Sangeetha Bhat Profile: ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದ ಸಂಗೀತಾ ಈಗ ಬಿಗ್‌ಬಾಸ್ ಮನೆಗೆ
Bigg Boss Kannada Season 13: ಬಿಗ್‌ಬಾಸ್ ಕನ್ನಡ ಸೀಸನ್ 13ಕ್ಕೆ ಸ್ಪರ್ಧಿಯಾಗಿ ಬೋಲ್ಡ್ ಪಾತ್ರಗಳ ಮೂಲಕ ಗಮನ ಸೆಳೆದಿರುವ ನಟಿ ಸಂಗೀತಾ ಭಟ್ ಎಂಟ್ರಿ ಕೊಟ್ಟಿದ್ದಾರೆ. ಸಂಗೀತಾ ಭಟ್, ಹಲವಾರು ವರ್ಷಗಳಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಲವಾರು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಸಂಗೀತಾ ಭಟ್ ಅವರು ನಟನೆ ಮಾಡಿದ್ದಾರೆ. ಇದೀಗ ಬಿಗ್ಬಾಸ್ಗೆ ಬಂದಿದ್ದಾರೆ.

ಸಂಗೀತಾ ಭಟ್, ಕನ್ನಡ ಸಿನಿಮಾ ಪ್ರಿಯರಿಗೆ ಬಹಳ ಪರಿಚಿತ ಹೆಸರು. ದಶಕದಿಂದಲೂ ಅವರು ಕನ್ನಡ ಸಿನಿಮಾ ಮತ್ತು ಟಿವಿ ಲೋಕದ ಜೊತೆಗೆ ನಂಟು ಹೊಂದಿದ್ದಾರೆ. ಹಲವಾರು ಮನೊರಂಜನಾ ಕ್ಷೇತ್ರದಲ್ಲಿರುವ ಸಂಗೀತಾ ಭಟ್ ಅವರ ವೃತ್ತಿ ಜೀವನ ಸಾಕಷ್ಟು ಏಳು-ಬೀಳುಗಳನ್ನು ಕಂಡಿದೆ. ಒಂದು ಸಮಯದಲ್ಲಂತೂ ಸಿನಿಮಾ ಬದುಕಿನಿಂದ ರೋಸಿ ಹೋಗಿ ಚಿತ್ರರಂಗದಿಂದ ದೂರವೇ ಉಳಿದು ಬಿಟ್ಟಿದ್ದರು. ಆದರೆ ಮರಳಿ ಕಮ್ ಬ್ಯಾಕ್ ಮಾಡಿದ್ದು ಮಾತ್ರವಲ್ಲದೆ ಈಗ ಬಿಗ್‌ಬಾಸ್ ಮನೆಗೂ ಬಂದಿದ್ದಾರೆ. ಸಂಗೀತಾ ಭಟ್ ಅವರು ಬಿಗ್‌ಬಾಸ್ ಮನೆಯ ಒಳಗೆ ಹೋಗುತ್ತಿರುವ ಪ್ರೋಮೊ ಅನ್ನು ಕಲರ್ಸ್ ಈಗಾಗಲೇ ಹಂಚಿಕೊಂಡಿದೆ. ಆ ಮೂಲಕ ಸಂಗೀತಾ ಭಟ್ ಬಿಗ್‌ಬಾಸ್ ಎಂಟ್ರಿ ಅಧಿಕೃತವಾಗಿದೆ.
ತಮ್ಮ ಬೋಲ್ಡ್ ಪಾತ್ರಗಳು, ಬೋಲ್ಡ್ ಫೋಟೊಶೂಟ್ಗಳಿಂದ ಸಾಕಷ್ಟು ಸುದ್ದಿಯಲ್ಲಿದ್ದ, ಸದ್ದು ಮಾಡಿದ್ದ ನಟಿ ಸಂಗೀತಾ ಭಟ್. ಬಹಳ ಹಿಂದೆಯೇ ಸಂಗೀತಾ ಭಟ್ ಅವರು ಬಿಗ್‌ಬಾಸ್ ಮನೆಗೆ ಬರಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು, ಆದರೆ ಈಗ ಕೊನೆಗೂ ಅವರು ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ, ಮಾತುಗಳಲ್ಲೂ, ವ್ಯಕ್ತಿತ್ವದಲ್ಲೂ ಬೋಲ್ಡ್ ಆಗಿರುವ ಸಂಗೀತಾ ಭಟ್, ಬಿಗ್‌ಬಾಸ್ ಯಲ್ಲಿ ಹೇಗಿರುತ್ತಾರೆ ಎಂಬುದು ಅಭಿಮಾನಿಗಳಿಗೆ ಕುತೂಹಲ.
