ಬಿಗ್ಬಾಸ್ ಕನ್ನಡ ಸೀಸನ್ 11ರ ಮೂರು ಸ್ಪರ್ಧಿಗಳನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ನಟಿ ಗೌತಮಿ ಜಾಧವ್, ಲಾಯರ್ ಜಗದೀಶ್ ಹಾಗೂ ಹಿಂದೂ ಕಾರ್ಯಕರ್ತೆ ಎಂದು ಹೆಸರಾಗಿದ್ದ ಚೈತ್ರಾ ಕುಂದಾಪುರ್ ಅವರು ಮೊದಲ ಮೂರು ಸ್ಪರ್ಧಿಗಳಾಗಿ ಬಿಗ್ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ. ಇದೀಗ ನಾಲ್ಕನೇ ಸ್ಪರ್ಧಿಯನ್ನು ಘೋಷಣೆ ಮಾಡಲಾಗಿದ್ದು, ಯಾರೂ ಊಹಿಸದ ಅಚ್ಚರಿಯ ಹೆಸರನ್ನು ಆಯೋಜಕರು ಘೋಷಣೆ ಮಾಡಿದ್ದಾರೆ.
ಕಳೆದ ಬಾರಿ ಮೈತುಂಬಾ ಚಿನ್ನ ಧರಿಸಿ ಬಿಗ್ಬಾಸ್ ಮನೆಗೆ ಹೋಗಿದ್ದ ವರ್ತೂರು ಸಂತೋಷ್, ಬಿಗ್ಬಾಸ್ ಮನೆಗೆ ಹೋದ ಬಳಿಕ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದರು. ಈಗ ಅದೇ ಮಾದರಿಯ ಸ್ಪರ್ಧಿಯೊಬ್ಬರನ್ನು ಆಯೋಜಕರು ಹುಡುಕಿ ತಂದಿದ್ದಾರೆ. ವರ್ತೂರು ಸಂತೋಷ್ ಮಾದರಿಯಲ್ಲಿಯೇ ಮೈಮೇಲೆ ಕೆಜಿಗಟ್ಟಲೆ ಚಿನ್ನ ಧರಿಸಿ, ಬಿಳಿ ಶರ್ಟ್, ಬಿಳಿ ಬಣ್ಣದ ಪ್ಯಾಂಟ್ ಧರಿಸಿರುವ ವ್ಯಕ್ತಿಯೊಬ್ಬರನ್ನು ಬಿಗ್ಬಾಸ್ನ ನಾಲ್ಕನೇ ಸ್ಪರ್ಧಿಯಾಗಿ ಘೋಷಣೆ ಮಾಡಿದ್ದಾರೆ. ಅಂದ ಹಾಗೆ ಈ ನಾಲ್ಕನೇ ಸ್ಪರ್ಧಿಯ ಹೆಸರು ಗೋಲ್ಡ್ ಸುರೇಶ್.
ಪ್ರೋಮೋನಲ್ಲಿ ಹೇಳಿರುವಂತೆ ಗೋಲ್ಡ್ ಸುರೇಶ್ ಅವರನ್ನು ಉತ್ತರ ಕರ್ನಾಟಕದ ಊರು. ಸಣ್ಣವರಿದ್ದಾಗ ಬಹಳ ತರ್ಲೆಯಾಗಿದ್ದ ಸುರೇಶ್ ಅವರನ್ನು ಊರಿಂದ ದೂರ ಇಟ್ಟು ಓದಿಸಲು ಪ್ರಾರಂಭಿಸಿದರಂತೆ. ಹತ್ತನೇ ತರಗತಿ ವರೆಗೂ ಓದಿದ ಸುರೇಶ್ ಆ ನಂತರ ಊರು ಬಿಟ್ಟು ಓಡಿ ಹೋಗಿದ್ದರಂತೆ. ಆ ನಂತರ ಅಲ್ಲಲ್ಲಿ ಕೆಲಸ ಮಾಡಿದ್ದಾರೆ. ಆರ್ಎಸ್ಎಸ್ ಕಾರ್ಯಕರ್ತರೂ ಆಗಿದ್ದಾರೆ. ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ, ಕನ್ಸ್ಟ್ರಕ್ಷನ್ ಸೂಪರ್ವೈಸರ್ ಆಗಿದ್ದಾರೆ. ಈಗ ಭಾರಿ ಶ್ರೀಮಂತರು ಆಗಿರುವುದಾಗಿ ಹೇಳಿಕೊಂಡಿರುವ ಸುರೇಶ್, ಸಣ್ಣ ವಯಸ್ಸಿನಲ್ಲಿ ಕಾರುಗಳ ಬಗ್ಗೆ ವಿಶೇಷ ಪ್ರೀತಿ ಇತ್ತು. ಈಗ ಹಲವು ಕಾರುಗಳನ್ನು ಇಟ್ಟುಕೊಂಡಿದ್ದೇನೆ. ಚಿನ್ನದ ಬಗ್ಗೆ ನನಗೆ ವಿಶೇಷ ಪ್ರೀತಿ, ಒಂದು ಸಣ್ಣ ಲಕ್ಷ್ಮಿ ಡಾಲರ್ ಅನ್ನು ಧರಿಸಲು ಪ್ರಾರಂಭ ಮಾಡಿದೆ. ಈಗ ಎಲ್ಲ ರೀತಿಯ ಡಿಸೈನ್ನ ಚಿನ್ನ ನನ್ನ ಬಳಿ ಇದೆ’ ಎಂದಿದ್ದಾರೆ.
