ವರ್ತೂರು ಸಂತೋಷ್ (Varthur Santhosh) ಬಿಗ್ಬಾಸ್ ಮನೆಯ ಭಿನ್ನ ಸ್ಪರ್ಧಿ. ಮನೊರಂಜನಾ ಕ್ಷೇತ್ರಕ್ಕೆ ಸಂಬಂಧ ಪಡದ, ಅಪ್ಪಟ ಹಳ್ಳಿ ಹೈದ, ಅವರ ಮಾತು, ನಡೆ, ಟಾಸ್ಕ್ ಆಡುವ ರೀತಿ ಎಲ್ಲವೂ ಭಿನ್ನ. ಹಲವು ವಾರಗಳ ಹಿಂದೆಯೇ ಬಿಗ್ಬಾಸ್ ಮನೆಯಿಂದ ಹೊರಗೆ ಹೋಗುತ್ತಾರೆ ಎಂದೆನಿಸಿಕೊಂಡಿದ್ದ ವರ್ತೂರು ಜನರ ಬೆಂಬಲದಿಂದ ಫಿನಾಲೆಯ ಹೊಸ್ತಿಲ ವರೆಗೆ ಬಂದು ನಿಂತಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಹಲವು ಏರಿಳಿತಗಳನ್ನು ಕಂಡಿರುವ ವರ್ತೂರು ಸಂತೋಷ್, ಫಿನಾಲೆಗೆ ಸಮೀಪ ಬಂದಾಗ ಭಾರಿ ವೇಗ ಪಡೆದುಕೊಂಡಿದ್ದಾರೆ. ಊಹಿಸದ ರೀತಿ ಮುಂದೆ ಸಾಗುತ್ತಿದ್ದಾರೆ.
ಈ ವಾರ ಟಿಕೆಟ್ ಟು ಫಿನಾಲೆ ಹೆಸರಿನಲ್ಲಿ ಮನೆಯ ಸ್ಪರ್ಧಿಗಳಿಗೆ ಬಿಗ್ಬಾಸ್ ಟಾಸ್ಕ್ಗಳನ್ನು ನೀಡುತ್ತಿದ್ದಾರೆ. ಸ್ಪರ್ಧಿಗಳು ಆಡುವ ಟಾಸ್ಕ್ ಆಧರಿಸಿ ಅವರಿಗೆ ಪಾಯಿಂಟ್ಸ್ಗಳನ್ನು ನೀಡಲಾಗುತ್ತಿದ್ದು, ಯಾರು ಹೆಚ್ಚು ಪಾಯಿಂಟ್ ಪಡೆಯುತ್ತಾರೆಯೋ ಅವರು ಫಿನಾಲೆಗೆ ನೇರ ಪ್ರವೇಶ ಪಡೆಯಲಿದ್ದಾರೆ. ಟಾಸ್ಕ್ ಆರಂಭವಾದಾಗ ಎಲ್ಲರೂ ಊಹಿಸಿದ್ದು, ವಿನಯ್, ಸಂಗೀತಾ, ಕಾರ್ತಿಕ್, ನಮ್ರತಾ, ಪ್ರತಾಪ್ ಅವರುಗಳು ಟಾಸ್ಕ್ನಲ್ಲಿ ಮುಂದೆ ಇರುತ್ತಾರೆ ಎಂದು ಆದರೆ ವರ್ತೂರು ತಮ್ಮ ಪ್ರದರ್ಶನದಿಂದ ಎಲ್ಲರಿಗೂ ಶಾಕ್ ನೀಡಿದ್ದಾರೆ.
ಟಾಸ್ಕ್ಗಳಲ್ಲಿ ಬಹಳ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ವರ್ತೂರು ಸಂತೋಷ್, ಮನೆಯಲ್ಲಿ ತಾವು ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಗೆ ಸಮಜಾಯಿಷಿಯನ್ನು ಸಹ ಪ್ರಬಲವಾಗಿಯೇ ನೀಡುತ್ತಿದ್ದಾರೆ. ಟಿಕೆಟ್ ಟು ಫಿನಾಲೆ ಟಾಸ್ಕ್ನಲ್ಲಿ ಬುಧವಾರದ ಎಪಿಸೋಡ್ನಲ್ಲಿ ಒಂದು ಹಂತದಲ್ಲಿ ಇಡೀ ಮನೆಯಲ್ಲಿ ಹೆಚ್ಚು ಅಂಕ ಪಡೆದ ಸ್ಪರ್ಧಿಯಾಗಿದ್ದರು. ಎರಡೆರಡು ಟಾಸ್ಕ್ಗಳನ್ನು ಗೆದ್ದರು. ಪ್ರತಾಪ್ ರ ಟಾಸ್ಕ್ಗೂ ಆಯ್ಕೆ ಆಗಿದ್ದರು ಆದರೆ ಗೆಲ್ಲುವಲ್ಲಿ ವಿಫಲವಾದರು. ತನಿಷಾ ನಾಯಕತ್ವದ ಟಾಸ್ಕ್ನಲ್ಲಿಯೂ ಆಡಿದರು. ಆದರೆ ಅಲ್ಲಿಯೂ ಸಫಲರಾಗಲಿಲ್ಲ.