ಸಂಗೀತಾ ಭಟ್, ಟಿವಿ ಮತ್ತು ಸಿನಿಮಾ ಎರಡರಲ್ಲೂ ಸಕ್ರಿಯರಾಗಿದ್ದವರು. ಸುಮಾರು 16-17 ವರ್ಷಗಳಿಂದಲೂ ಸಂಗೀತಾ ಭಟ್ ಮನೊರಂಜನಾ ಕ್ಷೇತ್ರದಲ್ಲಿದ್ದಾರೆ. ತಂದೆ ಹಾಗೂ ತಾಯಿಯ ಬೆಂಬಲ ಹೊಂದಿದ್ದ ಸಂಗೀತಾ ಭಟ್ ಅವರು ‘ಮಣ್ಣಿನ ಮಡಿಲು’ ಹೆಸರಿನ ಕಲಾತ್ಮಕ ಸಿನಿಮಾನಲ್ಲಿ ನಟಿಸುವ ಮೂಲಕ ನಟನೆಗೆ ಕಾಲಿರಿಸಿದರು. ಬಳಿಕ ‘ಸನಿಹ’ ಹೆಸರಿನ ಮ್ಯೂಸಿಕ ಆಲ್ಬಂ ಮಾಡಿದರು. ಬಳಿಕ ಭಾರತಿ ವಿಷ್ಣುವರ್ಧನ್ ಮುಖ್ಯ ಪಾತ್ರದಲ್ಲಿದ್ದ ‘ಭಾಗ್ಯವಂತರು’ ಧಾರಾವಾಹಿಯಲ್ಲಿ ನಟನೆ ಮಾಡಿದರು. ಹೀಗೆ ಒಂದೊಂದೆ ಮೆಟ್ಟಿಲುಗಳನ್ನು ಏರುತ್ತಾ ಹೋದರು ನಟಿ.
ಇದನ್ನೂ ಓದಿ:ಬಿಗ್‌ಬಾಸ್ ‘ಅಗ್ನಿಪರೀಕ್ಷೆ’ಯಲ್ಲಿ ಗಲಾಟೆ: ‘ವಿನಯ್ ಗೌಡ ಅಲ್ಲಿರೋದಕ್ಕೆ ಲಾಯಕ್ಕಿಲ್ಲ’ ಎಂದ ಸ್ಪರ್ಧಿ
‘ಮಾಮೂ ಟೀ ಅಂಗಡಿ’ ಬಳಿಕ ಯೋಗರಾಜ್ ಭಟ್ ಪ್ರಸ್ತುತ ಪಡಿಸಿದ್ದ ‘ಪ್ರೀತಿ, ಗೀತಿ, ಇತ್ಯಾದಿ’, ವಿಜಯ್ ರಾಘವೇಂದ್ರ ನಟಿಸಿದ್ದ ‘ಕಿಸ್ಮತ್’ ಆರಂಭದಲ್ಲಿ ಸಂಗೀತಾ ಭಟ್ ನಟಿಸಿದ ಸಿನಿಮಾಗಳು. ಕನ್ನಡ ಮಾತ್ರವೇ ಅಲ್ಲದೆ ತೆಲುಗು ಹಾಗೂ ತಮಿಳು ಭಾಷೆ ಸಿನಿಮಾಗಳಲ್ಲಿಯೂ ಸಂಗೀತಾ ಭಟ್ ನಟನೆ ಮಾಡಿದ್ದಾರೆ. ತಮಿಳಿನ ‘ಡೂ’, ‘ಕಾ ಕಾ ಕಾ’, ತೆಲುಗಿನ ‘ಕಾಕಿ’ ಇನ್ನೂ ಕೆಲ ಸಿನಿಮಾಗಳಲ್ಲಿ ಅವರು ನಟನೆ ಮಾಡಿದ್ದಾರೆ.
ಡಾಲಿ ಧನಂಜಯ್ ಜೊತೆಗೆ ‘ಎರಡನೇ ಸಲ’, ‘ದಯವಿಟ್ಟು ಗಮನಿಸಿ’ ಇನ್ನೂ ಕೆಲ ಸಿನಿಮಾಗಳು ಅವರಿಗೆ ಹೆಸರು ತಂದುಕೊಟ್ಟವು. ಸಾಕಷ್ಟು ಬೋಲ್ಡ್ ಪಾತ್ರಗಳಲ್ಲಿ ಸಹ ಸಂಗೀತಾ ಭಟ್ ಅವರು ನಟನೆ ಮಾಡಿದ್ದಾರೆ. ಅವರ ಬೋಲ್ಡ್ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಆದರೆ ಅವರ ಬೋಲ್ಡ್ನೆಸ್ಗೆ ಕೆಟ್ಟ ಕಮೆಂಟುಗಳ ಸುರಿಮಳೆಯಾದಾಗ ತೀವ್ರ ಬೇಸರ ಹೊರಹಾಕಿದ್ದ ನಟಿ, ಚಿತ್ರರಂಗದಿಂದಲೇ ದೂರ ಉಳಿದಬಿಟ್ಟಿದ್ದರು.
ಆದರೆ ಪತಿ ಸುದರ್ಶನ್ ಹಾಗೂ ಆತ್ಮೀಯರ ಒತ್ತಾಸೆಯ ಮೇರೆಗೆ ಮತ್ತೆ ಕಮ್ ಬ್ಯಾಕ್ ಮಾಡಿದ ಸಂಗೀತಾ ಭಟ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿ, ಇದು ನನ್ನ ಎರಡನೇ ಇನ್ನಿಂಗ್ಸ್ ಎಂದಿದ್ದರು. ತಮ್ಮ ಎರಡನೇ ಇನ್ನಿಂಗ್ಸ್ ನಲ್ಲಿಯೇ ಅವರು ಬಿಗ್‌ಬಾಸ್ ಮನೆಗೆ ಸಹ ಎಂಟ್ರಿ ಕೊಟ್ಟಿದ್ದು, ಬಿಗ್‌ಬಾಸ್ ವಾತಾವರಣಕ್ಕೆ ಹೇಗೆ ಹೊಂದಿಕೊಳ್ಳುತ್ತಾರೆ. ಹೇಗೆ ಆಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