ಇದನ್ನೂ ಓದಿ:ಬಿಗ್ಬಾಸ್ ಕನ್ನಡದ ಮೂರನೇ ಸ್ಪರ್ಧಿ ಘೋಷಣೆ: ಇವರಿಗೆ ಮೈಕ್, ಜೈಲು ಎರಡೂ ಹೊಸದಲ್ಲ
ಖಾಸಗಿ ಜೀವನದ ಬಗ್ಗೆ ಮಾತನಾಡಿರುವ ಗೋಲ್ಡ್ ಸುರೇಶ್, ನನ್ನ ಪತ್ನಿ ಚೆನ್ನಾಗಿ ಓದಿಕೊಂಡಿದ್ದಾರೆ. ಅವರು ಶಿಕ್ಷಣದ ಹಿನ್ನೆಲೆಯಿಂದಲೇ ಬಂದವರು, ನಾನು ಕಡಿಮೆ ಓದಿದ್ದೀನಿ ಆದರೂ ಸಹ ಅವರು ನನ್ನನ್ನು ಮದುವೆ ಆದರು. ಅವರಿಗೆ ಹೀಗೆಲ್ಲ ಚಿನ್ನ ಧರಿಸಿಕೊಂಡು ಓಡಾಡುವುದು, ಹೊಸ ಕಾರುಗಳನ್ನು ತೆಗೆದುಕೊಳ್ಳುವುದು ಎಲ್ಲ ಇಷ್ಟವಾಗುವುದಿಲ್ಲ, ಆದರೆ ನನಗೆ ಇಷ್ಟ ಎಂಬ ಕಾರಣಕ್ಕೆ ಏನೂ ಹೇಳುವುದಿಲ್ಲ. ನನಗೆ ಒಂದು ಹೆಣ್ಣು ಮಗು ಇದೆ. ಹೆಣ್ಣು ಮಗುವೇ ಬೇಕೆಂದು ನಾನು ಕೋರಿಕೊಂಡಿದ್ದೆ ಹಾಗೆ ಹೆಣ್ಣು ಮಗು ಆಗಿದೆ. ಬಿಗ್ಬಾಸ್ ಮನೆಯಲ್ಲಿ ದೊಡ್ಡ ತಿಮಿಂಗಲಗಳು ಇರುತ್ತವೆ, ನಮಗೆ ಅವಕಾಶ ಸಿಗುವುದಿಲ್ಲ ಎಂದುಕೊಂಡಿದ್ದೆ. ಆದರೆ ಅವಕಾಶ ಸಿಕ್ಕಿದೆ. ಅಲ್ಲಿಗೆ ಹೋಗಿ ನಮ್ಮ ತನ ಏನು ಅನ್ನೋದು ತೋರಿಸಬೇಕು, ಹೊರಗೆ ಹಲವರ ವಿರುದ್ಧ ಗೆದ್ದಿದ್ದೀನಿ ಒಳಗೆ ಗೆಲ್ಲುತ್ತೀನಿ’ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಗೋಲ್ಡ್ ಸುರೇಶ್ ಇನ್ಸ್ಟಾಗ್ರಾಂ ನೋಡಿದರೆ ಕೆಲವು ರಾಜಕಾರಣಿಗಳ ಜೊತೆಗೆ ಫೋಟೊ, ವಿಡಿಯೋಗಳನ್ನು ಹಾಕಿದ್ದಾರೆ. ಕಳೆದ ಬಿಗ್ಬಾಸ್ನ ಸ್ಪರ್ಧಿ ನೀತು ಜೊತೆಗೆ ಕೆಲವು ವಿಡಿಯೋಗಳನ್ನು ಹಾಕಿದ್ದಾರೆ. ಜೀ ಕನ್ನಡದ ಯುವರತ್ನ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ವಿಡಿಯೋ ಸಹ ಅವರ ಇನ್ಸ್ಟಾಗ್ರಾಂನಲ್ಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:09 pm, Sat, 28 September 24