ಇದನ್ನೂ ಓದಿ:ನೀವು ಅಂದುಕೊಂಡಂತೆ ಇಲ್ಲ ವರ್ತೂರು ಸಂತೋಷ್; ಹೊರಬಂತು ನೋಡಿ ಅಸಲಿ ಟ್ಯಾಲೆಂಟ್
ಕೆಲ ವಾರಗಳ ಹಿಂದಿನ ವರೆಗೂ ತುಕಾಲಿ ಸಂತು ಹೊರತಾಗಿ ಇನ್ಯಾರೊಟ್ಟಿಗೆ ಹೆಚ್ಚಾಗಿ ಬೆರೆಯದಿದ್ದ, ಟಾಸ್ಕ್ಗಳ ವಿಚಾರದಲ್ಲಿ ಹೆಚ್ಚು ಆಸಕ್ತಿಯೂ ತೋರದಿದ್ದ ವರ್ತೂರು ಸಂತೋಷ್ ಈ ವಾರ ಬಹಳ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದು, ಅಂಕಗಳೂ ಹೆಚ್ಚಿಗೆ ಗಳಿಸುತ್ತಿದ್ದಾರೆ. ಅವರು ಇದೇ ವೇಗದಲ್ಲಿ ಮುಂದೆ ಸಾಗಿದರೆ ಫಿನಾಲೆಗೆ ಪಕ್ಕಾ ತಲುಪುತ್ತಾರೆ ಎನ್ನಬಹುದು. ಮನೆಯ ಸದಸ್ಯರಾದ ತುಕಾಲಿ ಸಂತು ಹಾಗೂ ಕಾರ್ತಿಕ್ ಮಾತನಾಡುತ್ತಾ, ವರ್ತೂರು ಸಂತೋಷ್ಗೆ ಇರುವ ಜನಬೆಂಬಲ, ಈಗ ಇವರು ಆಡುತ್ತಿರುವ ರೀತಿ ನೋಡಿದರೆ ಫಿನಾಲೆ ತಲುಪಿಬಿಡುತ್ತಾರೇನೋ ಎಂದು ಹೇಳಿದರು. ಅವರು ಹೇಳಿದ್ದು ನಿಜವಾಗುವ ಸಾಧ್ಯತೆಯೂ ಇದೆ.
ವರ್ತೂರು ಸಂತು ಅವರ ಈವರೆಗಿನ ಬಿಗ್ಬಾಸ್ ಜರ್ನಿ ಬಹಳ ರೋಚಕವಾದುದು. ಬಿಗ್ಬಾಸ್ಗೆ ಹೋದ ಕೆಲವೇ ದಿನಗಳಲ್ಲಿ ಹುಲಿ ಉಗುರು ಪ್ರಕರಣದಲ್ಲಿ ಜೈಲು ಪಾಲಾದರು. ಅದಾದ ಬಳಿಕ ಜೈಲಿನಿಂದ ನೇರವಾಗಿ ಬಿಗ್ಬಾಸ್ ಮನೆಗೆ ಬಂದರು. ಅಲ್ಲಿಂದಲೂ ವಾಪಸ್ ಹೋಗುವ ಮಾತನಾಡಿದರು. ಹೊರಗೆ ಕಳಿಸುವಂತೆ ಕಣ್ಣೀರು ಹಾಕಿ ಕೇಳಿಕೊಂಡರು. ಬಳಿಕ ಅವರ ತಾಯಿಯವರು ಬಂದು ಅವರ ಮನವೊಲಿಸಿದರು. ಟಾಸ್ಕ್ ಆಡಲು ಅವಕಾಶಗಳು ಸಿಗದೆ ಕೊರಗಿದರು. ಸಿಕ್ಕ ಕಡಿಮೆ ಸ್ಕ್ರೀನ್ ಸ್ಪೇಸ್ನಲ್ಲಿಯೇ ಗಮನ ಸೆಳೆದು ಈಗ ಫಿನಾಲೆಗೆ ತಲುಪುವ ಹಂತಕ್ಕೆ ಬಂದು ನಿಂತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