.